ಸಾರಾಂಶ
ಚಾಲಕನಿಗೆ ಜೀವ ಬೆದರಿಕೆ ಹಾಕಿ ಕ್ಯಾಬ್ ದೋಚಿ ಪರಾರಿಯಾಗಿದ್ದ ರೌಡಿಯೊಬ್ಬನನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೆಲವೇ ತಾಸುಗಳಲ್ಲಿ ಪುಲಿಕೇಶಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಚಾಲಕನಿಗೆ ಜೀವ ಬೆದರಿಕೆ ಹಾಕಿ ಕ್ಯಾಬ್ ದೋಚಿ ಪರಾರಿಯಾಗಿದ್ದ ರೌಡಿಯೊಬ್ಬನನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೆಲವೇ ತಾಸುಗಳಲ್ಲಿ ಪುಲಿಕೇಶಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಡಿ.ಜೆ. ಹಳ್ಳಿ ನಿವಾಸಿ ಮನ್ಸೂರ್ ಬಂಧಿತನಾಗಿದ್ದು, ಪುಲಿಕೇಶಿನಗರ ಸಮೀಪ ಮಂಗಳವಾರ ನಸುಕಿನ 4.30 ಗಂಟೆಯಲ್ಲಿ ಕ್ಯಾಬ್ ಚಾಲಕನನ್ನು ಅಡ್ಡಗಟ್ಟಿ ಚಾಕು ತೋರಿಸಿ ಬೆದರಿಕೆ ಹಾಕಿ ಈ ಕೃತ್ಯ ಎಸಗಿ ಮನ್ಸೂರ್ ಪರಾರಿಯಾಗಿದ್ದ. ಈ ಬಗ್ಗೆ ಸಂತ್ರಸ್ತ ನೀಡಿದ ದೂರಿನ ಮೇರೆಗೆ ತನಿಖೆಗಿಳಿದ ಪೊಲೀಸರು, 24 ತಾಸಿನೊಳಗೆ ಆರೋಪಿಯನ್ನು ಬಂಧಿಸಿದ್ದಾರೆ.
ಮನ್ಸೂರ್ ವೃತ್ತಿಪರ ಕ್ರಿಮಿನಲ್ ಆಗಿದ್ದು, ಆತನ ಮೇಲೆ ದರೋಡೆ, ಸುಲಿಗೆ ಹಾಗೂ ಕೊಲೆ ಯತ್ನ ಸೇರಿದಂತೆ 14 ಪ್ರಕರಣಗಳು ದಾಖಲಾಗಿವೆ. ಅಲ್ಲದೆ ಹಳೇ ಪ್ರಕರಣಗಳ ವಿಚಾರಣೆಗೆ ಗೈರು ಹಿನ್ನೆಲೆಯಲ್ಲಿ ಆತನ ಮೇಲೆ ನ್ಯಾಯಾಲಯವು ವಾರೆಂಟ್ ಸಹ ಜಾರಿಗೊಳಿಸಿತ್ತು. ಮುಂಜಾನೆ ಹೊತ್ತು ಏಕಾಂಗಿಯಾಗಿ ಸಂಚರಿಸುವ ಜನರಿಗೆ ಬೆದರಿಸಿ ಸುಲಿಗೆ ಕೃತ್ಯಕ್ಕೆ ಆತ ಕುಖ್ಯಾತನಾಗಿದ್ದ. ಅಂತೆಯೇ ಮಂಗಳವಾರ ನಸುಕಿನಲ್ಲಿ ಪುಲಿಕೇಶಿ ನಗರ ಸಮೀಪದ ಕ್ಯಾಬ್ ಚಾಲಕನನ್ನು ಅಡ್ಡಗಟ್ಟಿ 5 ಸಾವಿರ ನೀಡುವಂತೆ ಮನ್ಸೂರ್ ಬೆದರಿಸಿದ್ದಾನೆ. ಆದರೆ ತನ್ನ ಬಳಿ ಹಣವಿಲ್ಲವೆಂದಾಗ ಚಾಲಕನಿಗೆ ಚಾಕು ತೋರಿಸಿ ಕ್ಯಾಬ್ ನಿಂದ ಕೆಳಗಿಳಿಸಿದ ಆರೋಪಿ, ಬಳಿಕ ಆ ಕ್ಯಾಬ್‌ನನ್ನು ತೆಗೆದುಕೊಂಡು ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಈ ಬಗ್ಗೆ ಪುಲಿಕೇಶಿನಗರ ಠಾಣೆಗೆ ಸಂತ್ರಸ್ತ ಕ್ಯಾಬ್ ಚಾಲಕ ದೂರು ನೀಡಿದ್ದ. ಕೊನೆಗೆ ತಾಂತ್ರಿಕ ಮಾಹಿತಿ ಆಧರಿಸಿ ಇನ್ಸ್‌ಪೆಕ್ಟರ್ ಗೋವಿಂದರಾಜು ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.