ಸಾರಾಂಶ
ಹಣ ದುರುಪಯೋಗದ ಆರೋಪದ ಮೇರೆಗೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯೊಬ್ಬರನ್ನು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಹಣ ದುರುಪಯೋಗದ ಆರೋಪದ ಮೇರೆಗೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯೊಬ್ಬರನ್ನು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.ನಾಗಮಂಗಲ ತಾಲೂಕು ಗೊಂಡೇನಹಳ್ಳಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಎಸ್.ಆರ್.ಓಂಕಾರಪ್ಪಅಮಾನತುಗೊಂಡವರು. ಪಂಚಾಯ್ತಿಯ ೧೫ನೇ ಹಣಕಾಸು ಯೋಜನೆಯ ಮೊತ್ತವನ್ನು ದುರುಪಯೋಗಪಡಿಸಿಕೊಂಡಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗಿತ್ತು.
ತನಿಖೆ ವೇಳೆ ೨೦೨೪-೨೫ನೇ ಸಾಲಿನಲ್ಲಿ ೯,೬೧,೩೧೫ ರು. ಮತ್ತು ೨೦೨೫-೨೬ನೇ ಸಾಲಿನಲ್ಲಿ ೧೫,೭೧,೫೨೮ ರು. ಸೇರಿ ಒಟ್ಟು ೨೫,೩೨,೮೪೩ ರು. ಹಣವನ್ನು ಗ್ರಾಪಂ ದಾಖಲೆಯಂತೆ ಮತ್ತು ತಂತ್ರಾಂಶದಲ್ಲಿ ನಮೂದಿಸಿರುವ ಮೊತ್ತಗಳು ಸಂಬಂಧಿಸಿದ ವೆಚ್ಚಗಳಿಗೆ ಬಳಕೆಯಾಗಿಲ್ಲದಿರುವುದು ಕಂಡುಬಂದಿದೆ. ಎಸ್.ಆರ್. ಓಂಕಾರಪ್ಪ ಅವರು ಬಿಂಡಿಗನವಿಲೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯಾಗಿದ್ದು, ಗೊಂಡೇನಹಳ್ಳಿ ಪಿಡಿಒ ಹುದ್ದೆಯ ಹೆಚ್ಚುವರಿ ಪ್ರಭಾರದಲ್ಲಿದ್ದರು. ಎಸ್.ಆರ್.ಓಂಕಾರಪ್ಪ ಮತ್ತು ಗ್ರಾಪಂ ಅಧ್ಯಕ್ಷ ಕೆ.ಎನ್.ಮಂಜುನಾಥ್ ಅವರು ಯೋಜನೆಯ ಮಾರ್ಗಸೂಚಿಯಂತೆ ನಿಯಮಾನುಸಾರ ಕರ್ತವ್ಯ ನಿರ್ವಹಿಸದೆ ಹಣಕಾಸು ದುರುಪಯೋಗ, ಕರ್ತವ್ಯನಿರ್ಲಕ್ಷ್ಯತೆ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದರಿಂದ ತನಿಖಾ ತಂಡವು ಶಿಸ್ತು ಕ್ರಮ ಜರುಗಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದರು.ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯ ಡಾಂಗಲ್ ಕೀಯನ್ನು ದುರುಪಯೋಗಪಡಿಸಿಕೊಂಡು ಪಂಚಾಯ್ತಿಯ ಕ್ಲರ್ಕ್ ಕಂ.ಕಂಪ್ಯೂಟರ್ ಆಪರೇಟರ್ ಎನ್.ಮಂಜುನಾಥ್ ವೈಯಕ್ತಿಕ ಖಾತೆಗೆ ೨೫,೩೨,೮೪೩ ರು. ಹಣ ವರ್ಗಾವಣೆಗಳ್ಳುವುದಕ್ಕೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಎಸ್.ಆರ್.ಓಂಕಾರಪ್ಪ ನೇರ ಹೊಣೆಗಾರರಾಗಿದ್ದಾರೆ ಎಂದು ತನಿಖಾ ತಂಡ ಆರೋಪಿಸಿದೆ.
ಪಿಡಿಒ ಅಧಿಕಾರ ದುರುಪಯೋಗ ಸಾಬೀತಾದ ಹಿನ್ನೆಲೆಯಲ್ಲಿ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು ೧೯೫೭ರ ನಿಯಮ ೧೦ (೧)ರಡಿ ಪ್ರದತ್ತವಾಗಿರುವ ಅಧಿಕಾರ ಚಲಾಯಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಿ ಸಿಇಒ ಆದೇಶಿಸಿದ್ದಾರೆ.ನೌಕರರು ಅಮಾನತ್ತಿನಲ್ಲಿರುವಾಗಿ ಕರ್ನಾಟಕ ಸೇವಾ ನಿಯಮಾವಳಿ ೧೯೫೮ರ ನಿಯಮ ೯೮ರನ್ವಯ ಜೀವನಾಧಾರ ಭತ್ಯೆ ಪಡೆಯಲು ಅರ್ಹರಿರುತ್ತಾರೆ. ಈ ನೌಕರರು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಕೇಂದ್ರಸ್ಥಾನ ಬಿಡತಕ್ಕದ್ದಲ್ಲ ಎಂದು ಸೂಚಿಸಿದ್ದಾರೆ.