ಸಾರಾಂಶ
ಬೆಂಗಳೂರು : ಬಹುಮಹಡಿಯ ಅಪಾರ್ಟ್‌ಮೆಂಟ್‌ವೊಂದರ 7ನೇ ಅಂತಸ್ತಿನಿಂದ ಜಿಗಿದು ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗೆದ್ದಲಹಳ್ಳಿ ಮಂತ್ರಿ ಸ್ಪ್ಲೆಂಡರ್ ಅಪಾರ್ಟ್‌ಮೆಂಟ್ ನಿವಾಸಿ ಆದೀವ್(16) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ನಗರದ ಖಾಸಗಿ ಶಾಲೆಯಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಸೋಮವಾರ ಮುಂಜಾನೆ ಸುಮಾರು 1.30ಕ್ಕೆ ಗೆದ್ದಲಹಳ್ಳಿಯ ಮಂತ್ರಿ ಸ್ಪ್ಲೆಂಡರ್ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ.
ಆದೀವ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳದಲ್ಲಿ ಸದ್ಯಕ್ಕೆ ಯಾವುದೇ ಮರಣಪತ್ರವೂ ಸಿಕ್ಕಿಲ್ಲ. ಮುಂದಿನ ತನಿಖೆಯಿಂದ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕ್ರಿಕೆಟ್ ತಂಡಕ್ಕೆ ಆಯ್ಕೆ ಆಗದ್ದಕ್ಕೆ ಬೇಸರ
ಮೃತ ಆದೀವ್ ಉತ್ತಪ್ರದೇಶದ ಮೂಲದ ಸುಮೀತ್ ಎಂಬುವವರ ಪುತ್ರನಾಗಿದ್ದಾನೆ. ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಸುಮೀತ್ 15 ವರ್ಷಗಳಿಂದ ಪತ್ನಿ ಮತ್ತು ಮಗನೊಂದಿಗೆ ನಗರದಲ್ಲಿ ನೆಲೆಸಿದ್ದಾರೆ. ನಗರದ ಖಾಸಗಿ ಶಾಲೆಯಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಆದೀವ್ ಕ್ರಿಕೆಟ್ ಆಟದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ. ಇತ್ತೀಚೆಗೆ ಶಾಲಾ ಕ್ರಿಕೆಟ್ ತಂಡಕ್ಕೆ ಆದೀವ್ ಆಯ್ಕೆಯಾಗಿರಲಿಲ್ಲ. ಇದರಿಂದ ಬೇಸರಗೊಂಡಿದ್ದ ಆತ ಶಾಲೆಯನ್ನು ಬದಲಿಸುವಂತೆ ಪೋಷಕರ ಬಳಿ ಮನವಿ ಮಾಡಿದ್ದ. ಇದಕ್ಕೆ ಪೋಷಕರು ನಿರಾಕರಿಸಿದ್ದರು. ಇದೇ ವಿಚಾರ ಸಂಬಂಧ ಭಾನುವಾರ ಬೆಳಗ್ಗೆ ತಂದೆ ಸುಮೀತ್ ಜತೆಗೆ ಆದೀವ್ ಜಗಳ ಸಹ ಮಾಡಿದ್ದ ಎಂದು ತಿಳಿದು ಬಂದಿದೆ.
ಮಧ್ಯಾಹ್ನ ಮನೆಯಿಂದ ಹೊರಗೆ ಹೋಗಿದ್ದ ಅದೀವ್, ಸಂಜೆಯಾದರೂ ಮನೆಗೆ ವಾಪಾಸ್ ಬಂದಿರಲಿಲ್ಲ. ಪೋಷಕರು ಆತನ ಮೊಬೈಲ್‌ಗೆ ಕರೆ ಮಾಡಿದಾಗ ಮನೆಗ ಬರುತ್ತಿರುವುದಾಗಿ ಹೇಳಿದ್ದ. ತಡರಾತ್ರಿ ಮನೆಗೆ ಬಂದಿದ್ದ ಆದೀವ್, ಮುಂಜಾನೆ ಸುಮಾರು 1.30ಕ್ಕೆ 7ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಶಾಲೆ ಬದಲಿಸುವ ವಿಚಾರಕ್ಕೆ ಮನಸ್ತಾಪ
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಹೆಣ್ಣೂರು ಠಾಣೆ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದೀವ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಶಾಲೆ ಬದಲಿಸುವ ವಿಚಾರಕ್ಕೆ ಪೋಷಕರ ಜತೆಗೆ ಮನಸ್ತಾಪ ಉಂಟಾಗಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಕಾರಣದಿಂದಲೇ ಆತ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯಿದೆ. ಈ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.