ಖಾಸಗಿ ಆಸ್ಪತ್ರೆಯ ವೈದ್ಯೆಯೊಬ್ಬರಿಗೆ ನಗ್ನ ಭಾವಚಿತ್ರ ಕಳುಹಿಸುವಂತೆ ಕಿರುಕುಳ ಪಿಎಸ್‌ಐ ಕಿರುಕುಳ

| Published : Nov 15 2024, 01:30 AM IST / Updated: Nov 15 2024, 04:39 AM IST

Coin Design Earrings idea for women

ಸಾರಾಂಶ

 ವೈದ್ಯೆಯೊಬ್ಬರಿಗೆ ನಗ್ನ ಭಾವಚಿತ್ರ ಕಳುಹಿಸುವಂತೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಬಸವನಗುಡಿ ಠಾಣೆ ಸಬ್ ಇನ್ಸ್‌ಪೆಕ್ಟರ್‌ ರಾಜಕುಮಾರ್ ಸದಾಶಿವ ಜೋಡಟ್ಟಿ ವಿರುದ್ಧ ನಗರ ಪೊಲೀಸ್ ಆಯುಕ್ತರು ಹಾಗೂ ದಕ್ಷಿಣ ವಿಭಾಗದ ಡಿಸಿಪಿ ಅವರಿಗೆ ಸಂತ್ರಸ್ತೆಯ ಸೋದರ ಪ್ರತ್ಯೇಕ ದೂರು  ನೀಡಿದ್ದಾರೆ.

 ಬೆಂಗಳೂರು : ಖಾಸಗಿ ಆಸ್ಪತ್ರೆಯ ವೈದ್ಯೆಯೊಬ್ಬರಿಗೆ ನಗ್ನ ಭಾವಚಿತ್ರ ಕಳುಹಿಸುವಂತೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಬಸವನಗುಡಿ ಠಾಣೆ ಸಬ್ ಇನ್ಸ್‌ಪೆಕ್ಟರ್‌ ರಾಜಕುಮಾರ್ ಸದಾಶಿವ ಜೋಡಟ್ಟಿ ವಿರುದ್ಧ ನಗರ ಪೊಲೀಸ್ ಆಯುಕ್ತರು ಹಾಗೂ ದಕ್ಷಿಣ ವಿಭಾಗದ ಡಿಸಿಪಿ ಅವರಿಗೆ ಸಂತ್ರಸ್ತೆಯ ಸೋದರ ಪ್ರತ್ಯೇಕ ದೂರುಗಳನ್ನು ನೀಡಿದ್ದಾರೆ.

ಈ ದೂರಿನ ಮೇರೆಗೆ ಪಿಎಸ್‌ಐ ರಾಜಕುಮಾರ್‌ ವಿರುದ್ಧ ಹನುಮಂತರ ನಗರ ಠಾಣೆ ಇನ್ಸ್‌ಪೆಕ್ಟರ್ ವಿನೋದ್ ಭಟ್‌ ನೇತೃತ್ವದಲ್ಲಿ ಇಲಾಖಾ ಮಟ್ಟದ ವಿಚಾರಣೆ ನಡೆದಿದ್ದು, ಈ ಆರೋಪಗಳಿಗೆ ಸೂಕ್ತ ಸಾಕ್ಷ್ಯಧಾರಗಳಿಲ್ಲವೆಂದು ಡಿಸಿಪಿರವರಿಗೆ ಪಿಐ ವಿನೋದ್ ವರದಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಏನಿದು ಆರೋಪ?: 3 ವರ್ಷಗಳ ಹಿಂದೆ ಫೇಸ್‌ಬುಕ್ ಮೂಲಕ ಪಿಎಸ್‌ಐ ರಾಜ್ ಕುಮಾರ್‌ಗೆ ಮೈಸೂರಿನಲ್ಲಿ ಎಂಬಿಬಿಎಸ್ ಓದುತ್ತಿದ್ದ ಸಂತ್ರಸ್ತೆ ಪರಿಚಯವಾಗಿದ್ದಳು. ಆ ವೇಳೆ ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿ ರಾಜ್ ಕುಮಾರ್ ಸಹ ತರಬೇತಿಯಲ್ಲಿದ್ದರು. ಈ ಗೆಳೆತನದ ಬಳಿಕ ಮಾತುಕತೆ ನಡೆದೂ ಪರಸ್ಪರ ಆತ್ಮೀಯತೆ ಮೂಡಿದೆ. ಓದು ಮುಗಿದ ನಂತರ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಆಕೆ ಕೆಲಸಕ್ಕೆ ಸೇರಿದ್ದಳು. ಆಗ ತಮಗೆ ಆರ್ಥಿಕ ತೊಂದರೆ ಇದೆ ಎಂದು ಹೇಳಿ 1.75 ಲಕ್ಷ ರು ಹಣವನ್ನು ಹಂತ ಹಂತವಾಗಿ ಪಿಎಸ್‌ಐ ವಸೂಲಿ ಮಾಡಿದ್ದರು.

ಇತ್ತೀಚಿಗೆ ಈ ಹಣ ಕೇಳಿದರೆ ತಾನು ಪಿಎಸ್‌ಐ ಎಂದು ಹೇಳಿ ಬೆದರಿಸುತ್ತಿದ್ದರು. ಅಲ್ಲದೆ ನಗ್ನ ಪೋಟೋಗಳನ್ನು ಕಳುಹಿಸುವಂತೆ ಕಿರುಕುಳ ಕೊಡುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹಾಗೂ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಭರಮಪ್ಪ ಜಗಲಾಸರ್‌ ಅವರಿಗೆ ಸಂತ್ರಸ್ತೆ ಸೋದರ ಎನ್ನಲಾದ ವ್ಯಕ್ತಿ ಪ್ರತ್ಯೇಕ ದೂರುಗಳನ್ನು ಸಲ್ಲಿಸಿದ್ದರು.

ಹೆಣ್ಣಿನ ಧ್ವನಿಯಲ್ಲಿ ಮಾತನಾಡಿದ್ದು ಪುರುಷ: 3 ವರ್ಷಗಳಿಂದ ಸ್ನೇಹವಿದ್ದರೂ ಯಾವತ್ತೂ ಸಂತ್ರಸ್ತೆಯನ್ನು ಪಿಎಸ್‌ಐ ಖುದ್ದು ಭೇಟಿ ಮಾಡಿರಲಿಲ್ಲ. ಹೀಗಾಗಿ ಮೊಬೈಲ್‌ನಲ್ಲಿ ಮಾತ್ರವಷ್ಟೇ ಇಬ್ಬರ ನಡುವೆ ಮಾತುಕತೆ ನಡೆದಿತ್ತು. ಈ ಹಿನ್ನಲೆ ಹೆಣ್ಣಿನ ದನಿಯಲ್ಲಿ ಪಿಎಸ್‌ಐ ಜತೆ ಪುರುಷನೊಬ್ಬ ಸಲುಗೆಯಿಂದ ಮಾತನಾಡಿರುವ ಅನುಮಾನವಿದೆ. ಅಲ್ಲದೆ ಪಿಎಸ್‌ಐ ಖಾತೆಗೆ ಈಗ ದೂರು ನೀಡಿರುವ ವ್ಯಕ್ತಿಯ ಖಾತೆಯಿಂದಲೇ ಹಣ ವರ್ಗಾವಣೆಯಾಗಿದೆ. ಹೀಗಾಗಿ ದೂರುದಾರನ ನಡವಳಿಕೆ ಶಂಕಾಸ್ಪದವಾಗಿದೆ.

ಖಾಸಗಿ ಆಸ್ಪತ್ರೆಯ ವೈದ್ಯೆಗೆ ಕಿರುಕುಳ ನೀಡಿ ಹಣ ವಸೂಲಿ ಆರೋಪ ಸಂಬಂಧ ಪಿಎಸ್‌ಐ ವಿರುದ್ಧ ಇಲಾಖಾ ಮಟ್ಟದ ಆಂತರಿಕ ವಿಚಾರಣೆ ನಡೆಸಿ ವರದಿ ಪಡೆಯಲಾಗಿದ್ದು, ಇದರಲ್ಲಿ ಸಾಕ್ಷ್ಯಗಳ ಕೊರತೆ ಕಂಡು ಬಂದಿದೆ. ಈ ಬಗ್ಗೆ ಕಿರುಕುಳಕ್ಕೊಳಗಾದ ಸಂತ್ರಸ್ತೆ ಖುದ್ದು ನನ್ನನ್ನು ಭೇಟಿಯಾಗಿ ಲಿಖಿತ ದೂರು ನೀಡಿದರೆ ತನಿಖೆ ನಡೆಸಲಾಗುತ್ತದೆ.

-ಲೋಕೇಶ್ ಭರಮಪ್ಪ ಜಗಲಾಸರ್‌, ಡಿಸಿಪಿ, ದಕ್ಷಿಣ ವಿಭಾಗ