ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಹಳೆಯ ದ್ವೇಷದ ಹಿನ್ನೆಲೆಯಲ್ಲಿ ರೌಡಿಯೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆಗೈದು ಮೃತನ ಎದುರಾಳಿಗಳು ಪರಾರಿ ಆಗಿರುವ ಘಟನೆ ಕಾಟನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.
ಫ್ಲವರ್ ಗಾರ್ಡನ್ ನಿವಾಸಿ ಶಿವ ಅಲಿಯಾಸ್ ಶರತ್ (34) ಕೊಲೆಯಾದ ದುರ್ದೈವಿ. ಹತ್ಯೆ ಸಂಬಂಧ ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತನ್ನ ಪತ್ನಿ ಹಾಗೂ ಇಬ್ಬರ ಮಕ್ಕಳ ಜತೆ ಫ್ಲವರ್ ಗಾರ್ಡನ್‌ನಲ್ಲಿ ನೆಲೆಸಿದ್ದ ಶರತ್ ಹಲವು ವರ್ಷಗಳಿಂದ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿದ್ದು, ಈತನ ಮೇಲೆ ಕೊಲೆ ಮತ್ತು ಹಲ್ಲೆ ಸೇರಿದಂತೆ ಐದಾರು ಪ್ರಕರಣಗಳು ದಾಖಲಾಗಿದ್ದವು.
ಈ ಕ್ರಿಮಿನಲ್ ಚರಿತ್ರೆ ಹಿನ್ನೆಲೆಯಲ್ಲಿ ಆತನ ಮೇಲೆ ಕಾಟನ್‌ಪೇಟೆ ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಗಿತ್ತು. 2020ರಲ್ಲಿ ರೌಡಿ ಸಕ್ಕರೆ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ನಂತರ ಜಾಮೀನು ಪಡೆದು ಹೊರಬಂದಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಶುಕ್ರವಾರ ರಾತ್ರಿ ತನ್ನ ಗೆಳೆಯನ ಜತೆ ಮದ್ಯ ಸೇವಿಸಿ ಮನೆಗೆ 9.30ರ ಸುಮಾರಿಗೆ ಶರತ್ ಮರಳುತ್ತಿದ್ದ. ಬೈಕ್‌ನಲ್ಲಿ ಶರತ್‌ನನ್ನು ಆತನ ಗೆಳೆಯ ಮನೆ ಬಳಿ ಡ್ರಾಪ್ ಮಾಡಿ ತೆರಳುತ್ತಿದ್ದಂತೆ ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಠಾತ್ ದಾಳಿ ನಡೆಸಿದ್ದಾರೆ.
ಈ ಅನಿರೀಕ್ಷಿತ ದಾಳಿಯಿಂದ ಹೆದರಿ ಪ್ರಾಣ ಉಳಿಸಿಕೊಳ್ಳಲು ಗಲ್ಲಿಗೆ ಶರತ್ ನುಗ್ಗಿದ್ದಾನೆ. ಆಗಲೂ ಆತನ ಬೆನ್ನತ್ತಿ ಹೋಗಿ ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದಾರೆ. ಘಟನೆಯಲ್ಲಿ ತೀವ್ರ ರಕ್ತಸ್ರಾವದಿಂದ ಆತ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ನೃತ್ಯ ಮಾಡುವಾಗ ಮೈ ತಾಕಿದ್ದಕ್ಕೆ
ಯುವಕಗೆ ಇರಿದು ಕೊಂದ ಗ್ಯಾಂಗ್
ಕನ್ನಡಪ್ರಭ ವಾರ್ತೆ ಬೆಂಗಳೂರು
ಶಿವರಾತ್ರಿ ಉತ್ಸವದ ವೇಳೆ ತಮಟೆ ಶಬ್ದಕ್ಕೆ ನೃತ್ಯ ಮಾಡುವ ವಿಚಾರವಾಗಿ ಯುವಕರ ಮಧ್ಯೆ ನಡೆದ ಗಲಾಟೆ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶ್ರೀನಗರದ ನಿವಾಸಿ ಯೋಗೇಶ್ ಕುಮಾರ್ (23) ಕೊಲೆಯಾದ ದುರ್ದೈವಿ. ಈ ಕೃತ್ಯ ಸಂಬಂಧ ಸ್ಥಳೀಯ ಕೆಲವು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಮುನೇಶ್ವರ ಬ್ಲಾಕ್‌ನಲ್ಲಿ ಶಿವರಾತ್ರಿ ಹಬ್ಬದ ನಿಮಿತ್ತ ಶುಕ್ರವಾರ ರಾತ್ರಿ 1.30ರಲ್ಲಿ ದೇವರ ಉತ್ಸವದ ವೇಳೆ ಈ ಗಲಾಟೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೃತ ಯೋಗೇಶ್ ಮಂಡ್ಯ ಜಿಲ್ಲೆ ಕೊಪ್ಪದವನಾಗಿದ್ದು, ಹಲವು ವರ್ಷಗಳಿಂದ ನಗರದಲ್ಲಿ ವಾಹನ ಸರ್ವೀಸ್ ಸೆಂಟರ್‌ನಲ್ಲಿ ಕೆಲಸ ಮಾಡಿಕೊಂಡು ಶ್ರೀನಗರದಲ್ಲಿ ನೆಲೆಸಿದ್ದ. ಶಿವರಾತ್ರಿ ಹಬ್ಬದ ನಿಮಿತ್ತ ಮುನೇಶ್ವರ ಬ್ಲಾಕ್‌ನಲ್ಲಿದ್ದ ದೇವಾಲಯಕ್ಕೆ ರಾತ್ರಿ ಆತ ಬಂದಿದ್ದ. ಆ ವೇಳೆ ಉತ್ಸವದಲ್ಲಿ ತಮಟೆ ಶಬ್ದಕ್ಕೆ ಕುಣಿಯುವಾಗ ಯುವಕರಿಗೆ ಮೈ ಮುಟ್ಟಿದ ಕಾರಣಕ್ಕೆ ಜಗಳವಾಗಿದೆ. ಬಳಿಕ ಕೆರಳಿದ ಕೆಲವರು, ಯೋಗೇಶ್‌ಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.