ಡ್ರಗ್ಸ್‌ ಮುಕ್ತ ಹೊಸವರ್ಷಕ್ಕೆ ಖಾಕಿ ಹೈ ಅಲರ್ಟ್‌

| Published : Dec 04 2024, 01:32 AM IST

ಸಾರಾಂಶ

ಹೊಸ ವರ್ಷಾಚರಣೆ ಸಮೀಪಿಸುತ್ತಿರುವ ಹಿನ್ನಲೆ ಮಾದಕ ವಸ್ತು ಮಾರಾಟ ಜಾಲದ ಮೇಲೆ ಗದಾ ಪ್ರಹಾರ ನಡೆಸಿರುವ ರಾಜಧಾನಿ ಪೊಲೀಸರು, ನಗರ ವ್ಯಾಪ್ತಿ ಡ್ರಗ್ಸ್ ಪ್ರಕರಣ ಹಳೇ ಆರೋಪಿಗಳ ಅಡಗುತಾಣಗಳ ಮೇಲೆ ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹೊಸ ವರ್ಷಾಚರಣೆ ಸಮೀಪಿಸುತ್ತಿರುವ ಹಿನ್ನಲೆ ಮಾದಕ ವಸ್ತು ಮಾರಾಟ ಜಾಲದ ಮೇಲೆ ಗದಾ ಪ್ರಹಾರ ನಡೆಸಿರುವ ರಾಜಧಾನಿ ಪೊಲೀಸರು, ನಗರ ವ್ಯಾಪ್ತಿ ಡ್ರಗ್ಸ್ ಪ್ರಕರಣ ಹಳೇ ಆರೋಪಿಗಳ ಅಡಗುತಾಣಗಳ ಮೇಲೆ ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದಾರೆ.

ನಗರದ ಎಲ್ಲ ಠಾಣೆಗಳ ಸರಹದ್ದಿನಲ್ಲಿ 2 ದಿನಗಳು ಈ ಕಾರ್ಯಾಚರಣೆ ನಡೆದಿದ್ದು, ಹಳೇ ಡ್ರಗ್ಸ್ ಪ್ರಕರಣದ ಆರೋಪಿಗಳಿಗೆ ಮತ್ತೆ ದಂಧೆಗಿಳಿದರೆ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.

ಹೊಸ ವರ್ಷಾಚರಣೆ ವೇಳೆ ನಗರದಲ್ಲಿ ಯಾವುದೇ ರೀತಿಯ ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಮತ್ತು ಕಾನೂನು-ಸುವ್ಯವವಸ್ಥೆಗೆ ದಕ್ಕೆಯಾಗದಂತೆ ಮುಂಜಾಗ್ರತಾ ಕ್ರಮವಹಿಸಲಾಗಿದೆ. ಈ ಹಿನ್ನಲೆ ನಶೆ ಮುಕ್ತ ನಗರವನ್ನಾಗಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದ್ದಾರೆ.

ನಗರದ ಎಲ್ಲಾ ವಿಭಾಗಗಳ ಪೊಲೀಸ್ ಠಾಣಾ ಸರಹದ್ದುಗಳಲ್ಲಿ ಈ ಹಿಂದೆ ಎನ್‌ಡಿಪಿಎಸ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳ ಪರಿಶೀಲನೆ ಹಾಗೂ ಪಬ್, ವೈನ್‌ ಸ್ಟೋರ್ಸ್‌, ಬಾರ್ ಅಂಡ್‌ ರೆಸ್ಟೋರೆಂಟ್‌ಗಳು, ಡಾಬಾ, ಹೋಟೆಲ್ ಮತ್ತು ಲಾಡ್ಜ್‌ಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಲಾಗಿದೆ. ಈ ವೇಳೆ ಅನುಮಾನಾಸ್ಪದ ವ್ಯಕ್ತಿಗಳು, ರೌಡಿಶೀಟರ್‌ಗಳು ಹಾಗೂ ಎಂಓಬಿ ವ್ಯಕ್ತಿಗಳ ವಿಚಾರಣೆ ನಡೆಸಲಾಗಿದ್ದು, ಕಾನೂನು ಉಲ್ಲಂಘಿಸಿದರೆ ವಿರುದ್ದ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.

380 ಪೆಡ್ಲರ್‌ಗಳಿಗೆ ಬಿಸಿ: ಈ ಕಾರ್ಯಾಚರಣೆ ವೇಳೆ ಹಳೇ ಡ್ರಗ್ಸ್ ಪ್ರಕರಣಗಳ 380 ಆರೋಪಿಗಳನ್ನು ಪರಿಶೀಲಿಸಲಾಯಿತು. ಈ ವೇಳೆ 40 ಸಾವಿರ ರು. ಮೌಲ್ಯದ 1.1 ಕೆಜಿ ಗಾಂಜಾ ಪತ್ತೆಯಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಅಲ್ಲದೆ ಇದೇ ಈ ಕಾರ್ಯಾಚರಣೆ ವೇಳೆ ವೈಶ್ಯಾವಾಟಿಕೆಯಲ್ಲಿ ಸಿಲುಕಿದ್ದ 6 ಮಂದಿ ವಿದೇಶಿ ಮಹಿಳೆಯರನ್ನು ರಕ್ಷಿಸಲಾಗಿದೆ ಎಂದು ಆಯುಕ್ತರು ವಿವರಿಸಿದ್ದಾರೆ.

ಅಲ್ಲದೇ ವಿದೇಶಿ ಪ್ರಜೆಗಳು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿ ಸುಮಾರು 411 ವಿದೇಶಿ ಪ್ರಜೆಗಳ ಮನೆ ಪರಿಶೀಲಿಸಲಾಯಿತು. ವೀಸಾ ಅವಧಿ ಮೀರಿ ನಗರದಲ್ಲಿ ವಾಸವಾಗಿದ್ದ 29 ವಿದೇಶಿಯರನ್ನು ಎಫ್.ಆರ್.ಆರ್.ಓ ಕಛೇರಿಯ ಅಧಿಕಾರಿಗಳ ಮುಂದೆ ಹಾಜರುಪಡಿಸಿ ನಂತರ ಸ್ವದೇಶಕ್ಕೆ ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮದ ಭಾಗವಾಗಿ ನಗರ ವ್ಯಾಪ್ತಿಯಲ್ಲಿ 460 ಶಾಲಾ-ಕಾಲೇಜುಗಳು ಮತ್ತು 306 ಹಾಸ್ಟೆಲ್‌ಗಳಿಗೆ ಭೇಟಿ ನೀಡಿ 61,398 ವಿದ್ಯಾರ್ಥಿಗಳಿಗೆ 874 ಪೊಲೀಸ್ ಅಧಿಕಾರಿಗಳು ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಿದ್ದಾರೆ. ಇನ್ನೊಂದೆಡೆ ಭಿಕ್ಷಾಟನೆಯಲ್ಲಿ ತೊಡಗಿದ್ದ 12 ಮಹಿಳೆಯರು ಹಾಗೂ 16 ಮಕ್ಕಳನ್ನು ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.

-ಕೋಟ್‌-

ಹೊಸ ವರ್ಷಾಚರಣೆ ಸಂದರ್ಭದಲ್ಲಿ ನಶೆಮುಕ್ತ ಬೆಂಗಳೂರು ನಗರವನ್ನಾಗಿಸುವ ನಿಟ್ಟಿನಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಅಪರಾಧ ಕೃತ್ಯಗಳನ್ನು ತಡೆಗಟ್ಟಲು ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತದೆ. ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳ ಬಗ್ಗೆ ಗಮನಕ್ಕೆ ಬಂದಲ್ಲಿ ಸ್ಥಳೀಯ ಪೊಲೀಸರಿಗೆ ಹಾಗೂ ನಮ್ಮ-122 ಗೆ ಸಾರ್ವಜನಿಕರು ಮಾಹಿತಿ ನೀಡಬೇಕು.

-ಬಿ.ದಯಾನಂದ್‌, ಪೊಲೀಸ್ ಆಯುಕ್ತ, ಬೆಂಗಳೂರು ನಗರ ಕಾರ್ಯಾಚರಣೆ ವಿವರ ಹೀಗಿದೆ

ಕೇಸ್‌ವಿವರ

ಹಳೇ ಡ್ರಗ್ಸ್‌ ಪ್ರಕರಣ380

ಬಾರ್ ಅಂಡ್ ರೆಸ್ಟೋರೆಂಟ್‌1,633

ಲಾಡ್ಜ್‌ಗಳು,ಇತರೆ ಸ್ಥಳಗಳು1,020

ರೌಡಿಶೀಟರ್‌ 1,233

ಎಂಓಬಿಗಳು1,113