ಸಾರಾಂಶ
ಮದ್ಯದ ಅಮಲಿನಲ್ಲಿ ರಸ್ತೆ ಬದಿ ನಿಂತಿದ್ದ ಯುವತಿ ಜತೆ ಅನುಚಿತ ವರ್ತನೆ ತೋರಿದ ಆರೋಪದ ಮೇರೆಗೆ ಯುವಕನೊಬ್ಬನನ್ನು ಬಂಧಿಸಿ ಬಳಿಕ ಠಾಣಾ ಜಾಮೀನು ಮೇರೆಗೆ ಅಮೃತಹಳ್ಳಿ ಪೊಲೀಸರು ಬಿಡುಗಡೆಗೊಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮದ್ಯದ ಅಮಲಿನಲ್ಲಿ ರಸ್ತೆ ಬದಿ ನಿಂತಿದ್ದ ಯುವತಿ ಜತೆ ಅನುಚಿತ ವರ್ತನೆ ತೋರಿದ ಆರೋಪದ ಮೇರೆಗೆ ಯುವಕನೊಬ್ಬನನ್ನು ಬಂಧಿಸಿ ಬಳಿಕ ಠಾಣಾ ಜಾಮೀನು ಮೇರೆಗೆ ಅಮೃತಹಳ್ಳಿ ಪೊಲೀಸರು ಬಿಡುಗಡೆಗೊಳಿಸಿದ್ದಾರೆ.ಬಾಗಲೂರು ಸಮೀಪದ ನಿವಾಸಿ ಮಂಜುನಾಥ್ ಬಂಧಿತನಾಗಿದ್ದು, ಕೆಲ ದಿನಗಳ ಹಿಂದೆ ಜಕ್ಕೂರು ಮುಖ್ಯರಸ್ತೆಯಲ್ಲಿ ಯುವತಿ ಜತೆ ಆರೋಪಿ ಅನುಚಿತ ವರ್ತನೆ ತೋರಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಪ್ಲೋಮಾ ಎಂಜಿನಿಯರ್ ಓದಿರುವ ಆರೋಪಿ, ತನ್ನ ಕುಟುಂಬದ ಜತೆ ನೆಲೆಸಿದ್ದಾನೆ. ಸೆ.7 ರಂದು ರಾತ್ರಿ 11.50ಕ್ಕೆ ರಸ್ತೆಯಲ್ಲಿ ಅಪಘಾತಕ್ಕೀಡಾಗಿದ್ದ ನಾಯಿ ರಕ್ಷಣೆಗೆ ಕಾರು ನಿಲ್ಲಿಸಿ ಸಂತ್ರಸ್ತೆ ಮುಂದಾಗಿದ್ದರು. ಅದೇ ವೇಳೆ ಕುಡಿದ ಅಮಲಿನಲ್ಲಿ ಬಂದ ಮಂಜುನಾಥ್, ಆ ಯುವತಿ ಮೈ ಮುಟ್ಟಿ ಪರಾರಿಯಾಗಿದ್ದ. ಇದಾದ ನಂತರ ಮತ್ತೆ ಆ ರಸ್ತೆಯಲ್ಲಿ ಬಂದು ಯುವತಿ ಜತೆ ಅಸಭ್ಯವಾಗಿ ವರ್ತಿಸಿ ಪರಾರಿಯಾಗಿದ್ದ.ಕೂಡಲೇ ಘಟನೆ ಕುರಿತು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದ ಸಂತ್ರಸ್ತೆ, ತನ್ನ ಸ್ನೇಹಿತರ ನೆರವಿನಲ್ಲಿ ಆರೋಪಿ ಹಿಡಿಯಲು ಮುಂದಾಗಿದ್ದರು. ಕೊನೆಗೆ ರಸ್ತೆ ಹಂಪ್ಸ್‌ನಲ್ಲಿ ಬೈಕ್‌ನಿಂದ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗುಂಡಿಗೆ ಬಿದ್ದು ಆತ ಗಾಯಗೊಂಡಿದ್ದ. ಬಳಿಕ ಆತನನ್ನು ಬಂಧಿಸಿದ ಪೊಲೀಸರು ಮತ್ತೆ ಈ ರೀತಿಯ ಕೃತ್ಯ ಎಸಗದಂತೆ ತಾಕೀತು ಮಾಡಿ ಠಾಣಾ ಜಾಮೀನು ಮಂಜೂರು ಮಾಡಿದ್ದರು ಎಂದು ಮೂಲಗಳು ಹೇಳಿವೆ.