ಕೆಲಸಕ್ಕೆ ಸೇರಿ ವಾರದಲ್ಲೇ ಮನೆಗಳ್ಳತನ; ನರ್ಸ್‌, ಮನೆ ಕೆಲಸದವಳ ಬಂಧನ

| Published : Mar 13 2024, 02:06 AM IST / Updated: Mar 13 2024, 07:34 AM IST

arrest 1.
ಕೆಲಸಕ್ಕೆ ಸೇರಿ ವಾರದಲ್ಲೇ ಮನೆಗಳ್ಳತನ; ನರ್ಸ್‌, ಮನೆ ಕೆಲಸದವಳ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ತಾವು ಕೆಲಸ ಮಾಡುತ್ತಿದ್ದ ನಿವೃತ್ತ ಸರ್ಕಾರಿ ಅಧಿಕಾರಿಯೊಬ್ಬರ ಮನೆಯಲ್ಲಿ ಚಿನ್ನಾಭರಣ ಕದ್ದ ನರ್ಸ್ ಸೇರಿದಂತೆ ಇಬ್ಬರು ಮಹಿಳಾ ಕೆಲಸಗಾರರು ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತಾವು ಕೆಲಸ ಮಾಡುತ್ತಿದ್ದ ನಿವೃತ್ತ ಸರ್ಕಾರಿ ಅಧಿಕಾರಿಯೊಬ್ಬರ ಮನೆಯಲ್ಲಿ ಚಿನ್ನಾಭರಣ ಕದ್ದ ನರ್ಸ್ ಸೇರಿದಂತೆ ಇಬ್ಬರು ಮಹಿಳಾ ಕೆಲಸಗಾರರು ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ.

ಜೆ.ಪಿ.ನಗರ 1ನೇ ಹಂತದ ನಿವಾಸಿ ಮಂಜುಳಾ ಹಾಗೂ ಪ್ರಗತಿಪುರದ ಮಹಾದೇವಮ್ಮ ಬಂಧಿತರಾಗಿದ್ದು, ಆರೋಪಿಗಳಿಂದ 383 ಗ್ರಾಂ ಚಿನ್ನಾಭರಣ ಹಾಗೂ 104 ಬೆಳ್ಳಿ ವಸ್ತುಗಳು ಜಪ್ತಿ ಮಾಡಲಾಗಿದೆ. ಜೆ.ಪಿ.ನಗರ 1ನೇ ಹಂತದ 29ನೇ ಮುಖ್ಯರಸ್ತೆಯಲ್ಲಿರುವ ಆಕಾಶವಾಣಿ ಕೇಂದ್ರದ ನಿವೃತ್ತ ಹಿರಿಯ ಮುನಿಕೃಷ್ಣಪ್ಪರವರ ಮನೆಯಲ್ಲಿ ಈ ಕೃತ್ಯ ನಡೆದಿತ್ತು.

ಈ ಬಗ್ಗೆ ಅವರ ಪುತ್ರ ನೀಡಿದ ದೂರಿನ ಮೇರೆಗೆ ತನಿಖೆಗಿಳಿದ ಪೊಲೀಸರು, ಶಂಕೆ ಮೇರೆಗೆ ನರ್ಸ್ ಹಾಗೂ ಮನೆ ಕೆಲಸದವರನ್ನು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಕೃತ್ಯ ಬಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಾರದ ಹಿಂದಷ್ಟೇ ಕೆಲಸಕ್ಕೆ ಸೇರ್ಪಡೆ

ಜೆ.ಪಿ.ನಗರದ 1ನೇ ಹಂತದಲ್ಲಿ ತಮ್ಮ ಪತ್ನಿ ಜತೆ ಮುನಿಕೃಷ್ಣಪ್ಪ ನೆಲೆಸಿದ್ದು, ಈ ದಂಪತಿಗೆ ಮೂರು ಗಂಡು ಹಾಗೂ ಎರಡು ಹೆಣ್ಣು ಸೇರಿ ಐವರು ಮಕ್ಕಳಿದ್ದಾರೆ. ಆದರೆ ಅವರೆಲ್ಲ ಪೋಷಕರಿಂದ ಪ್ರತ್ಯೇಕವಾಗಿ ತಮ್ಮ ಕುಟುಂಬಗಳ ಜತೆ ವಾಸವಾಗಿದ್ದಾರೆ. ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಎರೆ ಹಂಚಿನಾಳು ಗ್ರಾಮದ ಮಂಜುಳಾ, ವಾರದ ಹಿಂದಷ್ಟೇ ಏಜೆನ್ಸಿ ಮೂಲಕ ಮುನಿಕೃಷ್ಣಪ್ಪ ಮನೆಗೆ ವೃದ್ಧರ ಆರೈಕೆಗೆ ಶುಶ್ರೂಷಕಿಯಾಗಿ ನೇಮಕಗೊಂಡಿದ್ದಳು. ಅದೇ ಮನೆಯಲ್ಲಿ ಆಕೆ ವಾಸವಾಗಿದ್ದಳು. ಅದೇ ರೀತಿ ಆ ಮನೆಗೆ ರಾಮನಗರ ಜಿಲ್ಲೆ ಹಾರೋಹಳ್ಳಿ ತಾಲೂಕಿನ ತಟ್ಟೆಕೆರೆ ಗ್ರಾಮದ ಮಹದೇವಮ್ಮ ಮನೆ ಕೆಲಸಕ್ಕೆ ಸೇರಿಕೊಂಡಿದ್ದಳು.

ಕೆಲ ದಿನಗಳ ಹಿಂದೆ ಬ್ಯಾಂಕ್ ಕೆಲಸದ ನಿಮಿತ್ತ ಮುನಿಕೃಷ್ಣಪ್ಪ ಹೊರ ಹೋಗಿದ್ದಾಗ ಅವರಿಗೆ ತಿಳಿಯದಂತೆ ಮನೆಯಲ್ಲಿ ಅಲ್ಮೇರಾದಲ್ಲಿಟ್ಟಿದ್ದ ಚಿನ್ನಾಭರಣವನ್ನು ಆರೋಪಿಗಳು ಕ‍‍ಳವು ಮಾಡಿದ್ದರು. ಮರುದಿನ ಸಂಜೆ ಮನೆಯಲ್ಲಿ ಅಲ್ಮೇರಾದಲ್ಲಿ ಒಡವೆಯನ್ನು ಅವರು ಪರಿಶೀಲಿಸಿದಾಗ ಕಳ್ಳತನ ವಿಷಯ ಗೊತ್ತಾಗಿದೆ. ಕೂಡಲೇ ತಮ್ಮ ಪುತ್ರನ ಮೂಲಕ ಜೆ.ಪಿ.ನಗರ ಠಾಣೆಗೆ ಅವರು ದೂರು ನೀಡಿದ್ದರು. ಆಗ ಮನೆಯಲ್ಲೇ ಇದ್ದ ಮಂಜುಳಾನ್ನು ಶಂಕೆ ಮೇರೆಗೆ ವಶಕ್ಕೆ ಪಡೆದು ಪೊಲೀಸರು ವಿಚಾರಿಸಿದಾಗ ಸತ್ಯ ಒಪ್ಪಿಕೊಂಡಿದ್ದಾಳೆ ಎಂದು ಅಧಿಕಾರಿಗಳು ಹೇಳಿದ್ದಾರೆ.