ಕಾರಂತ ಲೇಔಟ್‌ ನಿರ್ಮಾಣ ‘ಹೈ’ನಿಂದಲೇ ಮೇಲ್ವಿಚಾರಣೆ

| Published : Jan 29 2024, 01:36 AM IST / Updated: Jan 29 2024, 01:37 AM IST

ಸಾರಾಂಶ

ಕಾರಂತ ಲೇಔಟ್‌ ನಿರ್ಮಾಣ ‘ಹೈ’ನಿಂದಲೇ ಮೇಲ್ವಿಚಾರಣೆ. ಈ ಹಿಂದೆ ಸುಪ್ರೀ ಕೋರ್ಟ್‌ ರಚಿಸಿದ್ದ ನ್ಯಾ.ಚಂದ್ರಶೇಖರ್‌ ಸಮಿತಿ ರದ್ದು. ದಾಖಲೆ ವಶಕ್ಕೆ ರಿಜಿಸ್ಟ್ರಾರ್‌ಗೆ ಹೈಕೋರ್ಟ್‌ ನಿರ್ದೇಶನ

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಶಿವರಾಮ ಕಾರಂತ ಬಡಾವಣೆ ನಿರ್ಮಾಣ ಕುರಿತ ದೂರುಗಳ ಪರಿಹರಿಸಲು ಸುಪ್ರೀಂಕೋರ್ಟ್‌ ನಿರ್ದೇಶನದ ಮೇರೆಗೆ ನಿವೃತ್ತ ನ್ಯಾ.ಎ.ವಿ.ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ತ್ರಿ ಸದಸ್ಯ ಸಮಿತಿಯನ್ನು ರದ್ದುಪಡಿಸಿರುವ ಹೈಕೋರ್ಟ್, ಪ್ರಕರಣವನ್ನು ತಾನೇ ಖುದ್ದಾಗಿ ಮೇಲ್ವಿಚಾರಣೆ ನಡೆಸುವುದಾಗಿ ಸ್ಪಷ್ಟಪಡಿಸಿದೆ.

ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಬಿಡಿಎ ಆವರಣದಲ್ಲಿ ಸಮಿತಿ ಕಾರ್ಯನಿರ್ವಹಿಸುತ್ತಿದ್ದ ಕೊಠಡಿಗೆ ಹಾಕಿದ್ದ ಬೀಗ ತೆರವು ಮಾಡಿ ಅದರಲ್ಲಿನ ದಾಖಲೆಗಳನ್ನು ವಶಕ್ಕೆ ತೆಗೆದುಕೊಳ್ಳಬೇಕು. ಶಿವರಾಮ ಕಾರಂತ ಬಡಾವಣೆ ಕುರಿತು ಬಾಕಿಯಿರುವ ಎಲ್ಲ ವ್ಯಾಜ್ಯಗಳನ್ನು ಇದೇ ನ್ಯಾಯಪೀಠಕ್ಕೆ ವರ್ಗಾವಣೆ ಮಾಡಬೇಕು ಎಂದು ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್‌ಗೆ ಇದೇ ವೇಳೆ ವಿಭಾಗೀಯ ಪೀಠ ಸೂಚಿಸಿದೆ.

ಸುಪ್ರೀಂ ಕೋರ್ಟ್ ಸೂಚಿಸಿದ್ದ ಕೆಲಸಗಳನ್ನು ಸಮಿತಿ ಪೂರ್ಣಗೊಳಿಸಿದ್ದು, ನ್ಯಾಯಾಲಯದ ಆದೇಶಗಳನ್ನು ಜಾರಿಗೊಳಿಸಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಆದ್ದರಿಂದ ಸಮಿತಿಯನ್ನು ಮುಂದುವರಿಸುವ ಅಗತ್ಯವಿಲ್ಲ. ಹಾಗಾಗಿ ಸಮಿತಿ ರದ್ದುಪಡಿಸುವಂತೆ ಸಮಿತಿಯ ಮುಖ್ಯಸ್ಥರಾದ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಶಿಫಾರಸು ಮಾಡಿದ್ದರು. ಆ ಶಿಫಾರಸು ಅಂಗೀಕರಿಸಿದ ವಿಭಾಗೀಯ ಪೀಠ, ಸಮಿತಿಯನ್ನು ರದ್ದುಪಡಿಸಿದೆ.

ಇದೇ ವೇಳೆ ಸಮಿತಿಯ ಅವಧಿಯನ್ನು ಮತ್ತೆ ಆರು ತಿಂಗಳ ಕಾಲ ವಿಸ್ತರಿಸಬೇಕಂದು ಸಮಿತಿಯ ಸದಸ್ಯರಾದ ನಿವೃತ್ತ ಐಎಎಸ್ ಅಧಿಕಾರಿ ಜೈಕರ್ ಜರೋಮ್ ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ಎಸ್.ಟಿ.ರಮೇಶ್‌ ಅವರು ಮಾಡಿದ್ದ ಮನವಿಯನ್ನು ಪೀಠ ಇದೇ ವೇಳೆ ತಳ್ಳಿಹಾಕಿದೆ.ಪ್ರಕರಣದ ವಿವರ:

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 2700ಕ್ಕೂ ಅಧಿಕ ಎಕರೆಯಲ್ಲಿ ನಿರ್ಮಿಸುತ್ತಿರುವ ಶಿವರಾಮ ಕಾರಂತ ಬಡಾವಣೆ ಸಂಬಂಧ ಭೂ ಸ್ವಾಧೀನ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿದ್ದವು. ಆ ಕುರಿತು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳಲ್ಲಿ ಕಾನೂನು ಹೋರಾಟ ನಡೆದು ಕೊನೆಗೆ ನ್ಯಾಯಾಲಯಗಳು ಭೂ ಸ್ವಾಧೀನ ಪ್ರಕ್ರಿಯೆ ಕ್ರಮ ಎತ್ತಿ ಹಿಡಿದಿದ್ದವು. ಆದರೆ, ಪರಿಹಾರ ಹಂಚಿಕೆಯಲ್ಲಿ ತಾರತಮ್ಯ ಸೇರಿದಂತೆ ಹಲವು ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಹಲವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಸುಪ್ರೀಂ ಕೋರ್ಟ್ 2020 ಡಿ.3ರಂದು ನಿವೃತ್ತ ನ್ಯಾ.ಎ.ವಿ.ಚಂದ್ರಶೇಖರ್ ನೇತೃತ್ವದ ತ್ರಿ ಸದಸ್ಯ ಸಮಿತಿ ರಚಿಸಿತ್ತು. ಈ ಸಮಿತಿ ನ್ಯಾಯಾಲಯದ ನಿರ್ದೇಶನದಂತೆ ಎಲ್ಲ ಸಮಸ್ಯೆಗಳನ್ನ ಪರಿಹರಿಸಿ, ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿತ್ತು. ಸಮಿತಿಯ ಅವಧಿ 2023ರ ಡಿ.31ಕ್ಕೆ ಮುಕ್ತಾಯವಾಗಿತ್ತು. ಸಮಿತಿಗೆ ವಹಿಸಲಾಗಿದ್ದ ಕೆಲಸ ಈಡೇರಿರುವುದರಿಂದ ಸಮಿತಿಯನ್ನು ವಿಸರ್ಜಿಸಬಹುದು ಎಂದು ಸಮಿತಿ ಅಧ್ಯಕ್ಷರು ತಿಳಿಸಿದ್ದರು. ಆದರೆ, ಸಮಿತಿಯ ಇತರೆ ಸದಸ್ಯರು, ಬಡಾವಣೆ ನಿರ್ಮಾಣ ಸಂಬಂಧ ಇನ್ನೂ ಇರುವ ಹಲವು ದೂರುಗಳನ್ನು ಪರಿಹರಿಸಲು ಸಮಿತಿಯ ಅಧಿಕಾರಾವಧಿಯನ್ನು ಮತ್ತೆ ಆರು ತಿಂಗಳು ವಿಸ್ತರಿಸಬೇಕೆಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಆದರೆ, ಸುಪ್ರೀಂ ಕೋರ್ಟ್ ಈ ಅರ್ಜಿಗಳನ್ನು ಹೈಕೋರ್ಟ್‌ಗೆ ವರ್ಗಾಯಿಸಿ, ಸಮಿತಿಯ ಮುಂದುವರಿಕೆ ಸೇರಿದಂತೆ ಎಲ್ಲ ಅಂಶಗಳ ಬಗ್ಗೆ ಹೈಕೋರ್ಟ್‌ ತೀರ್ಮಾನ ಕೈಗೊಳ್ಳುವಂತೆ ಸೂಚಿಸಿತ್ತು. ಅದರಂತೆ ಈ ವಿಶೇಷ ವಿಭಾಗೀಯ ಪೀಠದ ರಚನೆ ಮಾಡಲಾಗಿದೆ.ಬಾಕ್ಸ್‌...

₹18 ಕೋಟಿ ವೆಚ್ಚ

ಸಮಿತಿಗಾಗಿ ಈವರೆಗೆ ₹18 ಕೋಟಿ ವ್ಯಯಿಸಲಾಗಿದೆ. ಇದರಲ್ಲಿ ವೇತನ, ಸಭೆಗಳನ್ನು ನಡೆಸುವುದು ಮತ್ತು ಇತರೆ ಅನುಷ್ಠಾನ ಕಾರ್ಯಗಳಿಗೆ ಮಾಡಿರುವ ವೆಚ್ಚ ಸೇರಿವೆ. ₹3 ಕೋಟಿಯನ್ನು ಸಮಿತಿಯ ದತ್ತಾಂಶವನ್ನು ಸಂರಕ್ಷಿಸಲು ಖಾಸಗಿ ಏಜೆನ್ಸಿಗೆ ನೀಡಲಾಗಿದೆ. ಸಮಿತಿಗೆ ಮಾಡಲಾಗಿರುವ ವೆಚ್ಚ ಸಾರ್ವಜನಿಕ ಹಣವಾಗಿದೆ. ಆದ್ದರಿಂದ ಸಮಿತಿ ಅಧ್ಯಕ್ಷರೇ ಹೇಳಿರುವಂತೆ ಸಮಿತಿಯನ್ನು ರದ್ದುಗೊಳಿಸಲಾಗುವುದು. ಸಮಿತಿಯ ಶಿಫಾರಸುಗಳನ್ನು ಅಂಗೀಕರಿಸಿ, ಜಾರಿ ಮಾಡುವುದು ಬಿಡಿಎ ಅಧಿಕಾರಿಗಳ ಹೊಣೆಯಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.