ಸಾರಾಂಶ
ಟೆರೆಸ್‌ನಲ್ಲಿ ವಾಕಿಂಗ್ ಮಾಡುವಾಗ ಆಯತಪ್ಪಿ ಬಿದ್ದು ಖಾಸಗಿ ಕಂಪನಿ ಉದ್ಯೋಗಿಯೊಬ್ಬರು ಸಾವು
ಬೆಂಗಳೂರು : ಮೂರು ಅಂತಸ್ತಿನ ಮನೆಯ ಟೆರೆಸ್‌ನಲ್ಲಿ ವಾಕಿಂಗ್ ಮಾಡುವಾಗ ಆಯತಪ್ಪಿ ಬಿದ್ದು ಖಾಸಗಿ ಕಂಪನಿ ಉದ್ಯೋಗಿಯೊಬ್ಬರು ಮೃತಪಟ್ಟಿರುವ ಘಟನೆ ಕೆ.ಆರ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ದೇವಸಂದ್ರದ ನೇತ್ರಾವತಿ ಲೇಔಟ್ ನಿವಾಸಿ ಗೋಪಾಲ್ ಸಿಂಗ್ (38) ಮೃತ ದುರ್ದೈವಿ. ಶುಕ್ರವಾರ ತಡರಾತ್ರಿ ಸುಮಾರು 12.30ಕ್ಕೆ ಈ ಘಟನೆ ನಡೆದಿದೆ.
ಮೃತ ಗೋಪಾಲ್ ಸಿಂಗ್ ಅಮೆಜಾನ್ ಕಂಪನಿ ಉದ್ಯೋಗಿಯಾಗಿದ್ದರು. ಅವಿವಾಹಿತರಾಗಿದ್ದು, ಪೋಷಕರು ಹಾಗೂ ಸಹೋದರಿ ಜತೆಗೆ ಕೆ.ಆರ್‌ಪುರದ ದೇವಸಂದ್ರದ ನೇತ್ರಾವತಿ ಲೇಔಟ್‌ನ ತಮ್ಮ ಮೂರು ಅಂತಸ್ತಿನ ಮನೆಯಲ್ಲಿ ನೆಲೆಸಿದ್ದರು. ಶುಕ್ರವಾರ ರಾತ್ರಿ ಗೋಪಾಲ್ ಸಿಂಗ್ ಹಾಗೂ ಕುಟುಂಬದ ಸದಸ್ಯರು ಒಟ್ಟಿಗೆ ಕುಳಿತು ಊಟ ಮಾಡಿದ್ದಾರೆ. ಬಳಿಕ ಎಲ್ಲರೂ ಮನೆಯ ಟೆರೆಸ್‌ಗೆ ತೆರಳಿ ಕೆಲ ಕಾಲ ಹರಟೆ ಹೊಡೆದಿದ್ದಾರೆ.
ಬಳಿಕ ಗೋಪಾಲ್ ಸಿಂಗ್ ಕೆಲ ಹೊತ್ತು ವಾಕಿಂಗ್ ಮಾಡಿದ್ದು, ನಾನು ಮೇಲಿನ ಬಾಗಿಲ ಹಾಕಿಕೊಂಡು ಬರುತ್ತೇನೆ. ನೀವು ಮನೆಗೆ ಹೋಗಿ ಎಂದು ಕುಟುಂಬದ ಸದಸ್ಯರನ್ನು ಕಳುಹಿಸಿದ್ದಾರೆ. ನಂತರ ಮತ್ತೆ ವಾಕಿಂಗ್ ಮಾಡುವಾಗ ಆಯತಪ್ಪಿ ಮೂರು ಅಂತಸ್ತಿನ ಟೆರೆಸ್‌ನಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಆರಂಭದಲ್ಲಿ ಗೋಪಾಲ್ ಸಿಂಗ್ ಟೆರೆಸ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿತ್ತು. ಆದರೆ, ಅವರ ಕುಟುಂಬದವರು ಆತ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆಯತಪ್ಪಿ ಬಿದ್ದು ಮೃತಪಟ್ಟಿದ್ದಾನೆ. ಈ ಸಾವಿನ ಬಗ್ಗೆ ನಮಗೆ ಯಾವುದೇ ಅನುಮಾನಗಳು ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಹೀಗಾಗಿ ಕೆ.ಆರ್.ಪುರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.