ಪಾಲಿಕೆಯ ಎಫ್‌ಸಿ ಮುಗಿದ 115 ವಾಹನ ಜಪ್ತಿಗೆ ಸೂಚನೆ

| Published : Apr 24 2025, 02:06 AM IST

ಸಾರಾಂಶ

ದಾವಣಗೆರೆ: ಖಾಸಗಿ ವ್ಯಕ್ತಿಯೊಬ್ಬ ಯಾವುದೇ ಅಧಿಕಾರ ಇಲ್ಲದೇ, ಪಾಲಿಕೆ ಕಡತ ನಿರ್ವಹಣೆ ಮಾಡುತ್ತಿರುವ ವೀಡಿಯೋ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಯನ್ನು ತಕ್ಷಣವೇ ಇಲಾಖೆ ವಿಚಾರಣೆ ಕಾಯ್ದಿಸಿ, ಅಮಾನತು ಮಾಡುವ ಜೊತೆಗೆ ಖಾಸಗಿ ವ್ಯಕ್ತಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡುವಂತೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಪಾಲಿಕೆ ಆಯುಕ್ತೆ ಜಿ.ರೇಣುಕಾರಿಗೆ ತಾಕೀತು ಮಾಡಿದರು.

ನಗರದ ಪಾಲಿಕೆ ಕಚೇರಿಗೆ ಬುಧವಾರ ದಿಢೀರ್ ಭೇಟಿ ನೀಡಿದ್ದ ವೇಳೆ ವಿವಿಧ ಶಾಖೆಗಳ ಕಡತ, ಹಾಜರಾತಿ ಪುಸ್ತಕ, ಚಲನ ವಲನ ವಹಿ, ನಗದು ಘೋಷಣಾ ವಹಿ ಇತರೆ ದಾಖಲೆಗಳನ್ನು ಪರಿಶೀಲಿಸಿ, ಮಾಹಿತಿ ಪಡೆದ ನಂತರ ಎಂಜಿನಿಯರಿಂಗ್ ವಿಭಾಗದಲ್ಲಿ ಸೂಕ್ತ ದಾಖಲೆಗಳನ್ನು ನೀಡದ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಸ್ವಯಂ ಪ್ರೇರಿತ ದೂರು ದಾಖಲಿಸಿದರು.

ನಿಯಮ ಬಾಹಿರವಾಗಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗುತ್ತಿದೆಯೇ? ಒಂದು ವೇಳೆ ನಿಯಮ ಬಾಹಿರವಾಗಿ ಕಟ್ಟಡ ನಿರ್ಮಾಣ ಮಾಡಿದ್ದರೆ ಅಂತಹವರಿಗೆ ನೋಟಿಸ್‌ ನೀಡಲಾಗಿದೆಯೇ? ಈವರೆಗೆ ಎಷ್ಟು ನೋಟಿಸ್ ನೀಡಿದ್ದೀರಿ ? ವಲಯದ 3ರ ಉಪ ಆಯುಕ್ತೆ ಈರಮ್ಮ ಹಾಗೂ ವಿಷಯ ನಿರ್ವಾಹಕಿ ನೇತ್ರಾ ಇಬ್ಬರನ್ನೂ ಅಮಾನತು ಮಾಡುವಂತೆ ಆಯುಕ್ತೆ ರೇಣುಕಾ ಶಿಫಾರಸ್ಸು ಮಾಡಿದ್ದಾರೆ.

ಕಸ ಸಂಗ್ರಹ, ವಿಲೇವಾರಿ, ಅಧಿಕಾರಿಗಳ ವಾಹನ ಸೇರಿ ಪಾಲಿಕೆ ಬಳಿ 200 ವಾಹನವಿದ್ದು, ಅವುಗಳಲ್ಲಿ ಎಷ್ಟು ವಾಹನಗಳಿಗೆ ಎಫ್‌ಸಿ ಮುಗಿದಿವೆಯೆಂದು ಉಪ ಲೋಕಾಯುಕ್ತರು ಪ್ರಶ್ನಿಸಿದರು.ಆಗ ಅಧಿಕಾರಿ 15 ವಾಹನಗಳ ಎಫ್‌ಸಿ ಮುಗಿದಿದೆಯೆಂಬ ತಪ್ಪು ಮಾಹಿತಿ ನೀಡಿದ್ದರಿಂದ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಇನ್ನು ಒಂದೆರೆಡು ಗಂಟೆಯಲ್ಲೇ ಪಾಲಿಕೆಯ ಎಲ್ಲಾ 200 ವಾಹನಗಳನ್ನು ಪರಿಶೀಲಿಸಿ, ವರದಿ ನೀಡುವಂತೆ ಆದೇಶಿಸಿದರು.

ಸಂಜೆ ಹೊತ್ತಿಗೆ ಸಾರಿಗೆ ಇಲಾಖೆ ಅಧಿಕಾರಿಗಳು ಪಾಲಿಕೆಯ 200 ವಾಹನಗಳಲ್ಲಿ 115 ವಾಹನಗಳಿಗೆ ಎಫ್‌ಸಿ ಮುಗಿದ ವರದಿ ನೀಡಿದ ಹಿನ್ನೆಲೆಯಲ್ಲಿ ಪಾಲಿಕೆಯ 115 ವಾಹನಗಳ ಜಪ್ತಿಗೆ ಸ್ಥಳದಲ್ಲೇ ಉಪ ಲೋಕಾಯುಕ್ತರು ಆರ್‌ಟಿಓಗೆ ಆದೇಶಿಸಿದರು.