ಹೀಟರ್‌, ಸಿಗರೆಟ್‌ನಿಂದ ಸುಟ್ಟ ಅಮ್ಮ, ಮಲತಂದೆ!

| Published : Mar 17 2024, 01:48 AM IST / Updated: Mar 17 2024, 12:55 PM IST

Stop Child abuse

ಸಾರಾಂಶ

4 ವರ್ಷದ ಹೆಣ್ಣು ಮಗುವಿನ ಮೇಲೆ ತಾಯಿ ಮತ್ತು ಮಲ ತಂದೆ ಕ್ರೌರ್ಯ ಮೆರೆದಿದ್ದು, ಹೀಟರ್‌, ಸಿಗರೆಟ್‌ನಿಂದ ಸುಟ್ಟು ದೌರ್ಜನ್ಯ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಆನೇಕಲ್‌

ಹೆತ್ತ ಅಮ್ಮ ಹಾಗೂ ಮಲ ತಂದೆ ಸೇರಿಕೊಂಡು ಮಕ್ಕಳಿಗೆ ನಿರಂತರ ಹೊಡೆದು ಬಡಿದು ತೀವ್ರ ಸ್ವರೂಪದ ಗಾಯ ಮಾಡುತ್ತಿರುವ ಅಮಾನವೀಯ ಘಟನೆ ಆನೇಕಲ್ ತಾಲೂಕು ಹೆಬ್ಬಗೋಡಿಯಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ ಮೂಲದ ಮಲತಂದೆ ಮಂಜುನಾಥ್ ಹಾಗೂ ತಾಯಿ ಮಂಜುಳಾ ಹೆಬ್ಬಗೋಡಿಯ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದಾರೆ. 4 ವರ್ಷದ ಹೆಣ್ಣು ಮಗುವನ್ನು ಕೇಬಲ್ ವೈರ್‌ನಿಂದ ಹೊಡೆಯುತ್ತಿದ್ದರು. 

ಮಗುವಿನ ಆರ್ತನಾದ ಕೆಳಿಸಿಕೊಂಡ ಅಕ್ಕಪಕ್ಕದ ಮನೆಯವರು ಕ್ರೌರ್ಯವನ್ನು ನೋಡಲಾಗದೆ ಮಗುವನ್ನು ರಕ್ಷಿಸಿ ಠಾಣೆಗೆ ವಿಷಯ ತಿಳಿಸಿದರು.

ಈ ಮೊದಲು ಹೆಣ್ಣು ಮಗುವಿನ ಅಣ್ಣನನ್ನೂ ಇದೇ ರೀತಿ ಹೊಡೆಯುತ್ತಿದ್ದಾಗ ನೆರೆ ಮನೆಯವರು ರಕ್ಷಿಸಿದ್ದರು. ಕುಡಿದ ಮತ್ತಿನಲ್ಲಿ ಮಕ್ಕಳನ್ನು ಎಲ್ಲೆಂದರಲ್ಲಿ ಹೊಡೆಯುವ ವರ್ತನೆ ಹಾಗೂ ಸಹಕಾರ ನೀಡಿದ ಅಮ್ಮ ಮಂಜುಳಾ ಸ್ವಭಾವವನ್ನೂ ಗಮನಿಸಿದ್ದ ಗ್ರಾಮಸ್ಥರೂ ಥಳಿಸಿ ಪೊಲೀಸರ ವಶಕ್ಕೆ ನೀಡಿದ್ದಾರೆ.

ಮಗುವಿನ ಕೈ ಮತ್ತು ಕುತ್ತಿಗೆ ಬೆನ್ನು, ತಲೆ, ಹಣೆ ಭಾಗದಲ್ಲಿ ಹೀಟರ್ ಮತ್ತು ಸಿಗರೆಟ್‌ನಿಂದ ಸುಟ್ಟ ಗಾಯಗಳಾಗಿದ್ದು, ಮಗು ತನ್ನ ತೊದಲು ಮಾತಿನಿಂದ ಹೇಳುತ್ತಿದ್ದರೆ ಎಂತಹವರ ಮನಸ್ಸೂ ರೋಸಿ ಹೋಗುತ್ತಿತ್ತು.

ಮಗು ತನ್ನ ತಾಯಿಯ ಬಳಿ ಹೋಗಲು ನಿರಾಕರಿಸಿದಾಗ ಮಕ್ಕಳ ಆರೈಕೆ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಮಂಜುಳಾ ಹಾಗೂ ಮಂಜುನಾಥ್ ಮೇಲೆ ದೂರು ದಾಖಲಾಗಿದ್ದು, ಕ್ರಮ ವಹಿಸಲಾಗುವುದು ಎಂದಿದ್ದಾರೆ.

ತಳ್ಳುವ ಗಾಡಿ ಬಳಿ ಸಿಲಿಂಡರ್‌ ಸ್ಫೋಟಿಸಿ ನಾಲ್ವರಿಗೆ ಗಾಯ
ಕನ್ನಡಪ್ರಭ ವಾರ್ತೆ ಬೆಂಗಳೂರು

ಪಾದಚಾರಿ ಮಾರ್ಗದಲ್ಲಿ ನಿಲ್ಲಿಸಿದ್ದ ನಾಲ್ಕು ಚಕ್ರದ ತಳ್ಳುವ ಗಾಡಿ ಬಳಿ ಇರಿಸಿದ್ದ ಅಡುಗೆ ಅನಿಲದ ಸಿಲಿಂಡರ್‌ ಸ್ಫೋಟಗೊಂಡು ನಾಲ್ವರು ಗಾಯಗೊಂಡಿರುವ ಘಟನೆ ಬಾಗಲೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಾ.12ರಂದು ಬೆಳಗ್ಗೆ 7.30ರ ಸುಮಾರಿಗೆ ಬೆಳ್ಳಹಳ್ಳಿ ಜಂಕ್ಷನ್‌ ಪಾದಾಚಾರಿ ಮಾರ್ಗದಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. 

ಗಾಯಾಳು ಹೆಗಡೆ ನಗರ ನಿವಾಸಿ ಶೇಕ್ ನವೀದ್‌ ಎಂಬುವವರು ನೀಡಿದ ದೂರಿನ ಮೇರೆಗೆ ತಳ್ಳುವ ಗಾಡಿ ಮಾಲೀಕ ಇನಾಯತ್‌ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ವಿವರ: ಇನಾಯತ್‌ ಬೆಳ್ಳಹಳ್ಳಿ ಜಂಕ್ಷನ್‌ನಲ್ಲಿ ತಳ್ಳುವ ಗಾಡಿಯಲ್ಲಿ ಫಾಸ್ಟ್‌ ಫುಡ್‌ ನಡೆಸುತ್ತಾರೆ. ಮಾ.12ರಂದು ಬೆಳಗ್ಗೆ ಅಡುಗೆ ಅನಿಲದ ಸಿಲಿಂಡರ್‌ ತಂದು ತಮ್ಮ ಗಾಡಿ ಪಕ್ಕದಲ್ಲಿ ಇರಿಸಿ ಮತ್ತೊಂದು ಸಿಲಿಂಡರ್‌ ತರಲು ಹೋಗಿದ್ದರು. 

ಇದೇ ಸಮಯಕ್ಕೆ ಶೇಕ್‌ ನವೀದ್‌ ತಮ್ಮ ದ್ವಿಚಕ್ರ ವಾಹನದಲ್ಲಿ ಬೆಳ್ಳಹಳ್ಳಿ ಜಂಕ್ಷನ್‌ ಕಡೆಯಿಂದ ಹೆಗಡೆ ನಗರದ ಕಡೆಗೆ ತೆರಳುತ್ತಿದ್ದರು. 

ಈ ವೇಳೆ ತಳ್ಳುವ ಗಾಡಿ ಬಳಿ ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವುದು ಕಂಡು ಬಂದಿದೆ. ತಕ್ಷಣ ದ್ವಿಚಕ್ರ ವಾಹನ ನಿಲ್ಲಿಸಿ, ಅಲ್ಲೇ ಇದ್ದ ಮ್ಯಾಟ್‌ ತೆಗೆದುಕೊಂಡು ಬೆಂಕಿ ನಂದಿಸಲು ಮುಂದಾಗಿದ್ದಾರೆ.

ನಾಲ್ವರಿಗೆ ಗಾಯ: ಈ ವೇಳೆ ಅಲ್ಲೇ ಪಕ್ಕದಲ್ಲೇ ಇದ್ದ ಅಡುಗೆ ಅನಿಲದ ಸಿಲಿಂಡರ್‌ಗೆ ಬೆಂಕಿ ತಾಕಿ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಶೇಕ್‌ ನವೀದ್‌ ಸೇರಿದಂತೆ ಸಮೀಪದಲ್ಲೇ ಇದ್ದ ಮೂವರು ಸಾರ್ವಜನಿಕರು ಗಾಯಗೊಂಡಿದ್ದಾರೆ. 

ಜತೆಗೆ ಸಮೀಪದಲ್ಲಿ ನಿಲ್ಲಿಸಲಾಗಿದ್ದ ಕಾರೊಂದಕ್ಕೆ ಹಾನಿಯಾಗಿದೆ. ಸ್ಥಳೀಯರು ಕೂಡಲೇ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ನಾಲ್ವರು ಗಾಯಾಳುಗಳು ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.

ಏಕಾಏಕಿ ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ. ಪಾದಚಾರಿ ಮಾರ್ಗದಲ್ಲಿ ತಳ್ಳುವ ಗಾಡಿ ನಿಲ್ಲಿಸಿ, ಯಾವುದೇ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳದೆ ಅಡುಗೆ ಅನಿಲದ ಸಿಲಿಂಡ್‌ ಇರಿಸಿದ್ದ ಮಾಲೀಕನ ನಿರ್ಲಕ್ಷ್ಯವೇ ಸಿಲಿಂಡರ್‌ ಸ್ಫೋಟಕ್ಕೆ ಕಾರಣವಾಗಿದ್ದು, ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಗಾಯಾಳು ಶೇಕ್‌ ನವೀದ್‌ ದೂರು ನೀಡಿದ್ದಾರೆ.