ನಿಷೇಧಿತ ಅಮೋನಿಯಂ ನೈಟ್ರೇಟ್‌ ಬಳಸಿ ಸ್ಫೋಟ!

| Published : Mar 07 2024, 01:47 AM IST / Updated: Mar 07 2024, 10:30 AM IST

ಸಾರಾಂಶ

ರಾಜ್ಯ ರಾಜಧಾನಿಯ ವೈಟ್‌ಫೀಲ್ಡ್‌ ಪ್ರದೇಶದ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಕೃತ್ಯದಲ್ಲಿ ಸಾರ್ವಜನಿಕವಾಗಿ ಮಾರಾಟ ನಿಷೇಧವಿರುವ ಅಮೋನಿಯಂ ನೈಟ್ರೇಟ್ ಅನ್ನು ದುಷ್ಕರ್ಮಿಗಳು ಬಳಸಿದ್ದಾರೆ ಎಂಬ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಗಿರೀಶ್ ಮಾದೇನಹಳ್ಳಿ
ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ರಾಜಧಾನಿಯ ವೈಟ್‌ಫೀಲ್ಡ್‌ ಪ್ರದೇಶದ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಕೃತ್ಯದಲ್ಲಿ ಸಾರ್ವಜನಿಕವಾಗಿ ಮಾರಾಟ ನಿಷೇಧವಿರುವ ಅಮೋನಿಯಂ ನೈಟ್ರೇಟ್ ಅನ್ನು ದುಷ್ಕರ್ಮಿಗಳು ಬಳಸಿದ್ದಾರೆ ಎಂಬ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಈ ಅಮೋನಿಯಂ ನೈಟ್ರೇಟ್ ಸಾರ್ವಜನಿಕವಾಗಿ ನಿಷೇಧವಿದ್ದು, ಕಲ್ಲು ಗಣಿಗಾರಿಕೆಯಲ್ಲಿ ಬಂಡೆಗಳನ್ನು ಸಿಡಿಸಲು ಅತಿ ಹೆಚ್ಚು ಬಳಸಲಾಗುತ್ತದೆ. ಹೀಗಾಗಿ ದುಷ್ಕರ್ಮಿಗಳಿಗೆ ಹೇಗೆ ಆ ರಾಸಾಯನಿಕ ವಸ್ತು ಸಿಕ್ಕಿದೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. 

ಈ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಅಮೋನಿಯಂ ನೈಟ್ರೇಟ್ ಪೂರೈಕೆದಾರರ ಕುರಿತು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಹಾಗೂ ಸಿಸಿಬಿ ತೀವ್ರ ತಪಾಸಣೆ ನಡೆಸಿವೆ ಎಂದು ತಿಳಿದು ಬಂದಿದೆ.

ಕೆಫೆಯಲ್ಲಿ ವಿಧ್ವಂಸಕ ಕೃತ್ಯದ ಬಳಿಕ ಘಟನಾ ಸ್ಥಳದಲ್ಲಿ ಲಭ್ಯವಾದ ರಾಸಾಯನಿಕ ವಸ್ತುಗಳನ್ನು ತಸಾಪಣೆ ನಡೆಸಿದಾಗ ಅಮೋನಿಯಂ ನೈಟ್ರೇಟ್ ಪತ್ತೆಯಾಗಿದೆ. 

ಈ ಬಗ್ಗೆ ಇನ್ನಷ್ಟೇ ಅಧಿಕೃತವಾಗಿ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ವರದಿ ಬರಬೇಕಿದೆ. ಆದರೆ ಪ್ರಾಥಮಿಕ ಹಂತದ ಪರಿಶೀಲನೆ ವೇಳೆ ಅಮೋನಿಯಂ ನೈಟ್ರೇಟ್‌ ಸಿಕ್ಕಿದೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಬಾಂಬ್ ಬಿಗಿಯಲು ಬ್ಯಾಂಡೇಜ್‌ ಬಟ್ಟೆ ಬಳಕೆ: ನಟ್‌, ಬೋಲ್ಟ್‌ಗಳು, ಸರ್ಕಿಟ್‌, ಅಮೋನಿಯಂ ನೈಟ್ರೇಟ್‌ ಹಾಗೂ ಟೈಮರ್‌ ಬಳಸಿ ಬಾಂಬ್ (ಐಇಡಿ) ಅನ್ನು ದುಷ್ಕರ್ಮಿಗಳು ತಯಾರಿಸಿದ್ದರು. ಕಾಲೇಜು ವಿದ್ಯಾರ್ಥಿಗಳು ಪ್ರಾಜೆಕ್ಟ್‌ಗೆ ಬಳಸುವ ಹಾಗೂ ಆನ್‌ಲೈನ್‌ ಸೇರಿದಂತೆ ಸಾರ್ವಜನಿಕವಾಗಿ ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್‌ ಸರ್ಕಿಟ್‌ ಬೋರ್ಡ್‌ ಅನ್ನೇ ಬಾಂಬ್ ತಯಾರಿಕೆ ಬಳಸಲಾಗಿದೆ. 

ಈ ಬಾಂಬ್ ಅನ್ನು ಟೈಮರ್‌ಗೆ ಸಂಪರ್ಕ ಕಲ್ಪಿಸಿದ ಬಳಿಕ ಬ್ಯಾಂಡೇಜ್‌ ಬಟ್ಟೆಯಿಂದ (ಹತ್ತಿ ಬಟ್ಟೆಯಲ್ಲ) ಬಿಗಿಯಲಾಗಿತ್ತು. ಬಳಿಕ ಟಿಫನ್‌ ಕ್ಯಾರಿಯರ್‌ ಒಯ್ಯುವ ಚಿಕ್ಕ ಬ್ಯಾಗ್‌ನಲ್ಲಿಟ್ಟು ದುಷ್ಕರ್ಮಿಯು ಕೆಫೆಗೆ ತಂದಿದ್ದಾನೆ. 

ಆದರೆ ಬಾಂಬ್ ಅನ್ನು ಟಿಫನ್‌ ಬಾಕ್ಸ್‌ನಲ್ಲಿಟ್ಟಿರಲಿಲ್ಲ. ಹೀಗಾಗಿ ಘಟನಾ ಸ್ಥಳದಲ್ಲಿ ಟಿಫನ್ ಬಾಕ್ಸ್ ಚೂರುಗಳು ಸಿಕ್ಕಿಲ್ಲ ಎಂದು ಮೂಲಗಳು ವಿವರಿಸಿವೆ.

ಕಟ್ಟು ಸಡಿಲ ಕಾರಣ ಸ್ಫೋಟದ ತೀವ್ರತೆ ಕಡಿಮೆ: ಬಾಂಬ್‌ಗೆ ಬಿಗಿಯಲಾಗಿದ್ದ ಬ್ಯಾಂಡೇಜ್‌ ಕಟ್ಟು ಬಿಗಿಯಾಗಿಲ್ಲದ ಪರಿಣಾಮ ಉಷ್ಣಾಂಶ ಕಡಿಮೆಯಾಗಿ ಸ್ಫೋಟದ ತೀವ್ರತೆ ಕಡಿಮೆಯಾಗಿದೆ. ಒಂದು ವೇಳೆ ಕಟ್ಟು ಬಿಗಿಯಾಗಿದ್ದರೆ ಬಾಂಬ್ ಸ್ಫೋಟವು ದೊಡ್ಡ ಪ್ರಮಾಣ ನಡೆದು ಅಪಾರ ಸಾವು-ನೋವು ಸಂಭವಿಸುತ್ತಿತ್ತು. 

ಸಡಿಲವಾಗಿ ಕಟ್ಟನ್ನು ಬಿಗಿದಿದ್ದರಿಂದ ನೆಲದ ಮಟ್ಟದಲ್ಲಿ ಹೆಚ್ಚು ಸ್ಫೋಟಿಸದೆ ಬಾಂಬ್ ಮೇಲಕ್ಕೆ ಚಿಮ್ಮಿ ತಾರಸಿ ತೂತು ಬಿದ್ದಿದೆ. ಆ ಕಚ್ಚಾ ಬಾಂಬ್‌ನಲ್ಲಿ ನಟ್ಟು ಹಾಗೂ ಬೋಲ್ಟ್‌ಗಳನ್ನು ಅಳವಡಿಸಿದ್ದರಿಂದ ಅವು ಸಿಡಿದು ಜನರಿಗೆ ಗಾಯವಾಗಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. 

ಅಮೋನಿಯಂ ಪ್ರಮಾಣ ಕಡಿಮೆ?
ಮಂಗಳೂರು ಹಾಗೂ ಶಿವಮೊಗ್ಗ ಪ್ರಕರಣಗಳಲ್ಲಿ ಸಲ್ಫರ್‌ (ಗನ್‌ ಪೌಡರ್‌) ಮತ್ತು ಪೊಟಾಶಿಯಂ ನೈಟ್ರೇಟ್ (ಬೆಂಕಿ ಕಡ್ಡಿಯಲ್ಲಿ ಬಳಸುವ ರಾಸಾಯನಿಕ ವಸ್ತು) ಬಳಸಲಾಗಿತ್ತು. ಆದರೆ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದಲ್ಲಿ ಅಮೋನಿಯಂ ನೈಟ್ರೇಟ್‌ ಅಂಶ ಪತ್ತೆಯಾಗಿದೆ. 

ಹೀಗಾಗಿ ಬಹುಶಃ ದುಷ್ಕರ್ಮಿಗಳು ಸಲ್ಫರ್ ಹಾಗೂ ಪೊಟಾಶಿಯಂ ನೈಟ್ರೇಟ್ ಜತೆ ಕಡಿಮೆ ಪ್ರಮಾಣದಲ್ಲಿ ಅಮೋನಿಯಂ ನೈಟ್ರೇಟ್‌ ಮಿಶ್ರಣ ಮಾಡಿ ಕಚ್ಚಾ ಬಾಂಬ್ ತಯಾರಿಸಿರುವ ಅನುಮಾನವಿದೆ. ಹೀಗಾಗಿ ಸ್ಫೋಟಗೊಂಡಾಗ ಅಮೋನಿಯಂ ನೈಟ್ರೇಟ್‌ ಅಂಶ ಸಿಕ್ಕಿದೆ. ಎಂದು ಅಧಿಕಾರಿಗಳು ಶಂಕಿಸಿದ್ದಾರೆ. 

ಭಟ್ಕಳ ವೈದ್ಯನ ಬಳ ಸಿಕ್ಕಿತ್ತು: ಈ ಹಿಂದೆ ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯಗಳಲ್ಲಿ ಅಮೋನಿಯಂ ನೈಟ್ರೇಟ್ ಬಳಕೆಯಾಗಿದೆ. ಅಲ್ಲದೆ 2015ರಲ್ಲಿ ಬೆಂಗಳೂರಿನ ಪುಲಕೇಶಿ ನಗರದಲ್ಲಿ ವಾಸವಾಗಿದ್ದ ಭಟ್ಕಳದ ವೈದ್ಯನೊಬ್ಬನ ಮನೆ ಮೇಲೆ ಐಎಸ್‌ಡಿ ಹಾಗೂ ಬೆಂಗಳೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಅಪಾರ ಪ್ರಮಾಣದ ಅಮೋನಿಯಂ ಜಪ್ತಿ ಮಾಡಿದ್ದರು. 

ಆಗ ವಿಚಾರಣೆ ವೇಳೆ ದೇಶದ ವಿವಿಧೆಡೆ ಸಂಭವಿಸಿದ್ದ ಬಾಂಬ್ ಸ್ಫೋಟ ಕೃತ್ಯಗಳಿಗೆ ಆ ವೈದ್ಯ ಅಮೋನಿಯಂ ನೈಟ್ರೇಟ್‌ ಪೂರೈಸಿದ್ದ ಸಂಗತಿ ಬಯಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಸಿಕ್ಕಿದ್ದು ಹೇಗೆ ಎಂಬ ತನಿಖೆ: 2015ರಲ್ಲಿ ವೈದ್ಯನ ಬಳಿ ಅಪಾರ ಪ್ರಮಾಣದ ಅಮೋನಿಯಂ ನೈಟ್ರೇಟ್‌ ಪತ್ತೆಯಾದ ಬಳಿಕ ಸಾರ್ವಜನಿಕವಾಗಿ ಅಮೋನಿಯಂ ನೈಟ್ರೇಟ್‌ ಬಳಕೆಗೆ ಸರ್ಕಾರ ನಿರ್ಬಂಧ ವಿಧಿಸಿತ್ತು. 

ಹೀಗಾಗಿ ಈಗ ರಾಜ್ಯದಲ್ಲಿ ಅಧಿಕೃತ ಪರವಾನಗಿ ಹೊಂದಿದ್ದವರು ಮಾತ್ರವಷ್ಟೇ ಅಮೋನಿಯಂ ನೈಟ್ರೇಟ್‌ ಮಾರಾಟಕ್ಕೆ ಅವಕಾಶವಿದೆ. ಅಲ್ಲದೆ ಕಲ್ಲು ಕ್ವಾರಿಗಳಲ್ಲಿ ಬಂಡೆಗಳನ್ನು ಸಿಡಿಸಲು ಅಮೋನಿಯಂ ನೈಟ್ರೇಟ್ ಹೆಚ್ಚು ಬಳಸುತ್ತಾರೆ. 

ಕೆಫೆ ದುರಂತದಲ್ಲಿ ಅಮೋನಿಯಂ ನೈಟ್ರೇಟ್ ಪತ್ತೆ ಹಿನ್ನಲೆಯಲ್ಲಿ ಅಮೋನಿಯಂ ನೈಟ್ರೇಟ್ ಖರೀದಿ ಹಾಗೂ ಮಾರಾಟಗಾರರ ಕುರಿತು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಗೊತ್ತಾಗಿದೆ.