ಬಸವನಗುಡಿಯಲ್ಲಿ ಸೆಂಟ್ರಿಂಗ್‌ ಮರದ ತುಂಡು ಕುಸಿದು ಬಾಲಕಿ ಸಾವು : ಗುತ್ತಿಗೆದಾರನ ಸೆರೆ

| Published : Jan 06 2025, 02:01 AM IST / Updated: Jan 06 2025, 04:14 AM IST

deadbody

ಸಾರಾಂಶ

ಶನಿವಾರ ಬಸವನಗುಡಿಯಲ್ಲಿ ನಿರ್ಮಾಣ ಹಂತದ ವಾಣಿಜ್ಯ ಕಟ್ಟಡದ ಸೆಂಟ್ರಿಂಗ್‌ಗೆ ಅಳವಡಿಸಿದ್ದ ಮರದ ತುಂಡು ಬಿದ್ದು ಬಾಲಕಿ ಸಾವಿಗೀಡಾದ ಪ್ರಕರಣ ಸಂಬಂಧ ಕಟ್ಚಡದ ಗುತ್ತಿಗೆದಾರನನ್ನು ವಿ.ವಿ.ಪುರ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

 ಬೆಂಗಳೂರು : ಶನಿವಾರ ಬಸವನಗುಡಿಯಲ್ಲಿ ನಿರ್ಮಾಣ ಹಂತದ ವಾಣಿಜ್ಯ ಕಟ್ಟಡದ ಸೆಂಟ್ರಿಂಗ್‌ಗೆ ಅಳವಡಿಸಿದ್ದ ಮರದ ತುಂಡು ಬಿದ್ದು ಬಾಲಕಿ ಸಾವಿಗೀಡಾದ ಪ್ರಕರಣ ಸಂಬಂಧ ಕಟ್ಚಡದ ಗುತ್ತಿಗೆದಾರನನ್ನು ವಿ.ವಿ.ಪುರ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಬಸವನಗುಡಿಯ ಚಂದ್ರಶೇಖರ್ ಬಂಧಿತನಾಗಿದ್ದು, ಇದೇ ಪ್ರಕರಣದಲ್ಲಿ ಕಟ್ಟಡದ ಮಾಲೀಕ ಹರ್ಷ ಸೇರಿದಂತೆ ಇತರರಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಸವನಗುಡಿಯ ನ್ಯಾಷನಲ್ ಕಾಲೇಜು ಸಮೀಪದ ಖಾಸಗಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ತೇಜಸ್ವಿನಿ ಶನಿವಾರ ಮಧ್ಯಾಹ್ನ 12ರ ಸುಮಾರಿಗೆ ನಡೆದುಕೊಂಡು ಮನೆಗೆ ಮರಳುವಾಗ ಈ ದುರ್ಘಟನೆ ನಡೆದಿತ್ತು. ಮೃತ ಬಾಲಕಿ ತಂದೆ ನೀಡಿದ ದೂರಿನ ಮೇರೆಗೆ ಕಟ್ಟಡದ ಮಾಲೀಕ ಹಾಗೂ ಗುತ್ತಿಗೆದಾರ ಸೇರಿದಂತೆ ಇತರರ ವಿರುದ್ಧ ನಿರ್ಲಕ್ಷ್ಯತನ ಆರೋಪದ ಮೇರೆಗೆ ಎಫ್‌ಐಆರ್ ದಾಖಲಾಗಿತ್ತು. ತಮ್ಮ ಸ್ನೇಹಿತರ ಜತೆ ವಾಣಿಜ್ಯ ಕಟ್ಟಡವನ್ನು ಪಾಲುದಾರಿಕೆಯಲ್ಲಿ ಹರ್ಷ ನಿರ್ಮಿಸುತ್ತಿದ್ದರು ಎಂಬ ಮಾಹಿತಿ ಇದೆ. ಹೀಗಾಗಿ ಸೂಕ್ತ ದಾಖಲೆ ಸಮೇತ ವಿಚಾರಣೆಗೆ ಹಾಜರಾಗುವಂತೆ ಮಾಲಿಕನಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆ: ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ತೇಜಸ್ವಿನಿ ಕುಟುಂಬದವರಿಗೆ ಪೊಲೀಸರು ಹಸ್ತಾಂತರಿಸಿದರು. ಈ ಅನಾಹುತಕ್ಕೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಮೃತಳ ಕುಟುಂಬದವರು ಆಗ್ರಹಿಸಿದ್ದಾರೆ.