ಹೋಟೆಲಲ್ಲಿ ಸ್ನೇಹಿತನಿಂದಲೇ ರೌಡಿಶೀಟರ್‌ ದಿನೇಶ್‌ ಕೊಲೆ; ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಶಂಕೆ

| Published : Mar 28 2024, 01:30 AM IST

ಹೋಟೆಲಲ್ಲಿ ಸ್ನೇಹಿತನಿಂದಲೇ ರೌಡಿಶೀಟರ್‌ ದಿನೇಶ್‌ ಕೊಲೆ; ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಶಂಕೆ
Share this Article
  • FB
  • TW
  • Linkdin
  • Email

ಸಾರಾಂಶ

ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಹೋಟೆಲ್‌ನಲ್ಲಿ ರೌಡಿಯೊಬ್ಬನನ್ನು ಆತನ ಸ್ನೇಹಿತನೇ ಕೊಂದು ಪರಾರಿ ಆಗಿರುವ ಘಟನೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಹೋಟೆಲ್‌ನಲ್ಲಿ ರೌಡಿಯೊಬ್ಬನನ್ನು ಆತನ ಸ್ನೇಹಿತನೇ ಕೊಂದು ಪರಾರಿ ಆಗಿರುವ ಘಟನೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.

ತಮಿಳುನಾಡು ಮೂಲದ ದಿನೇಶ್ (34) ಕೊಲೆಯಾದ ದುರ್ದೈವಿ. ಈ ಕೃತ್ಯ ಸಂಬಂಧ ಮೃತನ ಗೆಳೆಯನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಕಮ್ಮನಹಳ್ಳಿಯ ಪ್ಯಾರಡೇಸ್ ಇನ್‌ ಹೋಟೆಲ್‌ನಲ್ಲಿ ಮಧ್ಯಾಹ್ನ ಈ ಕೃತ್ಯ ನಡೆದಿದೆ.

ತಮಿಳುನಾಡು ಮೂಲದ ದಿನೇಶ್ ಕ್ರಿಮಿನಲ್ ಹಿನ್ನೆಲೆಯುವಳ್ಳನಾಗಿದ್ದು, ಆತನ ಮೇಲೆ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಅಲ್ಲದೆ ಕಮರ್ಷಿಯಲ್ ಸ್ಟ್ರೀಟ್ ಠಾಣೆಯ ರೌಡಿಪಟ್ಟಿಯಲ್ಲಿ ದಿನೇಶ್ ಹೆಸರಿತ್ತು. ಮೊದಲು ಬಾಣಸವಾಡಿ ಸಮೀಪ ಟ್ಯಾನರಿ ರಸ್ತೆಯ ಬಳಿ ನೆಲೆಸಿದ್ದ ಆತ, ಇತ್ತೀಚಿಗೆ ತನ್ನ ವಾಸ್ತವ್ಯವನ್ನು ತಮಿಳುನಾಡಿಗೆ ಬದಲಾಯಿಸಿದ್ದ. ಕಮ್ಮನಹಳ್ಳಿ ಪ್ಯಾರಡೇಸ್ ಇನ್‌ ಹೋಟೆಲ್‌ಗೆ ಓಯೋ ಮೂಲಕ ರೂಮ್ ಬುಕ್ ಮಾಡಿ ಗೆಳೆಯನ ಜತೆ ಬುಧವಾರ ಮಧ್ಯಾಹ್ನ ದಿನೇಶ್ ಬಂದಿದ್ದ.

ಆ ವೇಳೆ ಆತನಿಗೆ ಚಾಕುವಿನಿಂದ ಇರಿದು ಕೊಂದು ದಿನೇಶ್ ಸ್ನೇಹಿತ ಪರಾರಿಯಾಗಿದ್ದ. ಈ ಚೀರಾಟ ಕೇಳಿದ ಹೋಟೆಲ್ ಸಿಬ್ಬಂದಿ ತಕ್ಷಣವೇ ದಿನೇಶ್‌ ರಕ್ಷಿಸಿ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಆದರೆ ಅಷ್ಟರಲ್ಲಿ ಆತ ಕೊನೆಯುಸಿರೆಳೆದಿದ್ದಾನೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.