ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿ ಜಲಾಶಯದ ಹಿನ್ನೀರಿನಲ್ಲಿ ಆಟವಾಡುತ್ತಿದ್ದ ವೇಳೆ 6 ಮಂದಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಬೆಳಗ್ಗೆಯಿಂದ ಸಂಜೆವರೆಗೂ ನಾಲ್ಕು ತಾಲೂಕುಗಳ ಅಗ್ನಿ ಶಾಮಕದಳದ ಸಿಬ್ಬಂದಿ ನಡೆಸಿದ ಶೋಧ ಕಾರ್ಯದಲ್ಲಿ ಎರಡು ಮೃತದೇಹಗಳು ಪತ್ತೆಯಾಗಿವೆ. ಒಂದು ವರ್ಷದ ಮಗು ಮೊಹಮ್ಮದ್ ಮಾಹಿಬ್ ಹಾಗೂ 42 ವರ್ಷದ ತಬಸ್ಸುಂ ಎಂಬುವರ ಮೃತದೇಹಗಳು ಪತ್ತೆಯಾಗಿಲ್ಲ.ಮಂಗಳವಾರ ಸಂಜೆ ಪತ್ತೆಯಾದ ಕುಣಿಗಲ್ ತಾಲೂಕಿನ ಯಡಿಯೂರು ಹೋಬಳಿಯ ಮಾಗಡಿಪಾಳ್ಯ ಗ್ರಾಮದ ಮೌಸಿನ್‌ಖಾನ್ ಪತ್ನಿ ಸಾದಿಯಾ ಸುಲ್ತಾನ (25), ತಿಪಟೂರು ತಾಲೂಕು ನೊಣವಿನಕೆರೆ ಹೋಬಳಿಯ ದಾಸೀಹಳ್ಳಿಯ ಮುಜಾಯಿದ್ ಪಾಷ ಪತ್ನಿ ಅರ್ಬಿನ್‌ಖಾನಂ (29) ಹಾಗೂ ಬುಧವಾರ ಪತ್ತೆಯಾದ ತುಮಕೂರು ಪಟ್ಟಣದ ಪಿ.ಎಚ್.ಕಾಲೋನಿ ವಾಸಿ ನವಾಜ್‌ಉಲ್ಲಾ ಪುತ್ರಿ ಮಿಪ್ರಾ ಆನಂ (4) ಮತ್ತು ತಿಪಟೂರು ತಾಲೂಕಿನ ದಾಸೀಹಳ್ಳಿ ಗ್ರಾಮದ ಲೇಟ್ ಅಯ್ಯೂಬ್‌ಖಾನ್ ಪತ್ನಿ ಶಬಾನ (44) ಈ ನಾಲ್ಕು ಮೃತದೇಹಗಳನ್ನು ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಯ ಶವಾಗಾರದಲ್ಲಿ ಬುಧವಾರ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಪತ್ತೆಯಾಗದ ಎರಡು ಮೃತದೇಹ:ನಾಗಮಂಗಲ, ಪಾಂಡವಪುರ, ಕುಣಿಗಲ್ ಮತ್ತು ತುಮಕೂರಿನ ಅಗ್ನಿ ಶಾಮಕದಳದ ಸಿಬ್ಬಂದಿ ಜೊತೆಗೆ ನುರಿತ ಈಜುಪಟುಗಳು ಎರಡು ದಿನಗಳ ಕಾಲ ಹುಡುಕಾಟ ನಡೆಸಿದರೂ ಕೂಡ ತುಮಕೂರು ಜಿಲ್ಲೆ ಶಿರಾ ಪಟ್ಟಣದ ಇರ್ಷಾದ್‌ಉಲ್ಲಾ ಪುತ್ರಿ ತಬಸ್ಸುಂ(45) ಹಾಗೂ ತಿಪಟೂರು ತಾಲೂಕಿನ ದಾಸೀಹಳ್ಳಿ ಗ್ರಾಮದ ಮುಜಾಯಿದ್‌ಪಾಷ ಎಂಬುವರ ಒಂದು ವರ್ಷದ ಮಗು ಮೊಹಮ್ಮದ್ ಮಾಹಿಬ್ ಮೃತದೇಹಗಳು ಪತ್ತೆಯಾಗಿಲ್ಲ.
ಬುಧವಾರ ಸಂಜೆವರೆಗೂ ಶೋಧಕಾರ್ಯ ನಡೆಸಿದ ಸಿಬ್ಬಂದಿ ಕತ್ತಲಾದ್ದರಿಂದ ಶೋಧ ಕಾರ್ಯ ಸ್ಥಗಿತಗೊಳಿಸಿದ್ದಾರೆ. ಗುರುವಾರ ಬೆಳಗ್ಗೆ ಮತ್ತೆ ಎರಡು ಮೃತದೇಹಗಳ ಪತ್ತೆಗಾಗಿ ನಡೆಸುವ ಸಾಧ್ಯತೆಯಿದೆ.ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ರಾಜೇಂದ್ರ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಮುಂದಿನ ಕಾನೂನು ಕ್ರಮವಹಿಸಿದ್ದಾರೆ.