ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮಯೋಚಿತವಾಗಿ ಹಾಗೂ ಸಂದರ್ಭೋಚಿತವಾಗಿ ಕೆಲಸ ಮಾಡದೆ ಅರ್ಜಿ ವಿಲೇವಾರಿ ಮಾಡಲು ವಿಳಂಬ ಧೋರಣೆ ತೋರುವುದು ಕೂಡ ಕರ್ತವ್ಯ ಲೋಪವಾಗಿದ್ದು, ಅಂತಹವರ ಮೇಲೂ ಕೂಡ ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ ಅಧಿಕಾರಿಗಳಿಗೆ ತಿಳಿಸಿದರು.ಜಿಲ್ಲಾ ಪಂಚಾಯತ್‌ನ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಬುಧವಾರ ಚಿಕ್ಕಬಳ್ಳಾಪುರ, ಗೌರಿಬಿದನೂರು, ಮಂಚೇನಹಳ್ಳಿ ಹಾಗೂ ಗುಡಿಬಂಡೆ ತಾಲೂಕುಗಳಿಗೆ ಸಂಬಂಧಿಸಿದ ಲೋಕಾಯುಕ್ತದಲ್ಲಿ ದಾಖಲಾಗಿರುವ ದೂರು ಪ್ರಕರಣಗಳ ವಿಚಾರಣೆಯನ್ನು ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಳೆದ ಫೆಬ್ರವರಿ ಮಾಹೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ, ಬಾಗೇಪಲ್ಲಿ, ಶಿಡ್ಲಘಟ್ಟ ಹಾಗೂ ಚೇಳೂರು ತಾಲೂಕುಗಳಿಗೆ ಸಂಬಂಧಪಟ್ಟ ಪ್ರಕರಣಗಳನ್ನು ವಿಚಾರಣೆ ನಡೆಸಿ ಶೇ.65ರಷ್ಟು ಪ್ರಕರಣಗಳನ್ನು ಸ್ಥಳದಲ್ಲೆ ವಿಲೇವಾರಿ ಮಾಡಲಾಗಿತ್ತು. ಅದರ ಮುಂದುವರಿದ ಭಾಗವಾಗಿ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿ ತನಿಖೆಗೆ ಬಾಕಿ ಇರುವ 73 ದೂರು ಪ್ರಕರಣಗಳಲ್ಲಿ ಬುಧವಾರ ವಿಚಾರಣೆ ನಡೆಸಲಾಗಿದೆ. ಬಹುತೇಕ ಪ್ರಕರಣಗಳು ಇತ್ಯರ್ಥವಾಗಿವೆ. ಕಂದಾಯ, ಗ್ರಾಮೀಣ ಮತ್ತು ಪಂಚಾಯತ್ ರಾಜ್ ಅಭಿವೃದ್ಧಿ ಹಾಗೂ ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಪ್ರಕರಣಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ. ಚಿಕ್ಕಬಳ್ಳಾಪುರ ಜಿಲ್ಲೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉತ್ತಮ ಸ್ಪಂದನೆ ನೀಡಿದ್ದು, ವಿಚಾರಣೆಯು ಶಾಂತಿಯುತವಾಗಿ ಜರುಗಿತು. ಇತ್ಯರ್ಥಗೊಂಡ ಪ್ರಕರಣಗಳಲ್ಲಿ ದೂರುದಾರರು ನೆಮ್ಮದಿಯ ಮಾತುಗಳನ್ನಾಡಿ ಧನ್ಯವಾದಗಳನ್ನು ತಿಳಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.ಸಂವಿಧಾನವು ಸರ್ಕಾರದ ಮೂಲಕ ನೀಡಿರುವ ಹುದ್ದೆ, ಸ್ಥಾನಮಾನ, ಅವಕಾಶ ಹಕ್ಕುಗಳನ್ನು ಸಾರ್ವಜನಿಕರ ಸೇವೆ ಅಥವಾ ಶ್ರೇಯೋಭಿವೃದ್ಧಿಗೆ ಪೂರಕವಾಗಿ ಬಳಸಬೇಕು. ಯಾವುದೇ ಸಾರ್ವಜನಿಕರು ವೃಥಾ ದುರುದ್ದೇಶಪೂರಿತವಾಗಿ ದೂರು ಅಥವಾ ಅರ್ಜಿ ನೀಡುವುದಿಲ್ಲ. ಸಾರ್ವಜನಿಕರೂ ಈ ವಿಚಾರದಲ್ಲಿ ಅತ್ಯಂತ ಹೊಣೆಗಾರಿಕೆ ಮತ್ತು ಬದ್ಧತೆಯಿಂದ ನಡೆದುಕೊಳ್ಳಬೇಕು. ಅಧಿಕಾರಿ ಮತ್ತು ನೌಕರರು ಸಾರ್ವಜನಿಕರ ಸಮಸ್ಯೆ, ಕುಂದುಕೊರತೆ ದೂರು ಅರ್ಜಿಗಳನ್ನು ಪರಿಶೀಲಿಸದೆ ಏಕಾಏಕಿ ನಕಾರಾತ್ಮಕ ಮನೋಧೋರಣೆಯಿಂದ ನೋಡಬಾರದು. ನ್ಯಾಯಾಲಯಗಳಿಗೆ ಹೋಗುವವರೆಲ್ಲಾ ಜಗಳ ಮಾಡುವವರಲ್ಲ. ಬದಲಿಗೆ, ತಮ್ಮ ಹಕ್ಕು ಬಾಧ್ಯತೆಗಳನ್ನು ಕಾನೂನಾತ್ಮಕವಾಗಿ ಸ್ಥಾಪಿಸಿಕೊಳ್ಳಲು, ಪರಿಹರಿಸಿಕೊಳ್ಳಲು ಬಂದವರಾಗಿರುತ್ತಾರೆ ಎಂಬ ಸಾಮಾನ್ಯ ವಿಷಯವನ್ನು ಸೂಕ್ಷ್ಮವಾಗಿ ಗ್ರಹಿಸಬೇಕು. ಕೆಲಸವನ್ನು ನಿಷ್ಠೆ, ಪ್ರಾಮಾಣಿಕತೆಯಿಂದ ಮಾಡುತ್ತೇನೆಂಬ ಸಂಕಲ್ಪ ಮತ್ತು ಶಪಥ ಮಾಡಬೇಕೆಂದು ಸಲಹೆ ನೀಡಿದರು.
ಪ್ರಮಾಣಿಕತೆಯಿಂದ ಕೆಲಸ ಮಾಡಿ: ಜಿಲ್ಲೆಯಲ್ಲಿ ಮಾದಕ ವಸ್ತು ಮತ್ತು ಅಕ್ರಮವಾಗಿ ರಸ್ತೆ ಬದಿಯ ಡಾಬಾ, ಹೋಟೆಲ್ ಗಳಲ್ಲಿ ಮದ್ಯೆ ಹಾಗೂ ಬೈಕ್‌ನಲ್ಲಿ ಸವಾರರ ಹೆಲ್ಮೆಟ್ ರಹಿತ ಪ್ರಯಾಣ, ಅಪ್ರಾಪ್ತರ ವಾಹನ ಚಲಾವಣೆ ಕುರಿತು ಮಾತನಾಡಿ ಅಧಿಕಾರಿಗಳು, ನಿಷ್ಠೆ ಮತ್ತು ಪ್ರಾಮಾಣಿಕತೆ ಹಾಗೂ ಬದ್ಧತೆ ಯಿಂದ ಕಾರ್ಯನಿರ್ವಹಿಸಿದಲ್ಲಿ ಈ ಪಿಡುಗನ್ನು ನಿರ್ಮೂಲನೆ ಮಾಡಬಹುದು. ಯುವ ಜನಾಂಗ ದಾರಿ ತಪ್ಪುವುದನ್ನು ತಡೆಯಬಹುದು ಮತ್ತು ಅಪಘಾತಗಳಾದಾಗ ಸಾವುಗಳ ಪ್ರಮಾಣ ಕಡಿಮೆ ಮಾಡಬಹುದು ಎಂದು ತಿಳಿಸಿದರು.
ಈ ವೇಳೆ ಜಿಲ್ಲಾಧಿಕಾರಿ ಜಿ.ಪ್ರಭು, ಜಿ.ಪಂ ಸಿಇಒ ಡಾ.ವೈ.ನವೀನ್ ಭಟ್, ಎಸ್ಪಿ ಕುಶಲ್ ಚೌಕ್ಸೆ, ಹಿರಿಯ ಸಿವಿಲ್ ನ್ಯಾಯಾಧೀಶ ಕಿರಣ್ ಎಂ ಪಾಟೀಲ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಬಿ.ಶಿಲ್ಪ, ಎಡಿಸಿ ಡಾ.ಎನ್. ಭಾಸ್ಕರ್, ಉಪವಿಭಾಗಾಧಿಕಾರಿ ಡಿ.ಹೆಚ್.ಅಶ್ವಿನ್, ಜಿ.ಪಂ ಉಪಕಾರ್ಯದರ್ಶಿ ಅತಿಕ್ ಪಾಷಾ,ಲೋಕಾಯುಕ್ತದ ಎಸ್.ಪಿ. ಆಂಟೋನಿ ಜಾನ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ದೂರುದಾರರು ಹಾಜರಿದ್ದರು.
ಜನರಿಂದ ಬಂದ ದೂರನ್ನು ಪರಿಶೀಲಿಸಿ ಪರಿಹಾರ ನೀಡಿಸರ್ಕಾರದ ಯಾವುದೇ ಇಲಾಖೆಯ ಅಧಿಕಾರಿಗಳು ಹಾಗೂ ನೌಕರರಿಗೆ ಸಾರ್ವಜನಿಕರಿಂದ ಯಾವುದೇ ದೂರು ಅಥವಾ ಅರ್ಜಿ ಬಂದಲ್ಲಿ ಅದನ್ನು ಮೊದಲು ಪರಿಶೀಲಿಸಿ ತಮ್ಮ ವ್ಯಾಪ್ತಿಗೆ ಬರುತ್ತದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಂಡು, ಒಂದು ವೇಳೆ ತಮ್ಮ ವ್ಯಾಪ್ತಿಗೆ ಬರುತ್ತದೆ ಎನ್ನುವುದಾದರೆ ಆ ದೂರು, ಅರ್ಜಿಗೆ ಸಂದರ್ಭೋಚಿತವಾಗಿ, ಸಮಯೋಚಿತವಾಗಿ ಆದಷ್ಟು ಶೀಘ್ರವಾಗಿ ಕಾನೂನಾತ್ಮಕವಾಗಿ ಪರಿಹಾರ ದೊರಕಿಸಿಕೊಡಬೇಕು. ಒಂದು ವೇಳೆ ಆ ದೂರು ಅಥವಾ ಅರ್ಜಿ ತಮ್ಮ ವ್ಯಾಪ್ತಿಗೆ ಬರದಿದ್ದಲ್ಲಿ ಸಂಬಂಧಿಸಿದ ದೂರುದಾರ ಅಥವಾ ಅರ್ಜಿದಾರರನ್ನು ಕರೆಯಿಸಿ ಸೂಕ್ತ ಮಾರ್ಗದರ್ಶನ ನೀಡಬೇಕು. ದೂರು ಅರ್ಜಿಯನ್ನು ಶೀಘ್ರ ವಿಲೇವಾರಿ ಮಾಡಿ ಮುಕ್ತಿ ದೊರಕಿಸಿಕೊಡಬೇಕೆ ಹೊರತು ಅನವಶ್ಯಕವಾಗಿ ಕಾಲಹರಣ ಮಾಡಬಾರದು.