ನವಿಲು ಬೇಟೆ- ಮೂವರ ಬಂಧನ

| Published : Oct 27 2023, 12:30 AM IST

ಸಾರಾಂಶ

ರಾಷ್ಟ್ರಪಕ್ಷಿ ನವಿಲನ್ನು ಬೇಟೆಯಾಡಿ ಹಸಿಮಾಂಸವನ್ನು ಬೇಯಿಸಿ ಅಡುಗೆ ತಯಾರಿಸುತ್ತಿದ್ದ ಮೂರು ಮಂದಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ, ತುಮಕೂರು ರಾಷ್ಟ್ರಪಕ್ಷಿ ನವಿಲನ್ನು ಬೇಟೆಯಾಡಿ ಹಸಿಮಾಂಸವನ್ನು ಬೇಯಿಸಿ ಅಡುಗೆ ತಯಾರಿಸುತ್ತಿದ್ದ ಮೂರು ಮಂದಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಒರಿಸ್ಸಾ ರಾಜ್ಯದ ಕಾಂತಾಬಂಜಿ ನಿವಾಸಿ ಬಿಟ್ಟಿಂಗ್ ನಾಯಕ್ (44), ಬಲಾಂಗಿರ್ ಬೇಲಾಪುರದ ಬೈಷಾಕು ದಾವು (41) ಹಾಗೂ ದುಬಾ ಕಾಪತ್ (38) ಎಂಬುವರೇ ಬಂಧಿತ ಆರೋಪಿಗಳು. ತಾಲೂಕಿನ ಪೂರ್ವ ಕಸಬಾ ಹೋಬಳಿ ಪಂಡಿತನಹಳ್ಳಿ ಗ್ರಾಮದ ಎಸ್‌ಆರ್‌ಎಸ್ ಇಟ್ಟಿಕೆ ತಯಾರಿಕಾ ಘಟಕದ ಬಳಿ ಇರುವ ಕೂಲಿ ಕಾರ್ಮಿಕರ ಮನೆಯಲ್ಲಿ ನವಿಲನ್ನು ಬೇಟೆಯಾಡಿ ಹಸಿಮಾಂಸವನ್ನು ಬೇಯಿಸಿ ಅಡುಗೆ ಮಾಡಲಾಗುತ್ತಿದೆ ಎಂಬ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ತುಮಕೂರು ವಲಯ ಅರಣ್ಯಾಧಿಕಾರಿ ಪವಿತ್ರ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿ ರಬ್ಬಾನಿ, ಕೇಶವ ಮತ್ತು ಸಿಬ್ಬಂದಿಯವರು ದಾಳಿ ನಡೆಸಿ ಈ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಮೂವರು ಆರೋಪಿಗಳು ಇಟ್ಟಿಗೆ ಕಾರ್ಖಾನೆಯಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಈ ಮೂವರು ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುವುದಾಗಿ ಅರಣ್ಯಾಧಿಕಾರಿಗಳು ಹೇಳಿದ್ದಾರೆ.