500 ವರ್ಷ ಹಳೆ ನೆಕ್ಲೇಸ್‌ ದೋಚಿದವಗೆ ಶಿಕ್ಷೆ

| Published : Mar 26 2024, 01:19 AM IST / Updated: Mar 26 2024, 12:52 PM IST

ಸಾರಾಂಶ

2014ರಲ್ಲಿ 18 ಕೋಟಿ ಮೌಲ್ಯದ ವಜ್ರಖಚಿತ ನೆಕ್ಷೇಸ್‌ಗಾಗಿ ನಡೆದ ಹತ್ಯೆ ಕೇಸ್‌ನಲ್ಲಿ ಓರ್ವನಿಗೆ ಮಾತ್ರ ಶಿಕ್ಷೆಯಾಗಿದೆ. ನಾಲ್ವರನ್ನು ಖುಲಾಸೆ ಮಾಡಿ ಹೈಕೋರ್ಟ್‌ ಆದೇಶ ಹೊರಡಿಸಿದೆ.

ವೆಂಕಟೇಶ್ ಕಲಿಪಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ಬರೋಬ್ಬರಿ ಒಂದು ದಶಕದ ಹಿಂದೆ ರಾಜ್ಯದಲ್ಲಿ ಭಾರಿ ಸಂಚಲನ ಉಂಟುಮಾಡಿದ್ದ ಐದು ಶತಮಾನಗಳ ಪುರಾತನವಾದ ಹಾಗೂ ₹18 ಕೋಟಿ ಮೌಲ್ಯದ ವಜ್ರಖಚಿತ ನಕ್ಲೇಸ್ ದರೋಡೆ ಮಾಡಲು ಅದರ‌ ಮಾಲೀಕ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಉದಯ್ ರಾಜ್ ಸಿಂಗ್ ಹತ್ಯೆ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ನಾಲ್ವರು ಆರೋಪಿಗಳನ್ನು ಖುಲಾಸೆಗೊಳಿಸಿರುವ ಹೈಕೋರ್ಟ್‌, ಓರ್ವನಿಗೆ ಮಾತ್ರ ಶಿಕ್ಷೆ ಕಾಯಂಗೊಳಿಸಿದೆ.

2014ರ ಮಾ.25ರಂದು ಬೆಂಗಳೂರಿನ ವಿಲ್ಸನ್ ಗಾರ್ಡನ್‌ನ ಉದಯರಾಜ್‌ ಸಿಂಗ್‌ ಅವರ ಮನೆಯಲ್ಲಿಯೇ ನಡೆದಿದ್ದ ಈ ಘಟನೆ ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿತ್ತು.

ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯವು 6 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ 2019ರ ಜೂ.16ರಂದು ಆದೇಶಿಸಿತ್ತು. 

ಆ ಆದೇಶ ಪ್ರಶ್ನಿಸಿ ಐವರು ಆರೋಪಿಗಳು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅದರಲ್ಲಿ ಮೊದಲನೇ ಆರೋಪಿ ಅಮಿತ್‌ ಕುಮಾರ್‌ಗೆ ಹೈಕೋರ್ಟ್‌ ಶಿಕ್ಷೆ ಕಾಯಂಗೊಳಿಸಿದೆ. 

ಕ್ರಮವಾಗಿ 3, 5, 6 ಮತ್ತು 7ನೇ ಆರೋಪಿಗಳಾದ ಕಿರಣ್‌, ದಿಲೀಪ್‌ ಕುಮಾರ್, ಪಿ.ಎಸ್‌.ಶ್ರೀಧರ್‌ ಮತ್ತು ಶ್ರೀರಂಗ ಅಭಿಷೇಕ್‌ ಖುಲಾಸೆಗೊಳಿಸಿದೆ. 

2ನೇ ಆರೋಪಿ ಮಧುಸೂದನ್‌ ವಿರುದ್ಧದ ವಿಚಾರಣೆ ಪೂರ್ಣಗೊಂಡಿದ್ದು, ವಿಚಾರಣಾ ನ್ಯಾಯಾಲಯ ತೀರ್ಪು ನೀಡಬೇಕಿದೆ. ಶಿಕ್ಷೆ ಆದೇಶ ಪ್ರಶ್ನಿಸಿ 4ನೇ ಆರೋಪಿ ಸತೀಶ್‌ ಮೇಲ್ಮನವಿ ಸಲ್ಲಿಸಿಲ್ಲ.

ಗುರುತು ಪತ್ತೆ ವಿಶ್ವಾಸಾರ್ಹವಲ್ಲ: ಮೃತರ ಪತ್ನಿ ಸುಶೀಲಾ ಘಟನೆಗೆ ಪ್ರತ್ಯಕ್ಷದರ್ಶಿ. ಆಕೆ ನುಡಿದ ಸಾಕ್ಷ್ಯ ಪ್ರಕಾರ ಉದಯರಾಜ್‌ ಸಿಂಗ್‌ ಅವರದು ರಾಜಮನೆತನ. ಸಿಂಗ್‌ಗೆ ಅವರ ತಾಯಿ ಈ ನಕ್ಲೇಸ್‌ ನೀಡಿದ್ದರು. 

ಇದರಿಂದ ಅದು ಪುರಾತನ ಹಾಗೂ ಬೆಲೆಬಾಳುವ ನಕ್ಲೇಸ್‌ ಆಗಿತ್ತು ಎನ್ನುವುದರಲ್ಲಿ ವಿವಾದವಿಲ್ಲ. ಆದರೆ, ಆರೋಪಿಗಳನ್ನು ದೋಷಿಗಳಾಗಿ ನಿರ್ಧರಿಸಿ ಶಿಕ್ಷೆ ವಿಧಿಸಿರುವುದು ಸುಶೀಲಾ ಅವರು ಆರೋಪಿಗಳನ್ನು ಗುರುತು ಪತ್ತೆ ಹಚ್ಚಿರುವುದರ ಮೇಲೆ ನಿಂತಿದೆ ಎಂದು ಪೀಠ ಹೇಳಿದೆ.

ಸಿಂಗ್‌ ಅವರನ್ನು ಮನೆಯಲ್ಲಿಯೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸುಶೀಲಾ ಮೇಲೂ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಘಟನೆ ನಡೆದ ದಿನಕ್ಕೂ ಮುನ್ನ ಎರಡು-ಮೂರು ಬಾರಿ 1 ಹಾಗೂ 2ನೇ ಆರೋಪಿಗಳು ಸುಶೀಲಾ ಮನೆಗೆ ಭೇಟಿ ನೀಡಿ, ನಕ್ಲೇಸ್‌ ಮಾರಾಟದ ಬಗ್ಗೆ ಸಮಾಲೋಚಿಸಿದ್ದರು. 

ಹಾಗಾಗಿ, ಅವರನ್ನು ಆಕೆ ಗುರುತಿಸಿರುವುದು ವಿಶ್ವಾಸಾರ್ಹ ಹಾಗೂ ಒಪ್ಪುವಂತಿದೆ. ಆದರೆ, ಇತರೆ ಆರೋಪಿಗಳ ಹೆಸರು, ಅವರ ದೈಹಿಕ ಲಕ್ಷಣಗಳು ಅಥವಾ ಅವರ ನಿಖರವಾದ ವಯಸ್ಸು, ಧರಿಸಿದ್ದ ಉಡುಗೆ ಸೇರಿ ಇತರೆ ನಿಖರ ಗುರುತು ನೀಡಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಹಲ್ಲೆಯಿಂದ ಆಸ್ಪತ್ರೆ ಸೇರಿದ್ದ ಸುಶೀಲಾ, 2014ರ ಮಾ.28ರಂದು ಮಧ್ಯಾಹ್ನ 4.45ರಿಂದ 5 ಗಂಟೆಗೆ ಬಿಡುಗಡೆಯಾಗಿ ಪೊಲೀಸ್‌ ಠಾಣೆಗೆ ತೆರಳಿದ್ದರು. ಪೊಲೀಸರು ಠಾಣೆಯಲ್ಲಿ ಏಳು ಜನರನ್ನು ತೋರಿಸಿದ್ದರು. 

ಅವರನ್ನು ಆಕೆ ಗುರುತಿಸಿದ್ದರು. ಪೊಲೀಸರು ಬಂಧಿಸಿರುವ ಕಾರಣಕ್ಕೆ ಸುಶೀಲಾ, 3, 4, 5, 6 ಮತ್ತು 7ನೇ ಆರೋಪಿಗಳನ್ನು ಗುರುತಿಸಿದ್ದು, ಅದು ತೃಪ್ತಿದಾಯಕ ಮತ್ತು ನಂಬಿಕೆಗೆ ಅರ್ಹವಾಗಿಲ್ಲ. 

ತಖಾಧಿಕಾರಿ ಆರೋಪಿಗಳ ಗುರುತು ಪತ್ತೆ ಪರೇಡ್‌ ನಡೆಸಿಲ್ಲ. ಆದ್ದರಿಂದ ಈ ನಾಲ್ವರು ಆರೋಪಿಗಳ ಗುರುತು ಪತ್ತೆ ಅನುಮಾನಾಸ್ಪದವಾಗಿದೆ, ಅದರ ಪ್ರಯೋಜನೆ ಪಡೆಯಲು ಅವರು ಅರ್ಹರಾಗಿದ್ದಾರೆ. 

ಆದ ಕಾರಣ ಅವರಿಗೆ ವಿಧಿಸಲಾಗಿರುವ ಶಿಕ್ಷೆ ರದ್ದುಪಡಿಸಲಾಗಿದೆ ಎಂದು ಹೈಕೋರ್ಟ್‌ ಹೇಳಿದೆ. ಖುಲಾಸೆ ಆದವರ ಪರ ವಕೀಲ ಡಿ.ಮೋಹನ್ ಕುಮಾರ್‌, ಸತ್ಯನಾರಾಯಣ ಎಸ್‌.ಚಳ್ಕೆ, ಮಹೇಶ್‌ ವಾದ ಮಂಡಿಸಿದ್ದರು.ವಜ್ರ ಖಚಿತ ನೆಕ್ಲೇಸ್‌ಗೆ

ಉದಯ್‌ ಭೀಕರ ಹತ್ಯೆ
ಉದಯ್‌ ರಾಜ್‌ ಸಿಂಗ್‌ ಬಳಿ ವಜ್ರ ಖಚಿತ ಚಿನ್ನದ ನಕ್ಲೇಸ್‌ ಇರುವ ಬಗ್ಗೆ ಮಧುಸೂದನ್‌ಗೆ ಮಾಹಿತಿ ಸಿಕ್ಕಿತ್ತು. ಆ ನಕ್ಲೇಸ್‌ ದೋಚಿ ಮುಂಬೈನಲ್ಲಿ ಮಾರಾಟ ಮಾಡಿದರೆ, ಅದರಿಂದ ಬರುವ ಹಣದಿಂದ ಸಾಲ ತೀರಿಸಿ ಐಷಾರಾಮಿ ಬದುಕು ಸವೆಸಬಹುದು ಎಂದು ಮಧು ಯೋಜಿಸಿದ್ದ. ಸಿಂಗ್‌ ಅವರನ್ನು ಹಲವು ಬಾರಿ ಭೇಟಿ ಮಾಡಿ ಉತ್ತಮ ಬೆಲೆಗೆ ನಕ್ಲೇಸ್‌ ಮಾರಾಟ ಮಾಡಿಸುವುದಾಗಿಯೂ ನಂಬಿಸಿದ್ದ.

ಯೋಜನೆಯಂತೆ ಮಧುಸೂದನ್‌ ಹಾಗೂ ಅಭಿಷೇಕ್‌, ಕಿರಣ್‌, ಸತೀಶ್‌, ದಿಲೀಪ್‌ ಕುಮಾರ್‌, ಶ್ರೀಧರ್‌ ಮತ್ತು ಅಮಿತ್‌ ಕುಮಾರ್‌ 2014ರ ಮಾ.25ರಂದು ಮಧ್ಯಾಹ್ನ 2.30ಕ್ಕೆ ವಿಲ್ಸನ್‌ ಗಾರ್ಡನ್‌ನ ಸಿಂಗ್‌ ಮನೆಗೆ ಹೋಗಿ ಮಾತುಕತೆ ನಡೆಸಿದ್ದರು. 

ಈ ಹಂತದಲ್ಲಿ ಮನೆಯ ಬೀರುವಿನಲ್ಲಿಟ್ಟಿದ್ದ ನಕ್ಲೇಸನ್ನು ತಂದು ತೋರಿಸುತ್ತಿದ್ದಂತೆ, ಆರೋಪಿಗಳು ಅದನ್ನು ಕಿತ್ತುಕೊಂಡು ಸರ್ಜಿಕಲ್‌ ಬ್ಲೇಡ್‌ನಿಂದ ಸಿಂಗ್‌ ಕತ್ತು ಕೊಯ್ದಿದ್ದರು.

ಘಟನೆ ನೋಡಿ ಜೋರಾಗಿ ಕಿರುಚಾಡುತ್ತಿದ್ದ ಸಿಂಗ್‌ ಪತ್ನಿ ಸುಶೀಲಾ ಅವರ ಕುತ್ತಿಗೆಯನ್ನೂ ಕುಯ್ದು ಕೋಣೆಗೆ ಎಳೆದುಕೊಂಡು ಕೂಡಿಹಾಕಿದ್ದರು. ಸುಶೀಲಾ ಚೀರಾಟ ಕೇಳಿದ್ದ ನೆರೆಹೊರೆಯವರು ನೀಡಿದ್ದ ಮಾಹಿತಿ ಮೇರೆಗೆ ಗಸ್ತಿನಲ್ಲಿದ್ದ ಆಡುಗೋಡಿ ಠಾಣಾ ಪೊಲಿಸರು ಸ್ಥಳಕ್ಕೆ ಧಾವಿಸಿದ್ದರು.

ನೆಕ್ಲೇಸ್‌, ವಜ್ರ ಹರಳು ಕಿತ್ತುಕೊಂಡು ಪರಾರಿ ಆಗುತ್ತಿದ್ದ ಅಭಿಷೇಕ್‌, ಮಧುಸೂದನ್‌ ಹಾಗೂ ಕಿರಣ್‌ನನ್ನು ಬಂಧಿಸಿದ್ದರು. ಮರು ದಿನ ಸತೀಶ್‌, ದಿಲೀಪ್‌ ಕುಮಾರ್‌, ಶ್ರೀಧರ್‌ ಹಾಗೂ ಅಮಿತ್‌ ಕುಮಾರ್‌ ಅವರನ್ನು ಬಂಧಿಸಿದ್ದರು. ಎಲ್ಲಾ ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು.