ಸಾರಾಂಶ
ದ್ವಿಚಕ್ರ ವಾಹನ ಮುಂದೆ ಹೋಗುತ್ತಿದ್ದ ಮತ್ತೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟು ಹಿಂಬದಿ ಸವಾರ ಗಾಯಗೊಂಡಿರುವ ಘಟನೆ ತಲಘಟ್ಟಪುರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು : ಸಾಕುನಾಯಿ ಕೂರಿಸಿಕೊಂಡು ಹೋಗುವಾಗ ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನ ಮುಂದೆ ಹೋಗುತ್ತಿದ್ದ ಮತ್ತೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟು ಹಿಂಬದಿ ಸವಾರ ಗಾಯಗೊಂಡಿರುವ ಘಟನೆ ತಲಘಟ್ಟಪುರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗೊಟ್ಟಿಗೆರೆ ವೀವರ್ಸ್ ಕಾಲೋನಿ ನಿವಾಸಿ ಚೇತನ್ (24) ಮೃತ ಸವಾರ. ಹಿಂಬದಿ ಸವಾರ ಜಯರಾಮ್ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಾನುವಾರ ರಾತ್ರಿ ಸುಮಾರು 9.15ಕ್ಕೆ ನೈಸ್ ರಸ್ತೆಯ ಕನಕಪುರ ಟೋಲ್ ಬಳಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ಸವಾರ ಚೇತನ್ ಮತ್ತು ಆತನ ಸ್ನೇಹಿತ ಜಯರಾಮ್ ಭಾನುವಾರ ದ್ವಿಚಕ್ರ ವಾಹನದಲ್ಲಿ ಸಾಕು ನಾಯಿ ಕೂರಿಸಿಕೊಂಡು ತುಮಕೂರು ಸಮೀಪದ ದೇವಸ್ಥಾನಕ್ಕೆ ತೆರಳಿದ್ದರು. ರಾತ್ರಿ ದೇವಸ್ಥಾನದಿಂದ ಮನೆಗೆ ವಾಪಸ್ ಬರುವಾಗ ಮಾರ್ಗ ಮಧ್ಯೆ ನೈಸ್ ರಸ್ತೆಯ ಕನಕಪುರ ಟೋಲ್ ಬಳಿ ಚೇತನ್ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಮತ್ತೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸಾಕು ನಾಯಿ ಸಮೇತ ಇಬ್ಬರು ಸವಾರರು ರಸ್ತೆಗೆ ಬಿದ್ದಿದ್ದಾರೆ.
ಮಾರ್ಗ ಮಧ್ಯೆಯೇ ಮೃತ:
ಈ ವೇಳೆ ಗಾಯಗೊಂಡಿದ್ದ ಇಬ್ಬರು ಸವಾರರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪರೀಕ್ಷಿಸಿದ ವೈದ್ಯರು ಸವಾರ ಚೇತನ್ ಮಾರ್ಗ ಮಧ್ಯೆಯೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಹಿಂಬದಿ ಸವಾರ ಜಯರಾಮ್ ಸಣ್ಣ ಪ್ರಮಾಣದ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಚೇತನ್‌ನ ದ್ವಿಚಕ್ರ ವಾಹನ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಮತ್ತೊಂದು ದ್ವಿಚಕ್ರ ವಾಹನ ಸವಾರ ತರಚಿದ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ತಲಘಟ್ಟಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.