ನಡು ರಸ್ತೆಯಲ್ಲೇ ಮಾರಕಾಸ್ತ್ರದಿಂದ ರೌಡಿಶೀಟರ್ ನನ್ನು ದುಷ್ಕರ್ಮಿಗಳು ಕೊಲೆಗೈದಿರುವ ಘಟನೆ ಮೇಲುಕೋಟೆ ಹೋಬಳಿಯ ಅಮೃತಿ ಗ್ರಾಮದ ಬಳಿ ಶನಿವಾರ ತಡರಾತ್ರಿ ನಡೆದಿದೆ. ಲಕ್ಷ್ಮಿ ಸಾಗರ ಗ್ರಾಮದ ರಾಮೇಗೌಡರ ಪುತ್ರ ಮಹೇಶ್ (35) ಕೊಲೆಯಾದವನು.

 ಮೇಲುಕೋಟೆ : ನಡು ರಸ್ತೆಯಲ್ಲೇ ಮಾರಕಾಸ್ತ್ರದಿಂದ ರೌಡಿಶೀಟರ್ ನನ್ನು ದುಷ್ಕರ್ಮಿಗಳು ಕೊಲೆಗೈದಿರುವ ಘಟನೆ ಹೋಬಳಿಯ ಅಮೃತಿ ಗ್ರಾಮದ ಬಳಿ ಶನಿವಾರ ತಡರಾತ್ರಿ ನಡೆದಿದೆ. ಲಕ್ಷ್ಮಿ ಸಾಗರ ಗ್ರಾಮದ ರಾಮೇಗೌಡರ ಪುತ್ರ ಮಹೇಶ್ (35) ಕೊಲೆಯಾದವನು.

ಬೆಂಗಳೂರಿನಲ್ಲಿ ಆಟೋ ಓಡಿಸಿಕೊಂಡು ಜೀವನ

ಈತ ಬೆಂಗಳೂರಿನಲ್ಲಿ ಆಟೋ ಓಡಿಸಿಕೊಂಡು ಜೀವನ ಮಾಡುತ್ತಿದ್ದ. ಆಗಾಗ್ಗೆ ಪಾಂಡವಪುರದಲ್ಲಿ ಕೋರ್ಟ್ ಕೇಸ್ ಹಾಗೂ ಇತರೆ ಕಾರ್ಯಕ್ರಮಗಳಿಗೆ ಬಂದು ಹೋಗುತ್ತಿದ್ದ. ಶನಿವಾರ ಸಹ ಕೋರ್ಟ್ ಕೇಸ್ ಇದ್ದ ಕಾರಣ ಪಾಂಡವಪುರಕ್ಕೆ ಬಂದಿದ್ದನು. ನಂತರ ಜಕನಹಳ್ಳಿ ವೃತ್ತದಲ್ಲಿ ಸ್ನೇಹಿತರ ಮದುವೆಗಾಗಿ ರಾತ್ರಿ ಬಂದಿದ್ದಾಗ ಮದುವೆ ಮುಗಿಸಿ ಸ್ನೇಹಿತರ ಜೊತೆ ಸೇರಿ ಡ್ರಿಂಕ್ಸ್ ಪಾರ್ಟಿ ಮಾಡಿ ರಾತ್ರಿ 12-30 ಗಂಟೆ ಸುಮಾರಿಗೆ ಲಕ್ಷ್ಮಿಸಾಗರಕ್ಕೆ ಬೈಕ್ ಮೂಲಕ ಸ್ನೇಹಿತರೊಡನೆ ತೆರಳುತ್ತಿದ್ದ ವೇಳೆ ಅಮೃತಿ ಗ್ರಾಮದ ಬಳಿ ರಸ್ತೆಯಲ್ಲೇ ಅಡ್ಡಗಟ್ಟಿದ ಅಪರಿಚಿತ ಸಂಚುಕೋರರು ಮಹೇಶ್‌ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಮಹೇಶ್‌ನನ್ನು ಸ್ಥಳಕ್ಕೆ ಆಗಮಿಸಿದ ಪೊಲೀಸ್ ಇನ್ಸ್ ಪೆಕ್ಟರ್ ಅಶೋಕ್ ಕುಮಾರ್ ಪಾಂಡವಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಿದರಾದರೂ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ಪ್ರಾಥಮಿಕ ಮಾಹಿತಿ ನೀಡಿದೆ.

ಘಟನೆ ನಂತರ ಅಮೃತಿ ಗ್ರಾಮಕ್ಕೆ ತಡರಾತ್ರಿಯಲ್ಲೇ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಪರಿಶೀಲಿಸಿದರು. ಆರೋಪಿಗಳ ಪತ್ತೆಗಾಗಿ ಎರಡು ಪೊಲೀಸ್ ತನಿಖಾ ತಂಡ ರಚಿಸಿದ್ದಾರೆ. ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತ ವ್ಯಕ್ತಿ ಶವ ಪತ್ತೆ

ಪಾಂಡವಪುರ: ಪಟ್ಟಣದ ಹಳೆಯ ಬಸ್ ನಿಲ್ದಾಣದ ಶೆಲ್ಟರ್‌ನಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ.

ಸುಮಾರು 40 ರಿಂದ 45 ವರ್ಷದ ಈತ ಭಿಕ್ಷುಕನಾಗಿದ್ದು, ಯಾವುದೋ ಕಾಯಿಲೆಯಿಂದ ನರಳಿ ಸಾವನ್ನಪ್ಪಿರಬಹುದು ಎನ್ನಲಾಗಿದೆ. ಈತನ ಮೈಮೇಲೆ ಬ್ರೌನ್ ಕಲರ್ ಪ್ಯಾಂಟ್, ರೆಡ್ ಕಲರ್ ಶರ್ಟ್, ಸ್ವೆಟರ್, ಕಪ್ಪು ಟೋಪಿ ಧರಿಸಿದ್ದು, ಹೊಟ್ಟೆ ಮೇಲೆ ಕಪ್ಪು ಕಾರಳ್ಳಿದೆ. ಈತನ ವಾರಸುದಾರರಿದ್ದಲ್ಲಿ ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿ 9480804800, ಪಾಂಡವಪುರ ಪೊಲೀಸ್ ಠಾಣೆ 08236 255138, 9480804874ಗೆ ಸಂಪರ್ಕಿಸುವಂತೆ ಕೋರಲಾಗಿದೆ.