ಶೂಟ್‌ ಮಾಡಿ ಚಿನ್ನದಂಗಡಿ ಲೂಟಿಗೆ ಯತ್ನ

| Published : Mar 15 2024, 01:16 AM IST / Updated: Mar 15 2024, 01:17 PM IST

ಸಾರಾಂಶ

ಬೆಂಗಳೂರಿನ ಲೊಟ್ಟೆಗೊಲ್ಲಹಳ್ಳಿಯ ಚಿನ್ನದ ಅಂಗಡಿಯಲ್ಲಿ ಗುಂಡು ಹಾರಿಸಿ ಚಿನ್ನದ ಲೂಟಿಗೆ ಯತ್ನಿಸಿದ ಘಟನೆ ನಡೆದಿದೆ. ನಾಲ್ವರು ಮುಸುಕುದಾರಿಗಳು ಬೈಕ್‌ನಲ್ಲಿ ಪರಾರಿ ಆಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಚಿನ್ನಾಭರಣ ಮಾರಾಟ ಮಳಿಗೆಯೊಂದಕ್ಕೆ ನಾಲ್ವರು ದುಷ್ಕರ್ಮಿಗಳು ನುಗ್ಗಿ ಗುಂಡಿನ ದಾಳಿ ನಡೆಸಿ ದರೋಡೆಗೆ ಯತ್ನಿಸಿರುವ ಘಟನೆ ರಾಜಧಾನಿಯಲ್ಲಿ ಹಾಡಹಗಲೇ ಗುರುವಾರ ನಡೆದಿದೆ.

ಲೊಟ್ಟೆಗೊಲ್ಲಹಳ್ಳಿ ಸಮೀಪದ ದೇವಿನಗರದ ‘ಲಕ್ಷ್ಮೀ ಬ್ಯಾಂಕರ್ಸ್ ಆ್ಯಂಡ್ ಜ್ಯುವೆಲರ್ಸ್’ನಲ್ಲಿ ಈ ಘಟನೆ ನಡೆದಿದ್ದು, ಗುಂಡೇಟಿನಿಂದ ಗಾಯಗೊಂಡಿದ್ದ ಅಂಗಡಿ ಮಾಲಿಕ ಅಪ್ಪುರಾವ್ ಹಾಗೂ ಕೆಲಸಗಾರ ಆನಂತರಾಮ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಗಾಯಾಳುಗಳು ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗುರುವಾರ ಬೆಳಗ್ಗೆ ತಮ್ಮ ಅಂಗಡಿ ಬಾಗಿಲು ತೆರೆದು ಅಪ್ಪುರಾವ್ ವಹಿವಾಟು ಶುರು ಮಾಡಿದ ಕೆಲವೇ ತಾಸಿನಲ್ಲಿ ಮುಸುಕುಧಾರಿ ನಾಲ್ವರು ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. 

ಈ ವೇಳೆ ಅಂಗಡಿ ಮಾಲಿಕ ಹಾಗೂ ಸಿಬ್ಬಂದಿ ಪ್ರತಿರೋಧ ತೋರಿದಾಗ ಎರಡು ಬಾರಿ ಗುಂಡಿನ ದಾಳಿ ನಡೆಸಿದ್ದಾರೆ. ಈ ಚೀರಾಟ ಕೇಳಿ ಜನರು ಜಮಾಯಿಸುತ್ತಿದ್ದಂತೆ ಸ್ಥಳದಲ್ಲೇ ತಮ್ಮ ನಾಡ ಪಿಸ್ತೂಲ್ ಬಿಸಾಕಿ ಬೈಕ್‌ಗಳಲ್ಲಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. 

ಕೂಡಲೇ ಗಾಯಾಳುಗಳನ್ನು ರಕ್ಷಿಸಿ ಖಾಸಗಿ ಆಸ್ಪತ್ರೆಗೆ ಸಾರ್ವಜನಿಕರು ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಿರುಚಾಡಿದ್ದಕ್ಕೆ ಶೂಟ್‌: ರಾಜಸ್ಥಾನ ಮೂಲದ ಅಪ್ಪುರಾವ್‌, ಹಲವು ವರ್ಷಗಳಿಂದ ಲೊಟ್ಟೆಗೊಲ್ಲಹಳ್ಳಿ ಹತ್ತಿರದ ದೇವಿನಗರದಲ್ಲಿ ‘ಲಕ್ಷ್ಮೀ ಬ್ಯಾಂಕರ್ಸ್ ಅ್ಯಂಡ್ ಜ್ಯವೆಲರ್ಸ್’ ಹೆಸರಿನ ಆಭರಣ ಮಾರಾಟ ಮಳಿಗೆ ನಡೆಸುತ್ತಿದ್ದಾರೆ. 

ಈ ಅಂಗಡಿಯಲ್ಲಿ ನಾಲ್ಕೈದು ಮಂದಿ ಕೆಲಸ ಮಾಡುತ್ತಾರೆ. ಬೆಳಗ್ಗೆ 11.15ರ ಸುಮಾರಿಗೆ ಅಪ್ಪುರಾವ್‌ ಅಂಗಡಿಯಲ್ಲಿದ್ದಾಗ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ನಾಲ್ವರು ದರೋಡೆಕೋರರು ಬಂದಿದ್ದಾರೆ. ಈ ನಾಲ್ವರ ಪೈಕಿ ಇಬ್ಬರು ಅಂಗಡಿ ಹೊರಗೆ ನಿಂತು ಪೊಲೀಸರ ಬಗ್ಗೆ ಎಚ್ಚರಿಕೆವಹಿಸಿದ್ದಾರೆ.

ಅಂಗಡಿಯೊಳಗೆ ನುಗ್ಗಿ ಅಪ್ಪುರಾವ್ ಅವರಿಗೆ ಪಿಸ್ತೂಲ್ ತೋರಿಸಿ ಚಿನ್ನಾಭರಣ ನೀಡುವಂತೆ ಮತ್ತಿಬ್ಬರು ಬೆದರಿಸಿದ್ದರು. ಆಗ ಭಯಗೊಂಡ ಅಪ್ಪುರಾವ್‌, ರಕ್ಷಣೆಗೆ ಜೋರಾಗಿ ಕೂಗಿದಾಗ ಮಾಲಿಕರ ರಕ್ಷಣೆಗೆ ಧಾವಿಸಿದ ಕೆಲಸಗಾರರು, ಮುಸುಕುಧಾರಿಗಳಿಗೆ ಪ್ರತಿರೋಧ ತೋರಿದ್ದಾರೆ. 

ಈ ಹಂತದಲ್ಲಿ ಕೂಗಾಟ ಜೋರಾಗಿದ್ದರಿಂದ ಭೀತಿಗೊಂಡ ದರೋಡೆಕೋರರು, ಏಕಾಏಕಿ ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ. ಆಗ ಅಪ್ಪುರಾವ್ ಅವರ ಹೊಟ್ಟೆಗೆ ಒಂದು ಹಾಗೂ ಕೆಲಸಗಾರ ಅನಂತರಾಮ್ ಅವರ ಕಾಲಿಗೆ ಒಂದು ಗುಂಡು ಹೊಕ್ಕಿವೆ. 

ಈ ಗುಂಡಿನ ಸದ್ದು ಕೇಳಿ ಜನರು ಜಮಾಯಿಸುತ್ತಿದ್ದಂತೆ ಹೆದರಿ ಸ್ಥಳದಲ್ಲೇ ಎರಡು ಬೈಕ್‌ ಹಾಗೂ ಪಿಸ್ತೂಲ್ ಎಸೆದು ಕಿಡಿಗೇಡಿಗಳು ಕಾಲ್ಕಿತ್ತಿದ್ದಾರೆ.

ಕೂಡಲೇ ಗಾಯಾಳುಗಳನ್ನು ಸಮೀಪದ ಎಂ.ಎಸ್‌.ರಾಮಯ್ಯ ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ. ಗಾಯಾಳುಗಳಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಇಬ್ಬರು ಪ್ರಾಣಪಾಯದಿಂದ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ

ಗುಂಡಿನ ದಾಳಿ ಕೃತ್ಯವು ಚಿನ್ನದಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಲ್ಲದೆ ಕೃತ್ಯ ಎಸಗಿ ಬೈಕ್‌ನಲ್ಲಿ ದುಷ್ಕರ್ಮಿಗಳು ಪರಾರಿ ಆಗುವಾಗ ಸ್ಥಳೀಯರು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ಈ ಸುಳಿವು ಆಧರಿಸಿ ದರೋಡೆಕೋರರ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.ಡಿಜಿಪಿ-ಆಯುಕ್ತರ ಭೇಟಿ

ಈ ಗುಂಡಿನ ದಾಳಿ ವಿಚಾರ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್‌ ಮೋಹನ್ ಹಾಗೂ ಆಯುಕ್ತ ಬಿ.ದಯಾನಂದ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. 

ಚಿನ್ನಾಭರಣ ಅಂಗಡಿಯಲ್ಲಿ ದರೋಡೆಗೆ ಮುಸುಕುಧಾರಿಗಳು ಯತ್ನಿಸಿರುವುದು ಸ್ಪಷ್ಟವಾಗಿದೆ. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. -ಬಿ.ದಯಾನಂದ್, ಪೊಲೀಸ್ ಆಯುಕ್ತ.