ಗಿಟಾರ್‌ ಕಲಿಯಲು ಬಂದು ಗಾಂಜಾ ಮಾರುತ್ತಿದ್ದ!

| Published : Mar 13 2024, 02:00 AM IST / Updated: Mar 13 2024, 07:27 AM IST

drugs

ಸಾರಾಂಶ

ಡ್ರಗ್ಸ್‌ ದಂಧೆ ನಡೆಸುತ್ತಿದ್ದ ಮೂವರು ವಿದೇಶಿ ಪ್ರಜೆಗಳು ಸೇರಿದಂತೆ ಆರು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ₹44 ಲಕ್ಷ ಮೌಲ್ಯದ ಡ್ರಗ್ಸ್‌ ಜಪ್ತಿ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದ ಮೂವರು ವಿದೇಶಿ ಪ್ರಜೆಗಳು ಸೇರಿದಂತೆ ಆರು ಮಂದಿಯನ್ನು ಸಿಸಿಬಿ ಪೊಲೀಸರು ಪ್ರತ್ಯೇಕವಾಗಿ ಬಂಧಿಸಿದ್ದಾರೆ.

ನೈಜೀರಿಯಾ ಪ್ರಜೆ ಜಸ್ಟೀಸ್‌, ಜೋಚಿನ್ ಒನೆಬುಚಿ, ನ್ವೋಯೆ ಬೆಂಜಮಿನ್ ಒಬಿನ್ನಾ, ಡಿಶಾ ದೇಬೇಂದ್ರ ನಾಯಕ್‌, ಲಾಲಮ್ ಪ್ರೂದ್ವಿರಾಜ್‌, ಕೇರಳದ ಸಾಮ್ಯುಯಲ್ ಜಾನ್‌ ಬಂಧಿತರಾಗಿದ್ದು, ಆರೋಪಿಗಳಿಂದ 54 ಗ್ರಾಂ ಎಡಿಎಂಎ ಕ್ರಿಸ್ಟೆಲ್‌, 410 ಗ್ರಾಂ ಹೈಡ್ರೋ ಗಾಂಜಾ, 18 ಕೇಜಿ ಗಾಂಜಾ ಸೇರಿದಂತೆ ₹44 ಲಕ್ಷ ಮೌಲ್ಯದ ಡ್ರಗ್ಸ್ ಹಾಗೂ 4 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ.

ಹಲವು ದಿನಗಳಿಂದ ಪ್ರತ್ಯೇಕವಾಗಿ ಈ ಆರು ಮಂದಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಯಲಹಂಕ, ಕೆಂಪೇಗೌಡನಗರ (ಕೆಜಿ ನಗರ), ರಾಮಮೂರ್ತಿ ನಗರ, ಹೆಣ್ಣೂರು ಹಾಗೂ ರಾಜಗೋಪಾಲನಗರ ಠಾಣೆಗಳ ವ್ಯಾಪ್ತಿ ಸಿಸಿಬಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ ಎಂದು ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಖಾಸಗಿ ಕಂಪನಿಯಲ್ಲಿ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕನಾಗಿ ಲಾಲಮ್ ಕೆಲಸ ಮಾಡುತ್ತಿದ್ದು, ಯಲಹಂಕ ಸಮೀಪ ಆತ ವಾಸವಾಗಿದ್ದ. ಹೊರ ರಾಜ್ಯಗಳಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ನಗರದಲ್ಲಿ ಆತ ದುಬಾರಿ ಬೆಲೆಗೆ ಮಾರುತ್ತಿದ್ದ. ಈತನ ಬಳಿ ₹8 ಲಕ್ಷ ಮೌಲ್ಯದ 8.1 ಕೇಜಿ ಗಾಂಜಾ ಜಪ್ತಿಯಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಅದೇ ರೀತಿ ಗಿಟಾರ್ ಕಲಿಯಲು ನಗರಕ್ಕೆ ಬಂದಿದ್ದ ಕೇರಳ ಮೂಲದ ಸಾಮ್ಯುಯಲ್‌ ಜಾನ್‌, ವಿದೇಶದಿಂದ ಕೊರಿಯರ್ ಮೂಲಕ ಹೈಡ್ರೋ ಗಾಂಜಾ ತರಿಸಿಕೊಂಡು ನಗರದಲ್ಲಿ ಮಾರಾಟ ಮಾಡುತ್ತಿದ್ದ. ವಿದೇಶದಿಂದ ಗಾಂಜಾ ತರಿಸಿಕೊಳ್ಳುವಾಗ ಜಾನ್‌ ತಪ್ಪು ವಿಳಾಸ ನೀಡುತ್ತಿದ್ದ. ಆದರೆ ಆನ್‌ಲೈನ್‌ನಲ್ಲಿ ಕೊರಿಯರ್ ಮೇಲೆ ನಿಗಾವಹಿಸಿದ್ದ ಆರೋಪಿ, ಅಂಚೆ ಸ್ವೀಕರಿಸದೆ ಮರಳಿ ಕಚೇರಿಗೆ ಹಿಂತಿರುಗಿದ ಬಳಿಕ ಅಲ್ಲಿಗೆ ಹೋಗಿ ಕೊರಿಯರ್ ತೆಗೆದುಕೊಳ್ಳುತ್ತಿದ್ದ. ಈತನ ಬಗ್ಗೆ ಖಚಿತ ಮಾಹಿತಿ ಪಡೆದು ಪೆಡ್ಲರ್‌ನನ್ನು ಸಿಸಿಬಿ ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಗಾಂಜಾ ಮಾರುತ್ತಿದ್ದ

ಸ್ವಿಗ್ಗಿ ಡೆಲವರಿ ಬಾಯ್‌

ನಗರದಲ್ಲಿ ಸ್ವಿಗ್ಗಿ ಡೆಲವರಿ ಬಾಯ್ ಆಗಿ ದುಡಿಯುತ್ತಿದ್ದ ಒಡಿಶಾ ರಾಜ್ಯದ ದೇಬೇಂದ್ರ ನಾಯಕ್‌, ತನ್ನೂರಿನಿಂದ ಅಕ್ರಮವಾಗಿ ಗಾಂಜಾ ತಂದು ನಗರದಲ್ಲಿ ಮಾರುತ್ತಿದ್ದ. ಈತನ ಬಳಿ ₹6 ಲಕ್ಷ ಮೌಲ್ಯದ 9.9 ಕೇಜಿ ಗಾಂಜಾ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪೊಲೀಸರ ಮೇಲೆಯೇ

ವಿದೇಶಿ ಪೆಡ್ಲರ್‌ ಗಲಾಟೆ

ತನ್ನನ್ನು ಬಂಧಿಸಲು ಬಂದ ಸಿಸಿಬಿ ಪೊಲೀಸರ ಮೇಲೆಯೇ ನೈಜೀರಿಯಾ ದೇಶದ ಪೆಡ್ಲರ್ ಜಸ್ಟಿಸ್‌ ಗಲಾಟೆ ಮಾಡಿದ ಘಟನೆ ನಡೆದಿದೆ. ಹೆಣ್ಣೂರು ಸಮೀಪ ನೆಲೆಸಿದ್ದ ಆತನ ಮನೆ ಮೇಲೆ ಸಿಸಿಬಿ ದಾಳಿ ನಡೆಸಿದೆ. ಆಗ ಪೊಲೀಸರಿಗೆ ಆತ ತೀವ್ರ ವಿರೋಧಿಸಿದ್ದಾನೆ. ಕೆಲ ಹೊತ್ತಿನ ಹೈಡ್ರಾಮಾ ಬಳಿಕ ಕೊನೆಗೂ ಜಸ್ಟೀಸ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

5 ವರ್ಷಗಳ ಹಿಂದೆ ಬ್ಯುಸಿನೆಸ್ ವೀಸಾದಡಿ ನಗರಕ್ಕೆ ಬಂದಿದ್ದ ಆರೋಪಿ, ತನ್ನ ಸೋದರನ ಜತೆ ಸೇರಿಕೊಂಡು ನಗರದಲ್ಲಿ ಡ್ರಗ್ಸ್ ದಂಧೆ ನಡೆಸುತ್ತಿದ್ದ. ಈ ಪೆಡ್ಲರ್‌ನಿಂದ 54 ಗ್ರಾಂ ಎಡಿಎಂಎ ಕ್ರಿಸ್ಟೆಲ್‌ ಜಪ್ತಿ ಮಾಡಲಾಗಿದೆ. ತಪ್ಪಿಸಿಕೊಂಡಿರುವ ಆತನ ಸೋದರನ ಪತ್ತೆಗೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಅಕ್ರಮವಾಗಿ ನೆಲೆಸಿದ್ದರೂ

ವಿದೇಶಿಗರ ಡ್ರಗ್ಸ್‌ ದಂಧೆ

ಇನ್ನು ರಾಮಮೂರ್ತಿ ನಗರದಲ್ಲಿ ಮತ್ತಿಬ್ಬರು ವಿದೇಶಿ ಪ್ರಜೆಗಳು ಸಿಸಿಬಿ ಗಾಳಕ್ಕೆ ಸಿಲುಕಿದ್ದಾರೆ. ವೃತ್ತಿಪರ ಪೆಡ್ಲರ್‌ಗಳಾಗಿದ್ದ ಜೋಚಿನ್ ಒನೆಬುಚಿ, ನ್ವೋಯೆ ಬೆಂಜಮಿನ್ ಒಬಿನ್ನಾನನ್ನು ವಶಕ್ಕೆ ಪಡೆದು ಡಿಟೆನ್ಷನ್‌ ಸೆಂಟರ್‌ಗೆ ಕಳುಹಿಸಲಾಗಿದೆ. ಈ ಇಬ್ಬರು ವೀಸಾ ಅವಧಿ ಮುಗಿದ ಬಳಿಕ ನಗರದಲ್ಲಿ ಕಾನೂನು ಬಾಹಿರವಾಗಿ ನೆಲೆಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.