ಕುಂಭಮೇಳದಲ್ಲಿ ಕಾಲ್ತುಳಿತ : ತುರ್ತು ವೈದ್ಯಕೀಯ ಸೇವೆ, ಹಸಿರು ಕಾರಿಡಾರ್‌ನಿಂದ ತಪ್ಪಿತು ದೊಡ್ಡ ಹಾನಿ

| N/A | Published : Jan 30 2025, 01:46 AM IST / Updated: Jan 30 2025, 05:11 AM IST

ಸಾರಾಂಶ

ಕುಂಭಮೇಳದಲ್ಲಿ ಕಾಲ್ತುಳಿತ ನಡೆಯಲು ಸರ್ಕಾರ ಜನ ನಿಯಂತ್ರಣಕ್ಕೆ ಸರಿಯಾದ ಕ್ರಮ ಕೈಗೊಳ್ಳದಿರುವುದು ಕಾರಣ ಎಂದು ವಿಪಕ್ಷಗಳು ಆರೋಪಿಸುತ್ತಿರುವ ನಡುವೆಯೇ, ಯುಪಿ ಸರ್ಕಾರ ತೆಗೆದುಕೊಂಡಿದ್ದ ತ್ವರಿತ ಸೇವೆ, ಹಸಿರು ಕಾರಿಡಾರ್‌ ಕ್ರಮಗಳು ಆಗಬಹುದಾಗಿದ್ದ ಬಹುದೊಡ್ಡ ತಪ್ಪಿಸಿದೆ ಎಂದು ಸರ್ಕಾರ ಹೇಳಿದೆ.

ಮಹಾಕುಂಭ ನಗರ: ಪ್ರಯಾಗ್‌ರಾಜ್‌ನ ಕುಂಭಮೇಳದಲ್ಲಿ ಕಾಲ್ತುಳಿತ ನಡೆಯಲು ಸರ್ಕಾರ ಜನ ನಿಯಂತ್ರಣಕ್ಕೆ ಸರಿಯಾದ ಕ್ರಮ ಕೈಗೊಳ್ಳದಿರುವುದು ಕಾರಣ ಎಂದು ವಿಪಕ್ಷಗಳು ಆರೋಪಿಸುತ್ತಿರುವ ನಡುವೆಯೇ, ಯುಪಿ ಸರ್ಕಾರ ತೆಗೆದುಕೊಂಡಿದ್ದ ತ್ವರಿತ ಸೇವೆ, ಹಸಿರು ಕಾರಿಡಾರ್‌ ಕ್ರಮಗಳು ಆಗಬಹುದಾಗಿದ್ದ ಬಹುದೊಡ್ಡ ತಪ್ಪಿಸಿದೆ ಎಂದು ಸರ್ಕಾರ ಹೇಳಿದೆ.

ಈ ಬಗ್ಗೆ ಉತ್ತರ ಪ್ರದೇಶ ಸರ್ಕಾರ ಹೇಳಿಕೆ ಬಿಡುಗಡೆ ಮಾಡಿದ್ದು, ‘ ಕಾಲ್ತುಳಿತ ಸಂತ್ರಸ್ತರನ್ನು ರಕ್ಷಿಸಲು ಹಸಿರು ಕಾರಿಡಾರ್‌ ಮೂಲಕ 2-3 ನಿಮಿಷದಲ್ಲಿ 50ಕ್ಕೂ ಹೆಚ್ಚು ಆ್ಯಂಬುಲೆನ್ಸ್‌ಗಳು ಗಾಯಾಳುಗಳ ನೆರವಿಗೆ ಧಾವಿಸಿವೆ. ಸುಮಾರು 100 ಸಲ ಆ್ಯಂಬುಲೆನ್ಸ್‌ ಸಂಚರಿಸಿ ಜನರ ಪ್ರಾಣವನ್ನು ರಕ್ಷಿಸಿದೆ. ಅಲ್ಲದೇ ವೈದ್ಯರು ಕೂಡ 2-3 ನಿಮಿಷದಲ್ಲಿ ಘಟನಾ ಸ್ಥಳವನ್ನು ತಲುಪಿದ್ದಾರೆ. ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಮತ್ತು ಪೊಲೀಸರೂ ಈ ವೇಳೆ ತಕ್ಷಣ ಕಾರ್ಯಪ್ರವತ್ತರಾಗಿದ್ದಾರೆ. ಸಣ್ಭಪುಟ್ಟ ಗಾಯಾಳುಗಳಿಗೆ ಅಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಗಂಭೀರ ಗಾಯಗೊಂಡರವನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಇದು ಸಾವಿನ ಸಂಖ್ಯೆ ತಗ್ಗಿಸಲು ಕಾರಣವಾಯಿತು’ ಎಂದಿದೆ.

ಅಲ್ಲದೇ ಸಾವಿರಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿಗಳು ಕೂಡ ಆಸ್ಪತ್ರೆಗಳಲ್ಲಿ ಜನರಿಗೆ ಚಿಕಿತ್ಸೆ ನೀಡಲು ಸಿದ್ದರಾಗಿದ್ದರು. ಇದು ಸಾವಿನ ಸಂಖ್ಯೆ ನಿಯಂತ್ರಣಕ್ಕೆ ಬರಲು ಕಾರಣ ಎನ್ನಲಾಗಿದೆ. ಹಸಿರು ಕಾರಿಡಾರ್‌ಗಳನ್ನು ತುರ್ತು ಸಂದರ್ಭಗಳ್ಲಲಿ ರಕ್ಷಣಾ ತಂಡಗಳು ತ್ವರಿತಗತಿಯಲ್ಲಿ ಕಾರ್ಯಾಚರಣೆ ನಡೆಸಲು ನಿರ್ಮಿಸಲಾಗಿತ್ತು.

ಕಾಲ್ತುಳಿತದ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?

ಮಹಾಕುಂಭ ನಗರ: ಮಹಾಕುಂಭದಲ್ಲಿ ಭಕ್ತರು ಪವಿತ್ರ ಸ್ನಾನಕ್ಕಾಗಿ ಕಾದಿದ್ದ ವೇಳೆ ಸಂಭವಿಸಿದ ಕಾಲ್ತುಳಿತದ ಸಂಬಂಧ ಕೆಲ ಪ್ರತ್ಯಕ್ಷದರ್ಶಿಗಳು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಮಧ್ಯರಾತ್ರಿಯಾಗುತ್ತಿದ್ದಂತೆ ಬ್ಯಾರಿಕೇಡ್‌ ತಳ್ಳಿ ನುಗ್ಗಿಬಂದ್ರು

ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಭಕ್ತರು ದಡದಲ್ಲಿ ಕಾದಿದ್ದರು. ಹಲವರು ನೆಲದ ಮೇಲೆ ಕುಳಿತರೆ, ಇನ್ನೂ ಕೆಲವರು ಮಲಗಿದ್ದರು. ಸ್ನಾನ ಮಾಡುವ ಪ್ರದೇಶಕ್ಕೆ ಬ್ಯಾರಿಕೇಡ್‌ ಅಳವಡಿಸಲಾಗಿತ್ತು. ಮಧ್ಯರಾತ್ರಿ ಕಳೆಯುತ್ತಿದ್ದಂತೆ ಅತ್ತ ಧಾವಿಸಿದ ಜನರ ದಂಡು ಬ್ಯಾರಿಕೇಡ್‌ಗಳನ್ನೂ ತಳ್ಳಿಕೊಂಡು ಮುನ್ನುಗಿದ್ದು, ಕುಳಿತಿದ್ದವರು ಹಾಗೂ ಮಲಗಿದ್ದವರ ಮೇಲೆಯೇ ಹಾದು ಹೋದರು ಎಂದು ಅಸ್ಸಾಂನಿಂದ ಆಗಮಿಸಿದ್ದ ಮಧುಮಿತಾ ಎಂಬುವರು ಹೇಳಿದ್ದಾರೆ.

ಪವಿತ್ರ ಗಂಗೇಲಿ ಮಿಂದೇಳಲು ಅಷ್ಟು ದೂರದಿಂದ ಬಂದಿದ್ದೆವು

‘ಮಹಾಕುಂಭಕ್ಕೆ ಸಾಕ್ಷಿಯಾಗುವ ಈ ಅವಕಾಶ ಮುಂದೆ ದೊರಕುವುದಿಲ್ಲ ಎಂಬ ಕಾರಣಕ್ಕೆ ಅಷ್ಟು ದೂರದಿಂದ ಬಂದು ಪವಿತ್ರ ಗಂಗೆಯಲ್ಲಿ ಮುಳುಗುಹಾಕಲು ಕಾದಿದ್ದೆವು’ ಎಂದು ಬಿಹಾರದ ಬೇಗುಸರಾಯ್‌ನಿಂದ ಆಗಮಿಸಿದ್ದ ಬದಾಮಾ ದೇವಿ ಎಂಬ ವೃದ್ಧ ಮಹಿಳೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಗಂಗಾ ಮಾತೆ ಇದನ್ನೇ ಬಯಸಿದ್ದಳೋ ಏನೋ

‘ಇಂತಹ ಪವಿತ್ರ ಅವಕಾಶ 144 ವರ್ಷಕ್ಕೊಮ್ಮೆ ಬರುವುದು ಎಂಬ ಅರಿವಿದ್ದುದರಿಂದ ಇದನ್ನು ತಪ್ಪಿಸಿಕೊಳ್ಳಬಾರದು ಎಂದುಕೊಂಡು ಬಂದಿದ್ದೆವು. ಹಲವು ಭಕ್ತರು ಮಂಗಳಕರ ಸಮಯ ಶುರುವಾಗಲು ಕಾಯುತ್ತಾ ಮಲಗಿದ್ದರು. ಇದ್ದಕ್ಕಿದ್ದಂತೆ ನುಗ್ಗಿದ ಜನ ಅವರನ್ನು ತುಳಿದುಕೊಂಡೇ ಮುನ್ನುಗ್ಗಿದರು. ಗಂಗಾ ಮಾತೆ ಇದನ್ನೇ ಬಯಸಿದ್ದಳೋ ಏನೋ’ ಎಂದು ಕಾಲ್ತುಳಿತದಿಂದ ಆಘಾತಕ್ಕೊಳಗಾಗಿರುವ ಜಾರ್ಖಂಡ್‌ನ ರಾಂ ಸುನಿರನ್‌ ಎಂಬುವರು ದುಃಖ ತೋಡಿಕೊಂಡಿದ್ದಾರೆ.

ಘಟನೆಗೆ ಸರ್ಕಾರದ ವೈಫಲ್ಯವೇ ಕಾರಣ: ವಿಪಕ್ಷಗಳ ಕಿಡಿ

ಪ್ರಯಾಗರಾಜ್‌: 30 ಜನರ ಸಾವಿಗೆ ಕಾರಣವಾದ ಭೀಕರ ಕಾಲ್ತುಳಿತದ ಬಳಿಕ ವಿಪಕ್ಷಗಳು ಆಡಳಿತ ಬಿಜೆಪಿ ವಿರುದ್ಧ ಮುಗಿಬಿದ್ದಿವೆ. ಸಿಎಂ ಯೋಗಿ ಮತ್ತು ಪ್ರಧಾನಿ ಮೋದಿ ಅವರ ಚುನಾವಣೆ ಗಿಮಿಕ್‌ಗೆ ಆದ ದುರಂತ ಎಂದು ವಿಪಕ್ಷಗಳು ತರಾಟೆಗೆ ತೆಗೆದುಕೊಂಡಿದೆ.

ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಯೋಗಿ ಆದಿತ್ಯನಾಥ್‌ ಅವರ ವಿಐಪಿ ವ್ಯವಸ್ಥೆಯಿಂದಾಗಿ ಈ ದುರಂತ ನಡೆದಿದೆ. ಅರ್ಧ ಬೆಂದ ವ್ಯವಸ್ಥೆ, ವಿಐಪಿ ಓಲೈಕೆ, ವೈಯಕ್ತಿಕ ಪ್ರಚಾರಗಳು ಈ ದುರಂತಕ್ಕೆ ಎಡೆಮಾಡಿಕೊಟ್ಟಿದೆ ಎಂದಿದ್ದಾರೆ.

ಶಿವಸೇನೆ ಉದ್ಧವ್‌ ಬಣದ ಸಂಜಯ್‌ ರಾವತ್‌ ಮಾತನಾಡಿ, ವಿಐಪಿಗಳ ಸ್ನಾನಕ್ಕೆಂದು ಸಾರ್ವಜನಿಕರಿಗೆ ನಿರ್ಬಂದ ಹೇರಿದ್ದೇ ದುರಂತಕ್ಕೆ ಕಾರಣ ಎಂದಿದ್ದಾರೆ.ಮತ್ತೊಂದೆಡೆ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ‘ಭಕ್ತರು, ಸಾಧುಸಂತರಲ್ಲಿ ಮತ್ತೆ ನಂಬಿಕೆ ಉಳಿಸಲು ಕುಂಭಮೇಳ ನಿರ್ವಹಣೆಯನ್ನು ಉತ್ತರ ಪ್ರದೇಶ ಸರ್ಕಾರದಿಂದ ತೆಗೆದು ಸೇನೆಗೆ ಹಸ್ತಾಂತರಿಸಬೇಕು. ಕಾಲ್ತುಳಿತವು ದುರಾಡಳಿತವನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.

ಎಲ್ಲೆಲ್ಲೂ ಬಟ್ಟೆ, ಚಪ್ಪಲಿ, ಆಕ್ರಂದನ ಕಾಲ್ತುಳಿತ ನಡೆದ ಸ್ಥಳದಲ್ಲಿ ಕರುಣಾಜನಕ ದೃಶ್ಯ

ಪ್ರಯಾಗರಾಜ್‌: ವಿಶ್ವದ ಅತಿ ದೊಡ್ಡ ಧಾರ್ಮಿಕ ಸಭೆಯಾದ ಕುಂಭಮೇಳದಲ್ಲಿ ಕಾಲ್ತುಳಿತ ನಡೆದ ಸ್ಥಳ ಇಡೀ ಘಟನೆಯನ್ನು ಕಣ್ಣಿಗೆ ಕಟ್ಟಿದಂತೆ ಹೇಳುತ್ತಿತ್ತು. ಎಲ್ಲೆಲ್ಲೂ ನೂರಾರು ಜನ ಬಟ್ಟೆ, ಕೇಸರಿ ವಸ್ತ್ರಗಳು, ಭಕ್ತರು ತಮ್ಮೊಂದಿಗೆ ತಂದಿದ್ದ ಸರಕುಗಳು, ಚಪ್ಪಲಿ ಅನಾಥವಾಗಿ ಬಿದ್ದಿದ್ದು ಘಟನೆಯ ಚಿತ್ರಣವನ್ನು ಕಟ್ಟಿಕೊಟ್ಟಿತ್ತು.

ಇದರ ನಡುವೆಯೇ ತಮ್ಮವರಿಗಾಗಿ ಹುಡುಕಾಟ, ತಾವು ಕಳೆದುಕೊಂಡ ವಸ್ತುಗಳಿಗಾಗಿ ಹುಡುಕಾಟದ ದೃಶ್ಯಗಳು ಕಂಡುಬಂದವು. ಮತ್ತೊಂದೆಡೆ ಕಾಲ್ತುಳಿದಿಂದ ಆತಂಕಕ್ಕೆ ಒಳಗಾದ ವಯಸ್ಕರು, ವೃದ್ಧರು ಆತಂಕದಿಂದ ಸುರಕ್ಷಿತ ಸ್ಥಳಕ್ಕೆ ಹುಡುಕಾಡುತ್ತಿದ್ದ, ಕೆಲವರು ವೈದ್ಯಕೀಯ ನೆರವಿವಾಗಿ ಮೊರೆ ಇಡುತ್ತಿದ್ದ ದೃಶ್ಯಗಳು ಕಂಡುಬಂದವು.ಮತ್ತೊಂದೆಡೆ ಯಾವುದೇ ಸಂಭವನೀಯ ದುರ್ಘಟನೆ ಎದುರಿಸಲು ನಿಯೋಜಿತರಾಗಿದ್ದ ಪೊಲೀಸರು, ಭದ್ರತಾ ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದವರಿಗೆ ಸಮಾಧಾನ ಹೇಳುವ, ವೈದ್ಯಕೀಯ ಸಿಬ್ಬಂದಿ ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿದ್ದ ದೃಶ್ಯಗಳು ಕೂಡಾ ಕಂಡುಬಂದವು.