ಸಾರಾಂಶ
ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳ ಐಪಿಎಲ್ ಪಂದ್ಯದ ವೇಳೆ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ಮಕ್ಕಳ ಜತೆ ದುರ್ವತನೆ ತೋರಿದ ಆರೋಪದ ಮೇರೆಗೆ ಅಪರಿಚಿತರ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ
ಬೆಂಗಳೂರು : ಎರಡು ದಿನಗಳ ಹಿಂದೆ ನಗರದ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳ ಐಪಿಎಲ್ ಪಂದ್ಯದ ವೇಳೆ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ಮಕ್ಕಳ ಜತೆ ದುರ್ವತನೆ ತೋರಿದ ಆರೋಪದ ಮೇರೆಗೆ ಅಪರಿಚಿತರ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐಪಿಎಲ್ ಪಂದ್ಯದ ವೀಕ್ಷಣೆಗೆ ಅಧಿಕಾರಿ ಮಕ್ಕಳು ಡೈಮಂಡ್ ಬಾಕ್ಸ್‌ನಲ್ಲಿ ಕುಳಿತಿದ್ದಾಗ ಈ ಘಟನೆ ನಡೆದಿದ್ದು, ಐಪಿಎಸ್ ಅಧಿಕಾರಿ ಪತ್ನಿ ದೂರು ಆಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಸ್ ಆವೃತ್ತಿಯ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡಗಳ ಮಧ್ಯೆ ಶನಿವಾರ ಪಂದ್ಯ ನಡೆದಿತ್ತು.
ಕ್ರಿಕೆಟ್ ವೀಕ್ಷಣೆ ವೇಳೆ ನನ್ನ ಮಕ್ಕಳಿಗೆ ವಿನಾಕಾರಣ ವ್ಯಕ್ತಿಯೊಬ್ಬರು ಜೋರಾಗಿ ಕಿರುಚಾಡಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ ನನ್ನ ಮಗಳ ಜತೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಈ ವರ್ತನೆಗೆ ಆಕ್ಷೇಪಿಸಿದ್ದಕ್ಕೆ ಅವಾಚ್ಯ ಶಬ್ಧಗಳಿಂದ ಸಹ ಆರೋಪಿತರು ನಿಂದಿಸಿದರು. ಈ ಘಟನೆಯನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ನನ್ನ ಮಕ್ಕಳಿಗೆ ತೊಂದರೆ ಕೊಟ್ಟಿರುವ ಆರೋಪಿತರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಉಲ್ಲೇಖವಾಗಿದೆ.