ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಿಯಲ್ ಎಸ್ಟೇಟ್ ವ್ಯವಹಾರಗಳಿಗೆ ಸಂಬಂಧಿಸಿದಂತೆ 2022-23ನೇ ಸಾಲಿನ ಆಡಿಟ್ ವರದಿ ಸಲ್ಲಿಸದ ಸುಮಾರು 1,500 - 2,000 ಸಾವಿರ ಬಿಲ್ಡರ್‌ಗಳು, ಪ್ರಮೋಟರ್‌ಗಳಿಗೆ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ನೋಟಿಸ್ ಜಾರಿ ಮಾಡಿದೆ. ಇದರಲ್ಲಿ ಬಹುತೇಕ ಬೆಂಗಳೂರು ಹಾಗೂ ಸುತ್ತ ಮುತ್ತ ಯೋಜನೆಗಳನ್ನು ಹೊಂದಿರುವ ಬಿಲ್ಡರ್‌ಗಳಿದ್ದಾರೆ.
ವಾರ್ಷಿಕ ಆಡಿಟ್ ವರದಿ ಸಲ್ಲಿಸಲು ಸುಮಾರು ಒಂದು ವರ್ಷ ವಿಳಂಬ ಮಾಡಿರುವ ಬಗ್ಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದ್ದು, ಒಂದು ತಿಂಗಳ ಒಳಗೆ ವರದಿ ಸಲ್ಲಿಸದಿದ್ದರೆ ಅಥವಾ ಉತ್ತರ ನೀಡದಿದ್ದರೆ ನಿಯಮಾನುಸಾರ ದಂಡ ವಿಧಿಸುವ ಎಚ್ಚರಿಕೆಯನ್ನು ನೀಡಲಾಗಿದೆ.
ಪ್ರತಿ ಆರ್ಥಿಕ ವರ್ಷ ಮುಕ್ತಾಯದ ನಂತರ ಆರು ತಿಂಗಳ ಒಳಗಾಗಿ ಚಾರ್ಟರ್ಡ್ ಅಕೌಂಟೆಂಟ್ ಮೂಲಕ ವರದಿ ಸಲ್ಲಿಸುವುದನ್ನು ರೇರಾ ಕಾಯ್ದೆ ಅನ್ವಯ ಕಡ್ಡಾಯಗೊಳಿಸಲಾಗಿದೆ. 2021-22ನೇ ಸಾಲಿನಲ್ಲಿ 400ಕ್ಕೂ ಹೆಚ್ಚು ಬಿಲ್ಡರ್‌ಗಳಿಗೆ ನೋಟಿಸ್ ನೀಡಲಾಗಿತ್ತು. ಆಡಿಟ್ ವರದಿ ಸಲ್ಲಿಸದ ಬಿಲ್ಡರ್‌ಗಳು ಪ್ರತಿ ಯೋಜನೆಯ ಶೇ.0.5ರಷ್ಟು ಮೊತ್ತವನ್ನು ದಂಡ ರೂಪದಲ್ಲಿ ಪಾವತಿಸಬೇಕು ಎಂದು ರೇರಾ ಆದೇಶಿಸಿದೆ.
ವಸತಿ ಯೋಜನೆ ಅಡಿಟ್ ಸಲ್ಲಿಕೆ ಕಡ್ಡಾಯ
‘ವರದಿ ಸಲ್ಲಿಸದ ಬಿಲ್ಡರ್‌ಗಳಿಗೆ ನೋಟಿಸ್ ನೀಡಲಾಗುತ್ತಿದೆ. ರೇರಾ ನಿಯಮದ ಪ್ರಕಾರ ಬಿಲ್ಡರ್‌ಗಳು ಚಾರ್ಟರ್ಡ್ ಅಕೌಂಟೆಂಟ್ ನೇಮಿಸಿಕೊಂಡು ಅವರ ಮೂಲಕ ಆಡಿಟ್ ವರದಿ ಸಲ್ಲಿಸಬೇಕು. ಆದರೆ, ಅನೇಕರು ನೇಮಿಸಿಕೊಂಡಿಲ್ಲ.
ಈ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಕೆಲವು ಪ್ರಕರಣಗಳಲ್ಲಿ ದಂಡ ವಿಧಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು. ವಸತಿ ಯೋಜನೆಗಳ ನಿರ್ಮಾಣದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಆಡಿಟ್ ವರದಿ ಸಲ್ಲಿಸುವುದನ್ನು ರೇರಾ ಕಾಯ್ದೆ ಕಡ್ಡಾಯಗೊಳಿಸಿದೆ.