1991ರಲ್ಲಿ ಮೋಸದಿಂದ ಲೋಕಸಭಾ ಚುನಾವಣೆಯಲ್ಲಿ ಸೋತೆ: ಸಿದ್ದರಾಮಯ್ಯ

| N/A | Published : Aug 29 2025, 07:51 AM IST

siddaramaiah
1991ರಲ್ಲಿ ಮೋಸದಿಂದ ಲೋಕಸಭಾ ಚುನಾವಣೆಯಲ್ಲಿ ಸೋತೆ: ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಎರಡನೇ ಬಾರಿಗೆ 1991ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಮೋಸದಿಂದ ನನ್ನನ್ನು ಸೋಲಿಸಲಾಯಿತು. ಆಗ ಅದರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡಲು ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಅವರು ನೆರವು ನೀಡಿದ್ದರು

  ಬೆಂಗಳೂರು :  ಎರಡನೇ ಬಾರಿಗೆ 1991ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಮೋಸದಿಂದ ನನ್ನನ್ನು ಸೋಲಿಸಲಾಯಿತು. ಆಗ ಅದರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡಲು ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಅವರು ನೆರವು ನೀಡಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಮರಿಸಿದರು.

ವಕೀಲರ ಸಂಘದಿಂದ ಗುರುವಾರ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಏರ್ಪಡಿಸಲಾಗಿದ್ದ ಮಾಜಿ ಅಡ್ವೋಕೇಟ್ ಜನರಲ್‌ ಪ್ರೊ. ರವಿವರ್ಮ ಕುಮಾರ್‌ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಸಿದ್ದರಾಮಯ್ಯ ಮಾತನಾಡಿದರು.

ನನಗೆ ಯಾವುದೇ ಕಾನೂನು ತೊಡಕು ಎದುರಾದಾಗಲೂ ಪ್ರೊ. ರವಿವರ್ಮ ಕುಮಾರ್‌ ಅವರ ಬಳಿ ಸಲಹೆ ಕೇಳುತ್ತೇನೆ. 1991ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಮೋಸದಿಂದ ಸೋತೆ. ಆಗಲೂ ಪ್ರೊ. ರವಿವರ್ಮ ಕುಮಾರ್‌ ಅವರು ನನಗೆ ನೆರವಾಗಿದ್ದರು. ಅದಕ್ಕೆ ಯಾವುದೇ ಶುಲ್ಕವನ್ನೂ ತೆಗೆದುಕೊಂಡಿರಲಿಲ್ಲ. ಹೀಗೆ ನನ್ನಂತೆಯೇ ಅನೇಕರಿಗೆ ಅವರು ಕಾನೂನು ನೆರವು ನೀಡಿದ್ದಾರೆ. ಅದರಲ್ಲೂ ಸಮಾಜದಲ್ಲಿ ಧ್ವನಿಯಿಲ್ಲದವರಿಗೆ ಶುಲ್ಕ ಪಡೆಯದೆಯೇ ನೆರವು ನೀಡುತ್ತಾರೆ. ಅವರ ಈ ಸಮಾಜವಾದಿ ಮನೋಭಾವ ಈಗಿನ ಯುವ ವಕೀಲರಿಗೆ ಮಾದರಿಯಾಗಿದೆ ಎಂದರು.

ರೈತ ಹೋರಾಟಗಾರ ಪ್ರೊ. ನಂಜುಂಡಸ್ವಾಮಿ ಅವರು ನನ್ನ ಮತ್ತು ಪ್ರೊ. ರವಿವರ್ಮ ಕುಮಾರ್‌ ಸೇರಿದಂತೆ ಅನೇಕ ಯುವಕರನ್ನು ಕಾಲೇಜು ದಿನಗಳಲ್ಲಿ ಸಮಾಜವಾದಿ ಜನಸಭಾಕ್ಕೆ ಸೇರ್ಪಡೆ ಮಾಡಿದರು. ಆಗಿನಿಂದಲೂ ನಾವು ಸಮಾಜವಾದಿಗಳಾಗಿ ಸಾಗಿದ್ದೇವೆ. ನಾನು ವಕೀಲನಾಗಿ 10 ವರ್ಷಗಳ ಕಾಲ ಚಿಕ್ಕಬೋರಯ್ಯ ಅವರ ಬಳಿ ಜ್ಯೂನಿಯರ್‌ ಆಗಿ ಕೆಲಸ ಮಾಡಿದ್ದೆ. ಶಾಸಕನಾದ ನಂತರ ವಕೀಲಿ ವೃತ್ತಿಯನ್ನು ನಿಲ್ಲಿಸಿದೆ. ಆದರೆ, ಪ್ರೊ. ರವಿವರ್ಮ ಕುಮಾರ್‌ ಸಮಾಜವಾದಿ ಪಕ್ಷದಲ್ಲಿದ್ದುಕೊಂಡೇ ವಕೀಲಿ ವೃತ್ತಿ ಮುಂದುವರಿಸಿದರು. ಅವರ ವಕೀಲಿ ವೃತ್ತಿಗೆ 50 ವರ್ಷ ಪೂರ್ಣಗೊಂಡಿದ್ದು, ಅದು ಮತ್ತಷ್ಟು ವರ್ಷ ಮುಂದುವರಿಯಲಿ ಎಂದು ಆಶಿಸಿದರು.

ಹೈಕೋರ್ಟ್‌ನ ನ್ಯಾಯಮೂರ್ತಿ ಅನು ಶಿವರಾಮನ್‌, ನ್ಯಾ. ಎಸ್‌.ಪಿ. ನರೇಂದ್ರಪ್ರಸಾದ್‌, ಅಡ್ವೊಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ, ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಪೊನ್ನಣ್ಣ, ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ, ಹಿರಿಯ ವಕೀಲ ಉದಯ್‌ ಹೊಳ್ಳ, ಮಾಜಿ ಸಚಿವ ಎಚ್‌.ಎಂ. ರೇವಣ್ಣ ಇತರರಿದ್ದರು.

Read more Articles on