ಸ್ನೇಹಿತನ ವಾಟ್ಸಪ್‌ನಿಂದ ಬಂದ ಮದುವೆ ಆಮಂತ್ರಣದ ನಕಲಿ ಎಪಿಕೆ ಫೈಲ್ ತೆರದಿದ್ದರಿಂದ 4 ಲಕ್ಷ ರು. ಬ್ಯಾಂಕ್ ಖಾತೆಯಿಂದ ಕಡಿತವಾಗಿದೆ ಎಂದು ಪ್ಲಂಬರ್ ಒಬ್ಬರು ನೀಡಿರುವ ದೂರಿನ ಸಂಬಂಧ ಲೀಗಲ್‌ಪೇ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್‌ನ ಯಾವುದೇ ಉದ್ಯೋಗಿಯನ್ನು ಬಂಧಿಸದಂತೆ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶಿಸಿದೆ.
ಬೆಂಗಳೂರು : ಸ್ನೇಹಿತನ ವಾಟ್ಸಪ್‌ನಿಂದ ಬಂದ ಮದುವೆ ಆಮಂತ್ರಣದ ನಕಲಿ ಎಪಿಕೆ ಫೈಲ್ ತೆರದಿದ್ದರಿಂದ 4 ಲಕ್ಷ ರು. ಬ್ಯಾಂಕ್ ಖಾತೆಯಿಂದ ಕಡಿತವಾಗಿದೆ ಎಂದು ಪ್ಲಂಬರ್ ಒಬ್ಬರು ನೀಡಿರುವ ದೂರಿನ ಸಂಬಂಧ ಲೀಗಲ್‌ಪೇ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್‌ನ ಯಾವುದೇ ಉದ್ಯೋಗಿಯನ್ನು ಬಂಧಿಸದಂತೆ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶಿಸಿದೆ.
ಹುಳಿಮಾವು ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ
ಬೆಂಗಳೂರಿನ ಹುಳಿಮಾವು ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಲೀಗಲ್‌ಪೇ ಟೆಕ್ನಾಲಜಿಯ ನಿರ್ದೇಶಕ ಕುಂದನ್ ಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ನಟರಾಜ್ ಅವರ ಪೀಠ ಈ ಸೂಚನೆ ನೀಡಿದೆ.ನಕಲಿ ಎಪಿಕೆ ಫೈಲ್ ಸೃಷ್ಟಿಸಿ, ಹಂಚಿಕೆ ಮಾಡಿರುವುದರಲ್ಲಿ ಅರ್ಜಿದಾರರ ಪಾತ್ರವಿಲ್ಲ. ಆ ಫೈಲ್ ತೆಗೆಯುವಂತೆಯೂ ದೂರುದಾರರಿಗೆ ಅರ್ಜಿದಾರ ಸೂಚಿಸಿಲ್ಲ. ಪ್ರಕರಣದಲ್ಲಿನ ಸಾಕ್ಷಿಯು ಬಹುತೇಕ ದಾಖಲೆ ಮತ್ತು ವಿದ್ಯುನ್ಮಾನ ರೂಪದಲ್ಲಿದೆ. ಇದರಿಂದ ಅರ್ಜಿದಾರರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವ ಅಗತ್ಯವಿಲ್ಲ. ಪೊಲೀಸರು ತನಿಖೆ ಮುಂದುವರಿಸಬಹುದಾಗಿದೆ. ಕಾನೂನಿನ ಅನ್ವಯ ಅಂತಿಮ ವರದಿ ಸಲ್ಲಿಸಬಹುದಾಗಿದೆ ಎಂದು ನ್ಯಾಯಾಲಯ ನಿರ್ದೇಶಿಸಿದೆ.
ಪ್ರಕರಣವೇನು?:
ಹುಳಿಮಾವು ನಿವಾಸಿಯಾಗಿರುವ ಸಿದ್ದರಾಜುವಿಗೆ ಮಾ.27ರಂದು ಸ್ನೇಹಿತ ನಾಗರಾಜು ಎಂಬವರಿಂದ ವಾಟ್ಸಪ್‌ಗೆ ಮದುವೆ ಆಮಂತ್ರಣ ಎಂಬ ಎಪಿಕೆ ಫೈಲ್ ಬಂದಿತ್ತು. ಆ ಫೈಲ್ ಅನ್ನು ಸಿದ್ದರಾಜು ಕ್ಲಿಕ್ ಮಾಡಿದ ತಕ್ಷಣ, ಮೊಬೈಲ್ ಹ್ಯಾಕ್ ಆಗಿ ಹಲವು ಅಪರಿಚಿತ ಸಂದೇಶಗಳು ನಿರಂತರವಾಗಿ ಬಂದಿದ್ದವು. ಸಂದೇಶವನ್ನು ಪರಿಶೀಲಿಸಲಾಗಿ ಹಂತ ಹಂತವಾಗಿ ಒಟ್ಟು 4 ಲಕ್ಷ ರು. ಕಡಿತವಾಗಿತ್ತು. ಈ ಹಿನ್ನೆಲೆಯಲ್ಲಿ ಸಿದ್ದರಾಜು ಅವರು ಹುಳಿಮಾವು ಠಾಣೆಯಲ್ಲಿ ದೂರು ನೀಡಿದ್ದರು.
ವಿಚಾರಣೆಯ ಕೊನೆಯಲ್ಲಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಸ್ಮಾರ್ಟ್‌ಫೋನ್ ಇಟ್ಟುಕೊಳ್ಳವುದರಿಂದ ಈ ಸಮಸ್ಯೆಯಾಗುತ್ತದೆ. ಸ್ಮಾರ್ಟ್‌ಫೋನ್ ಬಳಸುವುದು ಬಾರದೇ ಇದ್ದರೆ ಅದನ್ನು ಇಟ್ಟುಕೊಳ್ಳಬಾರದು. ಇಂದು ಪ್ಲಂಬರ್, ಕಸಗುಡಿಸುವವರು ಸೇರಿ ಎಲ್ಲರ ಬಳಿಯೂ ಸ್ಮಾರ್ಟ್‌ಫೋನ್ ಇದೆ. ವಾಟ್ಸಾಪ್ ಮತ್ತು ಫೇಸ್‌ಬುಕ್ ಬಳಸಲು ಅವರಿಗೆ ಸ್ಮಾರ್ಟ್‌ಫೋನ್ ಬೇಕು. ಲಿಂಕ್ ಆಗಿರದ ಒಂದು ಬ್ಯಾಂಕ್ ಖಾತೆಯನ್ನು ಮಾತ್ರ ಹೊಂದಿರಬೇಕು. ಈ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು ಎಂದು ಮೌಖಿಕವಾಗಿ ನುಡಿದರು.
