ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಆಸ್ತಿಯ ಆಸೆಗಾಗಿ ಸ್ನೇಹಿತನೊಂದಿಗೆ ಸೇರಿ ಸ್ವಂತ ಮಗನೇ ತನ್ನ ತಂದೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಅಮಾನುಷ ಘಟನೆ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ದಾಸರಹಳ್ಳಿ ಕೆಂಪೇಗೌಡನಗರದ ಮಂಜಣ್ಣ (55) ಕೊಲೆಯಾದವರು. ಸೆ.2ರಂದು ಮಧ್ಯಾಹ್ನ ಮನೆಯ ಸೋಫಾದ ಮೇಲೆ ಮಲಗಿದ್ದ ಮಂಜಣ್ಣ ಅವರನ್ನು ಮಗ ಮನೋಜ್ ಮತ್ತು ಆತನ ಸ್ನೇಹಿತ ಪ್ರವೀಣ್ ರೆಡ್ಡಿ ಕುತ್ತಿಗೆಗೆ ಟವಲ್ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಬಳಿಕ ಹೃದಯಾಘಾತದಿಂದ ತಂದೆ ಮೃತಪಟ್ಟಿದ್ದಾರೆ ಎಂದು ಮನೋಜ್ ಕಥೆ ಕಟ್ಟಿದ್ದ. ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ಪ್ರವೀಣ್ ರೆಡ್ಡಿಯನ್ನು(26) ಬಂಧಿಸಿದ್ದು, ತಲೆಮರೆಸಿಕೊಂಡಿರುವ ಮೃತನ ಮಗ ಮನೋಜ್‌ಗಾಗಿ ಶೋಧ ಕಾರ್ಯ ನಡೆಸಿದ್ದಾರೆ.
ಕೊಲೆಯಾದ ಮಂಜಣ್ಣ ಆರ್ಥಿಕವಾಗಿ ಸ್ಥಿತಿವಂತರಾಗಿದ್ದರು. ಐದಾರು ಬಿಲ್ಡಿಂಗ್, ನಾಲ್ಕೈದು ನಿವೇಶನಗಳು ಹಾಗೂ ಒಂದು ವುಡ್ ವರ್ಕ್ಸ್ ಫ್ಯಾಕ್ಟರಿ ಹೊಂದಿದ್ದರು. ಮಂಜಣ್ಣಗೆ ಇಬ್ಬರು ಗಂಡು ಮಕ್ಕಳು ಇದ್ದರು. ಹಿರಿಯ ಮಗ ಮನೋಜ್ ಯಾವುದೇ ಕೆಲಸ ಮಾಡದೇ ಸುತ್ತಾಡಿಕೊಂಡು ಹಣಕ್ಕಾಗಿ ತಂದೆಯನ್ನು ಪೀಡಿಸುತ್ತಿದ್ದ. ಈ ನಡುವೆ ತಂದೆಯನ್ನು ಕೊಲೆ ಮಾಡಿದರೆ ತನಗೆ ಆಸ್ತಿ ಬರಲಿದೆ ಎಂದು ತನ್ನ ಸ್ನೇಹಿತ ಪ್ರವೀಣ್‌ಗೆ ಹೇಳಿದ್ದ. ಕೊಲೆಗೆ ಸಹಕರಿಸಿದರೆ ₹10 ಲಕ್ಷ ಕೊಡುವುದಾಗಿ ಆಸೆ ಹುಟ್ಟಿಸಿದ್ದ. ಈ ಸಂಚಿನಂತೆ ಸೆ.2ರಂದು ಮನೋಜ್ ಹಾಗೂ ಪ್ರವೀಣ್ ರೆಡ್ಡಿ ಮದ್ಯ ಸೇವಿಸಿದ್ದಾರೆ. ಬಳಿಕ ಮನೆಗೆ ಬಂದು ಸೋಫಾ ಮೇಲೆ ಮಲಗಿದ್ದ ಮಂಜಣ್ಣ ಅವರ ಕುತ್ತಿಗೆಗೆ ಟವೆಲ್ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದರು. ಬಳಿಕ ಹೃದಯಾಘಾತದಿಂದ ತಂದೆ ಮೃತಪಟ್ಟಿದ್ದಾರೆ ಎಂದು ಮನೋಜ್ ಕಥೆ ಕಟ್ಟಿದ್ದ. ಮಂಜಣ್ಣ ಸಾವಿನ ಬಗ್ಗೆ ಆರಂಭದಲ್ಲೇ ಅನುಮಾನಗೊಂಡಿದ್ದ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆ ಮಾಡಿಸಿ ಕುಟುಂಬಕ್ಕೆ ಹಸ್ತಾಂತರಿಸಿದ್ದರು. ಬಳಿಕ ಕುಟುಂಬದವರು ಮಂಜಣ್ಣ ಅವರ ಮೃತದೇಹದ ಅಂತ್ಯಕ್ರಿಯೆ ನೆರವೇರಿಸಿದ್ದರು.ಮರಣೋತ್ತರ ಪರೀಕ್ಷೆಯಲ್ಲಿ ಹಿನಕೃತ್ಯ ಬಯಲು:ಬಳಿಕ ವೈದ್ಯರು ನೀಡಿದ ಮರಣೋತ್ತರ ವರದಿಯಲ್ಲಿ ಮಂಜಣ್ಣ ಸಾವಿನ ರಹಸ್ಯ ಬಯಲಾಗಿದೆ. ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಮರಣೋತ್ತರ ವರದಿಯಲ್ಲಿ ಬೆಳಕಿಗೆ ಬಂದಿದೆ. ಬಳಿಕ ಪೊಲೀಸರು ತನಿಖೆಗೆ ಇಳಿದು ಮಂಜಣ್ಣ ಮನೆಯ ಸುತ್ತಮುತ್ತ ಕಟ್ಟಡಗಳ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದ್ದಾರೆ. ಈ ವೇಳೆ ಸೆ.2ರ ಮಧ್ಯಾಹ್ನ ಮನೋಜ್ ಮತ್ತು ಪ್ರವೀಣ್ ರೆಡ್ಡಿ ಮನೆ ಪ್ರವೇಶಿಸಿ ಕೆಲ ಹೊತ್ತಿನ ಬಳಿಕ ಗಾಬರಿಯಲ್ಲಿ ಹೊರಗೆ ಬರುವುದು ಗೊತ್ತಾಗಿದೆ. ಈ ಬಗ್ಗೆ ಅನುಮಾನಗೊಂಡ ಪೊಲೀಸರು ಇಬ್ಬರ ಮೊಬೈಲ್ ಕರೆಗಳ ವಿವರ ಸಂಗ್ರಹಿಸಿ ಪರಿಶೀಲಿಸಿದ್ದಾರೆ. ನಂತರ ಪ್ರವೀಣ್ ರೆಡ್ಡಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಮಂಜಣ್ಣ ಕೊಲೆ ರಹಸ್ಯ ಬಾಯ್ಬಿಟ್ಟಿದ್ದಾನೆ. ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.