ನವದೆಹಲಿ: 19 ವರ್ಷಗಳ ಹಿಂದೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಆಟೋದ ಮೇಲೆ ಮರದ ಕೊಂಬೆ ಬಿದ್ದಿದ್ದರಿಂದ ಉಂಟಾದ ಅಪಘಾತದಲ್ಲಿ ಪಾರ್ಶ್ವವಾಯುವಿಗೆ ತುತ್ತಾಗಿದ್ದ ಆಟೋ ಚಾಲಕನಿಗೆ 25 ಲಕ್ಷ ರು. ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ.

ರಿಕ್ಷಾ ಮೇಲೆ ಬಿದ್ದು ಸಂಪೂರ್ಣ ಜಖಂ

 2007ರ ಜೂ.7ರಂದು ಬೆಂಗಳೂರಿನ ಆಟೋ ಚಾಲಕ ಕೆ.ಕೆ. ಉಮೇಶ್‌ ಕುಮಾರ್‌ ಎನ್ನುವವರು ಮಳೆ ಬರುತ್ತಿದ್ದ ಕಾರಣ ಚಿನ್ನಸ್ವಾಮಿ ಕ್ರೀಡಾಂಗಣದ ಸಮೀಪದಲ್ಲಿರುವ ಹಳೆಯ ಮರದ ಬಳಿ ಆಟೋ ನಿಲ್ಲಿಸಿದ್ದರು. ಈ ವೇಳೆ ಭಾರೀ ಮಳೆಯಿಂದಾಗಿ ಮರದ ಕೊಂಬೆ ಅವರ ರಿಕ್ಷಾ ಮೇಲೆ ಬಿದ್ದು ಸಂಪೂರ್ಣ ಜಖಂ ಆಗಿತ್ತು. ಈ ವೇಳೆ ಉಮೇಶ್‌ ಬೆನ್ನು ಮೂಳೆಗೆ ಪೆಟ್ಟಾಗಿತ್ತು. ಇದರಿಂದ ಅವರು ಸಂಪೂರ್ಣ ಪಾರ್ಶ್ವವಾಯುವಿಗೆ ತುತ್ತಾಗಿದ್ದರು.

ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಆಗಿನ ಬಿಬಿಎಂಪಿ ಆಯಕ್ತರನ್ನು ಹೊಣೆಗಾರರನ್ನಾಗಿ ಮಾಡಿ ಅರ್ಜಿ ಸಲ್ಲಿಸಿ, 50 ಲಕ್ಷ ರು. ಪರಿಹಾರಕ್ಕೆ ನ್ಯಾಯಾಲಯದ ಮೊರೆ ಹೋಗಿದ್ದರು, ಆದರೆ ಕರ್ನಾಟಕ ಹೈಕೋರ್ಟ್‌ ಅರ್ಜಿ ವಿಳಂಬದ ಕಾರಣ ನೀಡಿ ವಜಾಗೊಳಿಸಿತ್ತು.


ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು

ಬಳಿಕ ಈ ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಆಗ ಸರ್ವೋಚ್ಚ ನ್ಯಾಯಾಲಯ ಮತ್ತೆ ಅದನ್ನು ಹೈಕೋರ್ಟ್‌ಗೆ ವರ್ಗಾಯಿಸಿ 17.10 ಲಕ್ಷ ರು. ಪರಿಹಾರಕ್ಕೆ ಘೋಷಿಸಿತ್ತು. ಬಳಿಕ ಹೈಕೋರ್ಟ್‌ ಬಿಬಿಎಂಪಿ, ತೋಟಗಾರಿಕೆ ಇಲಾಖೆ ಮತ್ತು ಆಟೋರಿಕ್ಷಾ ವಿಮಾದಾರರು ಕ್ರಮವಾಗಿ ಶೇ.25, ಶೇ.25, ಶೇ.50ರಷ್ಟು ಪರಿಹಾರ ನೀಡಬೇಕೆಂದು ಸೂಚಿಸಿತ್ತು.

ಆದರೆ ಇದನ್ನು ಪ್ರಶ್ನಿಸಿ ಅಂದಿನ ಬಿಬಿಎಂಪಿ ಸುಪ್ರೀಂ ಮೊರೆ ಹೋಗಿತ್ತು. ‘ನೈಸರ್ಗಿಕ ಘಟನೆ, ದೇವರ ಕೃತ್ಯಕ್ಕೆ ತಮ್ಮನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ’ ಎಂದು ನ್ಯಾಯಾಲಯದ ಗಮನಕ್ಕೆ ತಂದಿತ್ತು. ಈ ಅರ್ಜಿ ವಿಚಾರಣೆ ಕೈಗೊಂಡ ಸುಪ್ರೀಂ ದ್ವಿಸದಸ್ಯ ಪೀಠ, ‘ಪ್ರತಿಯೊಂದು ಮರದ ಮೇಲೆ ನಿಗಾ ಇಡಲು ಸಾಧ್ಯವಿಲ್ಲ. ಆದರೆ ಅಪಾಯವಾಗದಂತೆ ಮರಗಳನ್ನು ನಿರ್ವಹಿಸುವುದು ಅಧಿಕಾರಿಗಳ ಕರ್ತವ್ಯ. ಮಳೆ ಬೀಳುವುದು ನಿರೀಕ್ಷಿತ, ಹಾಗಾಗಿ ರಸ್ತೆ ಬದಿಗಳಲ್ಲಿರುವ ಮರಗಳ ಗುಣಟ್ಟ ಅಧಿಕಾರಿಗಳು ನೋಡಿಕೊಳ್ಳಬೇಕು’ ಎಂದು ಅಭಿಪ್ರಾಯಪಟ್ಟಿದೆ.

ಜತೆಗೆ ಈ ಹಿಂದೆ ನೀಡಿದ್ದ 17.10 ಲಕ್ಷ ರು. ಪರಿಹಾರ ಮೊತ್ತವನ್ನು ಬಡ್ಡಿ ಸಮೇತ 25 ಲಕ್ಷ ರು. ಆಗಿ ಹೈಕೋರ್ಟ್‌ ನಿರ್ಧರಿಸಿದ್ದ ಅನುಪಾತದಲ್ಲಿ 4 ವಾರಗಳೊಳಗೆ ಪ್ರತಿವಾದಿಯ ಬ್ಯಾಂಕ್‌ಖಾತೆಗೆ ಜಮಾ ಮಾಡಲು ಆದೇಶಿಸಿದೆ.