ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ: ಮುಖ್ಯಶಿಕ್ಷಕನಿಗೆ 6 ವರ್ಷ ಸಜೆ, 20 ಸಾವಿರ ದಂಡ

| Published : Mar 28 2024, 12:53 AM IST / Updated: Mar 28 2024, 12:54 AM IST

ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ: ಮುಖ್ಯಶಿಕ್ಷಕನಿಗೆ 6 ವರ್ಷ ಸಜೆ, 20 ಸಾವಿರ ದಂಡ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷೆಗೊಳಗಾದ ಮುಖ್ಯ ಶಿಕ್ಷಕ ಎಸ್.ಎನ್.ಶಿವರಾಮು ಮೂಲತಹ ಕುಣಿಗಲ್ ತಾಲೂಕು ಹುಲಿಯೂರುದುರ್ಗ ಹೋಬಳಿಯ ಶಿವರಾಂಪುರ ಗ್ರಾಮದವರು. ನಿಡಘಟ್ಟ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಈತ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಆಕೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.

ಕನ್ನಡಪ್ರಭ ವಾರ್ತೆ ಮದ್ದೂರು

ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಮುಖ್ಯ ಶಿಕ್ಷಕನಿಗೆ ಮಂಡ್ಯ ಪೋಕ್ಸೋ ವಿಶೇಷ ನ್ಯಾಯಾಲಯ 6 ವರ್ಷ ಕಠಿಣ ಸಜೆ ಹಾಗೂ 20 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ಮದ್ದೂರು ನಿಡಘಟ್ಟ ಗ್ರಾಮದ ಉನ್ನತಿಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಎಸ್.ಎನ್. ಶಿವರಾಮು (56) ಶಿಕ್ಷೆಗೊಳಗಾದ ಅಪರಾಧಿ.

ಈತನಿಗೆ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶಬಾನ ಬೇಗಂ ಲಾಡ್ ಖಾನ್ ಅವರು ಅಪರಾಧಿಗೆ 6 ವರ್ಷ ಕಠಿಣ ಸಜೆ ಹಾಗೂ 20 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಆರೋಪಿ ಪಾವತಿಸುವ ದಂಡದ ಹಣವನ್ನು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿಗೆ ಪರಿಹಾರ ರೂಪದಲ್ಲಿ ಪಾವತಿಸುವಂತೆ ನ್ಯಾಯಾಧೀಶರು ತೀರ್ಪಿನಲ್ಲಿ ಆದೇಶ ಹೊರಡಿಸಿದ್ದಾರೆ.

ಶಿಕ್ಷೆಗೊಳಗಾದ ಮುಖ್ಯ ಶಿಕ್ಷಕ ಎಸ್.ಎನ್.ಶಿವರಾಮು ಮೂಲತಹ ಕುಣಿಗಲ್ ತಾಲೂಕು ಹುಲಿಯೂರುದುರ್ಗ ಹೋಬಳಿಯ ಶಿವರಾಂಪುರ ಗ್ರಾಮದವರು. ನಿಡಘಟ್ಟ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು.

ಈತ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಆಕೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಮದ್ದೂರು ಠಾಣೆಯ ಅಂದಿನ ಪಿಎಸ್ಐ ಆರ್. ಬಿ. ಉಮೇಶ್ ಪ್ರಕರಣ ದಾಖಲು ಮಾಡಿಕೊಂಡ ನಂತರ ಈಗಿನ ಪಿಎಸ್ಐ ಮಂಜುನಾಥ್ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದರು.

ನಂತರ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶರಾದ ಶಬಾನ ಬೇಗಂ ಲಾಡ್ ಖಾನ್ ಆರೋಪಿಗೆ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ಪ್ರಕಟಿಸಿದರು. ಪ್ರಾಸಿಕ್ಯೂಷನ ಪರ ವಿಶೇಷ ಸರ್ಕಾರಿ ಅಭಿಯೋಜಕರಾದ ಎಂ.ಕೆ.ಪೂರ್ಣಿಮಾ ವಾದ ಮಂಡಿಸಿದ್ದರು.