ಪೊಲೀಸರು ಶೋಷಿತರ ಮೇಲಿನ ದೌರ್ಜನ್ಯ ತಡೆಯಲಿ: ಸಿಎಂ

| N/A | Published : Aug 31 2025, 10:45 AM IST

siddaramaiah
ಪೊಲೀಸರು ಶೋಷಿತರ ಮೇಲಿನ ದೌರ್ಜನ್ಯ ತಡೆಯಲಿ: ಸಿಎಂ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಜಾತಿ ವ್ಯವಸ್ಥೆಯಲ್ಲಿ ಶೋಷಣೆಗೊಳಗಾದವರ ವಿರುದ್ಧ ದೌರ್ಜನ್ಯ ಕೃತ್ಯಗಳ ನಿಯಂತ್ರಣಕ್ಕೆ ಪೊಲೀಸರು ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

 ಬೆಂಗಳೂರು :  ರಾಜ್ಯದಲ್ಲಿ ಜಾತಿ ವ್ಯವಸ್ಥೆಯಲ್ಲಿ ಶೋಷಣೆಗೊಳಗಾದವರ ವಿರುದ್ಧ ದೌರ್ಜನ್ಯ ಕೃತ್ಯಗಳ ನಿಯಂತ್ರಣಕ್ಕೆ ಪೊಲೀಸರು ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ರಾಜಭವನದ ಗಾಜಿನ ಮನೆಯಲ್ಲಿ ರಾಜ್ಯ ಗೃಹ ಇಲಾಖೆ ಶನಿವಾರ ಆಯೋಜಿಸಿದ್ದ ರಾಷ್ಟ್ರಪತಿ ಪದಕ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಶೋಷಿತರ ಹಕ್ಕುಗಳ ರಕ್ಷಣೆಗೆ ಸರ್ಕಾರವು ಪ್ರತಿ ಜಿಲ್ಲೆಯಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್‌ಇ) ಠಾಣೆಗಳನ್ನು ಸ್ಥಾಪಿಸಿದೆ ಎಂದರು.

ಇತ್ತೀಚೆಗೆ ನಡೆದ ಪರಿಶೀಲನಾ ಸಭೆಯಲ್ಲಿ ಡಿಸಿಆರ್‌ಇ ಠಾಣೆಗಳ ಕಾರ್ಯ ಮತ್ತು ಪ್ರಗತಿ ತೃಪ್ತಿದಾಯಕವಿಲ್ಲ ಎನ್ನುವುದು ಗಮನಿಸಿದ್ದೇನೆ. ಇದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ದುರ್ಬಲವರ್ಗದವರಿಗೆ ಸುರಕ್ಷತೆ ಒದಗಿಸುವ ಸರ್ಕಾರದ ಉದ್ದೇಶ ಸಫಲಗೊಳಿಸಬೇಕು. ಇತರೆ ರಾಜ್ಯಗಳಿಗೆ ಹೋಲಿಸಿದರೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಠ ಪಂಗಡಗಳ ಮೇಲಿನ ದೌರ್ಜನ್ಯ ಪ್ರಕರಣಗಳ ವಿರುದ್ಧ ಶಿಕ್ಷೆ ಪ್ರಮಾಣ ಬಹಳ ಕಡಿಮೆಯಿದೆ ಎಂದು ಹೇಳಿದರು.

ಪ್ರಶಸ್ತಿ ಪುರಸ್ಕೃತ ಪೊಲೀಸರು ಪದಕ ಪಡೆಯುವ ಹಿಂದೆ ಅವರ ಸೇವಾ ಮನೋಭಾವ, ಪ್ರಾಮಾಣಿಕತೆ ಹಾಗೂ ಪರಿಶ್ರಮವಿರುತ್ತದೆ. ಸಾಮಾಜಿಕ ಕಳಕಳಿಯೊಂದಿಗೆ ಸೇವೆ ಸಲ್ಲಿಸಿದಾಗ ಮಾತ್ರ ಇಂಥ ಸಾಧನೆ ಸಾಧ್ಯ. ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಜೊತೆ ಜನರ ಆಸ್ತಿಪಾಸ್ತಿ ಸಂರಕ್ಷಿಸುವುದು ಪೊಲೀಸರ ಜವಾಬ್ದಾರಿ. ದೇಶದಲ್ಲಿ ಶಾಂತಿ ನೆಮ್ಮದಿ ನೆಲೆಸುವಲ್ಲಿ ಪೊಲೀಸರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು.

ಪೊಲೀಸರಿಗೆ ಸಾಮಾಜಿಕ ಬದ್ಧತೆಯಿದ್ದರೆ, ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ. ಸಮಾಜದಲ್ಲಿನ ಅಸಮಾನತೆಗಳನ್ನು ತೊಡೆದು ಸಂವಿಧಾನ ನೀಡುವ ರಕ್ಷಣೆ ಜಾರಿಗೊಳಿಸುವಲ್ಲಿ ಪೊಲೀಸರ ಪಾತ್ರ ಪ್ರಮುಖ. ಸಾಮಾನ್ಯ ಜನರಿಗೆ ನ್ಯಾಯ ದೊರಕಿಸಿಕೊಡಬೇಕು. ಪೊಲೀಸರ ಸಂಖ್ಯೆ ಬಗ್ಗೆ ಗಮನಹರಿಸದೆ, ಅವರು ತಡೆಗಟ್ಟಿರುವ ಅಪರಾಧಗಳೆಷ್ಟು ಎಂದು ಪರಿಗಣಿಸಬೇಕಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ಇತ್ತೀಚೆಗೆ ಸಮಾಜದಲ್ಲಿ ಶಾಂತಿ ಕೆಡಿಸುವಂಥ ಅನೇಕ ಪ್ರಯತ್ನಗಳು ನಡೆಯುತ್ತಿವೆ. ಧಾರ್ಮಿಕ ಹಾಗೂ ರಾಜಕೀಯವಾಗಿ ಬೇರೆ ರೀತಿಯಲ್ಲಿ ಸಮಾಜದ ಶಾಂತಿಯನ್ನು ಕೆಡಿಸುವಂತದ್ದನ್ನು ಗಮನಿಸುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.

ಕರ್ನಾಟಕ ಪೊಲೀಸ್ ಪ್ರತಿಯೊಂದು ಕಠಿಣ ಸಂದರ್ಭದಲ್ಲಿ ಯಶಸ್ವಿಯಾಗುತ್ತಿದೆ. ಯಾವುದೇ ತನಿಖೆ, ಅಪರಾಧ, ಕೊಲೆ ಪ್ರಕರಣಗಳನ್ನು ಪತ್ತೆ ಹಚ್ಚುವುದರಲ್ಲಿ ರಾಜ್ಯ ಪೊಲೀಸರು ಯಶಸ್ಸು ಕಂಡಿದ್ದಾರೆ. ಇಂಥ ಸೂಕ್ಷ್ಮ ಇಲಾಖೆ ಸ್ವಾಭಾವಿಕವಾಗಿ ಹಲವು ಟೀಕೆ ಟಿಪ್ಪಣಿಗಳಿಗೆ ಗುರಿಯಾಗುತ್ತದೆ. ಟೀಕೆಗಳನ್ನು ಮೀರಿ ಇಲಾಖೆಯ ಸಿಬ್ಬಂದಿ ಕೆಲಸ‌ ಮಾಡುತ್ತಿದ್ದಾರೆ.‌

ನಾವು ಯಾವುದೇ ಟೀಕೆಗಳನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ. ಸಲಹೆಗಳ ರೂಪದಲ್ಲಿ ತೆಗೆದುಕೊಳ್ಳುತ್ತೇವೆ. ಆ ಕೆಲಸಗಳನ್ನು ಮಾಡಲು ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ರಾಜ್ಯಪಾಲರ ಥಾವರ್‌ಚಂದ್‌ ಗೆಹಲೊತ್‌ ಅವರು, 2022 ಹಾಗೂ 2023ನೇ ಸಾಲಿನಲ್ಲಿ ರಾಷ್ಟ್ರಪತಿ ವಿಶಿಷ್ಟ ಸೇವಾ, ಶ್ಲಾಘನೀಯ ಪದಕ ಹಾಗೂ ಕೇಂದ್ರ ಗೃಹ ಸಚಿವರ ಪ್ರಶಸ್ತಿಗೆ ಭಾಜನರಾದ ಅಧಿಕಾರಿ ಮತ್ತು ಸಿಬ್ಬಂದಿಗೆ ಪದಕ ಪ್ರದಾನ ಮಾಡಿದರು.

Read more Articles on