ಕನ್ನಡಪ್ರಭ ವಾರ್ತೆ ಮದ್ದೂರು

ಲಾರಿಗೆ ಗೂಡ್ಸ್ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಟೆಂಪೋ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಗೆಜ್ಜಲಗೆರೆ ಮನ್ಮೂಲ್ ಸಮೀಪದ ಬೆಂಗಳೂರು- ಮೈಸೂರು ಎಕ್ಸ್ ಪ್ರಸ್ ವೇ ನಲ್ಲಿ ಸೋಮವಾರ ಮುಂಜಾನೆ ಜರುಗಿದೆ. ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ಆಲೂರು ಗ್ರಾಮದ ಲೇ.ನಾರಾಯಣಸ್ವಾಮಿ ಪುತ್ರ ಮನೋಜ್ (26) ಮೃತ ಟೆಂಪೋ ಚಾಲಕ. ಬೆಂಗಳೂರಿನಿಂದ ಮನೆಗಳ ನಿರ್ಮಾಣದ ಕಬ್ಬಿಣದ ಸೆಂಟ್ರಿಂಗ್ ವಸ್ತುಗಳನ್ನು ಸಾಗಿಸುತ್ತಿದ್ದ ಲಾರಿ ಚಾಲಕ ರಸ್ತೆ ಬದಿ ನಿಲ್ಲಿಸಿದಾಗ ಮುಂಜಾನೆ 4 ಗಂಟೆ ಸಮಯದಲ್ಲಿ ಹಿಂದಿನಿಂದ ಬಂದ ಗೂಡ್ಸ್ ಟೆಂಪೋ ಲಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಚಾಲಕ ಮನೋಜ್ ಸ್ಥಳದಲ್ಲೇ ಕೊನೆ ಉಸಿರೆಳೆದಿದ್ದಾನೆ.

ಟೆಂಪೋ ಸಂಪೂರ್ಣ ಜಖಂಗೊಂಡಿದ್ದ ಕಾರಣ ಮನೋಜ್ ಶವವನ್ನು ಹೊರ ತೆಗೆಯಲು ಸಮಸ್ಯೆಯಾಗಿತ್ತು. ನಂತರ ಸಂಚಾರಿ ಠಾಣೆ ಪೊಲೀಸರ ಮನವಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಠಾಣಾಧಿಕಾರಿ ವಿ.ಕೃಷ್ಣಪ್ಪ, ಸಿಬ್ಬಂದಿ ಕುಮಾರ, ರಾಜು ಹಾಗೂ ಉತ್ತಮ್ ಅವರುಗಳ ತಂಡ ಸತತ ಒಂದು ಗಂಟೆ ಕಾಲ ಇಲಾಖೆ ರಕ್ಷಣಾ ಸಾಮಗ್ರಿಗಳನ್ನು ಬಳಸಿ ಟೆಂಪೋ ಚಾಲಕನ ಶವವನ್ನು ಹೊರ ತೆಗೆಯಲು ಯಶಸ್ವಿಯಾಗಿದ್ದಾರೆ. ಈ ಸಂಬಂಧ ಮದ್ದೂರು ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.ಲಾರಿ ಡಿಕ್ಕಿ: ಅಪರಿಚಿತ ಪಾದಚಾರಿ ಸಾವು

ಮದ್ದೂರು: ಲಾರಿ ಡಿಕ್ಕಿಯಾಗಿ ಅಪರಿಚಿತ ಪಾದಚಾರಿ ಮೃತಪಟ್ಟಿರುವ ಘಟನೆ ತಾಲೂಕಿನ ತೊರೆಶೆಟ್ಟಿಹಳ್ಳಿಯ ಮದ್ದೂರು ತುಮಕೂರು ರಾಜ್ಯ ಹೆದ್ದಾರಿಯಲ್ಲಿ ಮೇ 20ರಂದು ನಡೆದಿದೆ. ಸುಮಾರು 60 ರಿಂದ 65 ವರ್ಷ ವಯಸ್ಸಿನ ಈ ವ್ಯಕ್ತಿ 5.5 ಅಡಿ ಎತ್ತರ, ಸಾಧಾರಣ ಶರೀರ, ಎಣ್ಣೆಗೆಂಪು ಮೈಬಣ್ಣ, ಮೃತನ ಮೈ ಮೇಲೆ ಗುಲಾಬಿ ಬಣ್ಣದ ಅರ್ಧ ತೋಳಿನ ಟೀ ಶರ್ಟ್ ಮತ್ತು ಖಾಕಿ ಬಣ್ಣದ ನಿಕ್ಕರ್ ಧರಿಸಿದ್ದಾನೆ. ಈತನ ಸಂಬಂಧಿಕರು ಇದ್ದಲ್ಲಿ ಕೆಸ್ತೂರು ಪೊಲೀಸರನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.