ವ್ಯಾಪಾರಿ ವೀಸಾ ಪಡೆದು ಭಾರತಕ್ಕೆ ಬಂದಿದ್ದ ನೈಜೀರಿಯಾ ಪೆಡ್ಲರ್‌ ಬಂಧನ: ₹1.50 ಕೋಟಿಯ ಡ್ರಗ್ಸ್ ಜಪ್ತಿ

| Published : Oct 26 2024, 01:46 AM IST / Updated: Oct 26 2024, 05:41 AM IST

Murder accused arrested in Jharkhand
ವ್ಯಾಪಾರಿ ವೀಸಾ ಪಡೆದು ಭಾರತಕ್ಕೆ ಬಂದಿದ್ದ ನೈಜೀರಿಯಾ ಪೆಡ್ಲರ್‌ ಬಂಧನ: ₹1.50 ಕೋಟಿಯ ಡ್ರಗ್ಸ್ ಜಪ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ವ್ಯಾಪಾರಿ ವೀಸಾ ಪಡೆದು ಭಾರತಕ್ಕೆ ಬಂದಿದ್ದ ನೈಜೀರಿಯಾ ಪ್ರಜೆ ಡ್ರಗ್ಸ್‌ ಕೇಸ್‌ನಲ್ಲಿ ಬಂಧಿ ಆಗಿದ್ದಾನೆ. ಅವನಿಂದ 1.3 ಕೇಜಿ ಎಂಡಿಎಂಎ ಡ್ರಗ್ಸ್‌ ಜಪ್ತಿ ಮಾಡಲಾಗಿದೆ.

 ಬೆಂಗಳೂರು :  ನಿಷೇಧಿತ ಮಾದಕವಸ್ತು ಮಾರಾಟ ಮಾಡುತ್ತಿದ್ದ ವಿದೇಶಿ ಮೂಲದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ.

ನೈಜೀರಿಯಾ ಮೂಲದ ಉಜ್ವಾಮ್‌ ಚಿಕೆದ್ವೆಮ್‌ ಲಿವೋನಸ್‌ (32) ಬಂಧಿತ ಪೆಡ್ಲರ್‌. ಆರೋಪಿಯಿಂದ ಬರೋಬ್ಬರಿ ಒಂದೂವರೆ ಕೋಟಿ ರು. ಮೌಲ್ಯದ 1.3 ಕೆ.ಜಿ. ಎಂಡಿಎಂಎ ಕ್ರಿಸ್ಟೆಲ್‌ ಮಾದಕವಸ್ತು, ಎಲೆಕ್ಟ್ರಾನಿಕ್‌ ತೂಕದ ಯಂತ್ರ, ಮೊಬೈಲ್‌ ಹಾಗೂ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.

ಇತ್ತೀಚೆಗೆ ಲಕ್ಕಸಂದ್ರದ ಮೈಕೋ ರೋಡ್‌ ಬಳಿ ವಿದೇಶಿ ಪ್ರಜೆಯೊಬ್ಬ ಗಿರಾಕಿಗಳಿಗೆ ಮಾದಕವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ಮಾಲು ಸಹಿತ ಬಂಧಿಸಿದ್ದಾರೆ.

ಆರೋಪಿಯು ಬಿಜಿನೆಸ್‌ ವಿಸಾದಡಿ ಭಾರತಕ್ಕೆ ಬಂದಿದ್ದು, ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದ ಡ್ರಗ್ಸ್‌ ಮಾರಾಟಕ್ಕೆ ದಂಧೆಯಲ್ಲಿ ತೊಡಗಿದ್ದ. ಮುಂಬೈ, ದೆಹಲಿ ಸೇರಿದಂತೆ ವಿವಿಧೆಡೆ ನೆಲೆಸಿರುವ ಪರಿಚಿತ ವಿದೇಶಿ ಡ್ರಗ್ಸ್‌ ಪೆಡ್ಲರ್ಸ್‌ಗಳಿಂದ ಕಡಿಮೆ ಬೆಲೆಗೆ ಮಾದಕವಸ್ತು ಖರೀದಿಸಿ ನಗರಕ್ಕೆ ತಂದು ಪರಿಚಿತ ಗಿರಾಕಿಗಳಿಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಗಳಿಸುತ್ತಿದ್ದ.

ಈ ಹಿಂದೆ ಆರೋಪಿಯನ್ನು ಮುಂಬೈ ಪೊಲೀಸರು ಎನ್‌ಡಿಪಿಎಸ್‌ ಪ್ರಕರಣದಲ್ಲಿ ಬಂಧಿಸಿ ಜೈಲಿಗಟ್ಟಿದ್ದರು. ಜಾಮೀನು ಪಡೆದು ಹೊರಗೆ ಬಂದಿದ್ದ ಆರೋಪಿಯು ಎರಡು ತಿಂಗಳ ಹಿಂದೆಯಷ್ಟೇ ನಗರಕ್ಕೆ ಬಂದು ಡ್ರಗ್ಸ್‌ ಮಾರಾಟ ದಂಧೆಯಲ್ಲಿ ತೊಡಗಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.