ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಚಿನ್ನಾಭರಣ ಅಂಗಡಿಗಳು ಹಾಗೂ ಜಾತ್ರೆಗಳಲ್ಲಿ ಜನರ ಗಮನ ಬೇರೆಡೆ ಸೆಳೆದು ಆಭರಣ ಕಳವು ಮಾಡುವುದನ್ನು ವೃತ್ತಿಯಾಗಿಸಿಕೊಂಡಿದ್ದ ಸೋದರ ಸಂಬಂಧಿಗಳು ಈಗ ಪೊಲೀಸರಿಗೆ ಸಿಕ್ಕಿಬಿದ್ದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕಂಬಿ ಎಣಿಸುವಂತಾಗಿದೆ.
ಚಿತ್ರದುರ್ಗ ಜಿಲ್ಲೆ ಭರಮಸಾಗರದ ದುರ್ಗಾಂಬಿಕಾ ಬಡಾವಣೆಯ ಚಮನ್ ಸಾಬ್ ಅಲಿಯಾಸ್ ಚಮನ್, ಜುಬೇರ ಅಲಿಯಾಸ್ ಫಾತಿಮಾ, ಶೌಕತ್, ಪ್ಯಾರಿ, ಜೈತುಂಬಿ ಅಲಿಯಾಸ್ ಮುನ್ನಾ ಹಾಗೂ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಬೈಲಪ್ಪನ ಮಠದ ನಾನಾವಲಿ ಬಂಧಿತರಾಗಿದ್ದು, ಆರೋಪಿಗಳಿಂದ ₹16 ಲಕ್ಷ ಮೌಲ್ಯದ 383 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ಕೆಲ ದಿನಗಳ ಹಿಂದೆ ಕುಮಾರಸ್ವಾಮಿ ಲೇಔಟ್‌ನ ಗಣಪತಿ ದೇವಾಲಯದ ‘ಮಹಾಲಕ್ಷ್ಮೀ ಜ್ಯುವೆಲರ್ಸ್’ ಮಳಿಗೆಗೆ ಗ್ರಾಹಕರ ಸೋಗಿನಲ್ಲಿ ಚಿನ್ನ ಖರೀದಿಗೆ ತೆರಳಿ ಆಭರಣ ಕಳವು ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದರು.
ಈ ಬಗ್ಗೆ ಕುಮಾರಸ್ವಾಮಿ ಲೇಔಟ್ ಠಾಣೆಗೆ ಆ ಮಳಿಗೆ ಮಾಲೀಕ ರಾಕೇಶ್ ದೂರು ನೀಡಿದರು. ಅದರನ್ವಯ ತನಿಖೆ ನಡೆಸಿದ ಇನ್‌ಸ್ಪೆಕ್ಟರ್ ಜಗದೀಶ್ ಹಾಗೂ ಸಬ್ ಇನ್‌ಸ್ಪೆಕ್ಟರ್ ರಾಜೇಶ್ ನೇತೃತ್ವದ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಣಕ್ಕಾಗಿ ಕಳ್ಳರಾದ ಸಂಬಂಧಿಕರು
ಚಿತ್ರದುರ್ಗ ಜಿಲ್ಲೆಯ ಈ ಆರೋಪಿಗಳೆಲ್ಲ ಸೋದರ ಸಂಬಂಧಿಗಳಾಗಿದ್ದು, ಸುಲಭವಾಗಿ ಹಣ ಸಂಪಾದನೆಗೆ ಅವರು ಕಳ್ಳತನಕ್ಕಿಳಿದಿದ್ದರು. ಈ ಆರೋಪಿಗಳ ಪೈಕಿ ನಾವಾವಲಿ ಈ ಹಿಂದೆ ಕಳ್ಳತನ ಪ್ರಕರಣದಲ್ಲಿ ಒಮ್ಮೆ ಪೊಲೀಸರಿಗೆ ಸೆರೆಯಾಗಿ ಜೈಲೂಟ ಸವಿದಿದ್ದ. ಇನ್ನುಳಿದವರು ಇದೇ ಮೊದಲ ಬಾರಿಗೆ ಜೈಲು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಿಂಗಳಿಗೆ ಎರಡು ಬಾರಿ ಕಾರಿನಲ್ಲಿ ಬೆಂಗಳೂರಿಗೆ ಬರುತ್ತಿದ್ದ ಸಂಬಂಧಿಗಳು, ಚಿನ್ನಾಭರಣ ಅಂಗಡಿ ಹಾಗೂ ಜಾತ್ರೆಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದರು. ಆಭರಣ ಅಂಗಡಿಗೆ ಚಿನ್ನ ಖರೀದಿ ನೆಪದಲ್ಲಿ ಈ ತಂಡ ಮಹಿಳೆಯರು ತೆರಳುತ್ತಿದ್ದರು. ಆಗ ಅಂಗಡಿ ಕೆಲಸಗಾರರರ ಗಮನ ಬೇರೆಡೆ ಸೆಳೆದು ಕಡಿಮೆ ಬೆಲೆಯ ಒಡವೆ ಕಳವು ಮಾಡಿ ಕಾಲ್ಕಿಳುತ್ತಿದ್ದರು. ಜಾತ್ರೆಗಳಲ್ಲಿ ಮಹಿಳೆಯರ ಗುಂಪುಗಳಲ್ಲಿ ನಸುಳಿ ಆ ಮಹಿಳೆಯರಿಗೆ ಗೊತ್ತಾಗದಂತೆ ಆರೋಪಿಗಳು ಚಿನ್ನದ ಸರ ದೋಚುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸಿಕ್ಕಿಬಿದ್ದಿದ್ದು ಹೇಗೆ?
ಎಂದಿನಂತೆ ಫೆ.21ರಂದು ನಗರಕ್ಕೆ ತಮ್ಮ ಒಮ್ನಿಯಲ್ಲಿ ಈ ಖದೀಮರ ತಂಡ ಬಂದಿದೆ. ಅಂದು ಕುಮಾರಸ್ವಾಮಿ ಲೇಔಟ್‌ನಲ್ಲಿ ಮಹಾಲಕ್ಷ್ಮೀ ಜ್ಯುವೆಲರ್ಸ್‌ಗೆ ಗ್ರಾಹಕರಂತೆ ಫಾತಿಮಾ ಹಾಗೂ ಪ್ಯಾರಿ ತೆರಳಿ ಆಭರಣ ಕದ್ದು ಪರಾರಿಯಾಗಿದ್ದರು. ಈ ಕೃತ್ಯದ ತನಿಖೆಗಿಳಿದ ಪೊಲೀಸರು, ಅಂಗಡಿ ಹಾಗೂ ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಕಾರಿನ ನೋಂದಣಿ ಸಂಖ್ಯೆ ಪತ್ತೆಯಾಯಿತು. ಈ ಸುಳಿವು ಆಧರಿಸಿ ಕಾರ್ಯಾಚರಣೆಗಿಳಿದ ಖದೀಮರ ತಂಡ ಗಾಳಕ್ಕೆ ಬಿತ್ತು. ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ 8 ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
‘ಮಾರಾಟ ಮಾಡಿ ಹಣ ಹಂಚಿಕೊಳ್ಳುತ್ತಿದ್ದೆವು’
ಊರಿನಿಂದ ಬೆಂಗಳೂರಿಗೆ ತಿಂಗಳಿಗೆ ಎರಡು ಬಾರಿ ದುಡಿಮೆಗೆ ಬರ್ತಾ ಇದ್ವೀ. ತಲಾ ಒಬ್ಬರಿಗೆ 15 ರಿಂದ 20 ಸಾವಿರ ರು. ಸಿಗೋದು. ಕಳವು ಮಾಡಿ ಆಭರಣ ಮಾರಾಟ ಮಾಡಿ ಹಣ ಹಂಚಿಕೊಳ್ಳುತ್ತಿದ್ದೀವಿ ಎಂದು ವಿಚಾರಣೆ ವೇಳೆ ಆರೋಪಿಗಳು ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ.
)
)
;Resize=(128,128))
;Resize=(128,128))
;Resize=(128,128))
;Resize=(128,128))