ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಕಳೆದೊಂದು ವರ್ಷದ ಹಿಂದೆ ಮಗಳನ್ನು ಬರ್ಬರವಾಗಿ ಕೊಲೆ ಮಾಡಿದ್ದ ಯುವಕನ ತಂದೆಯನ್ನು ಕೊಲೆಗೈದು ಮೃತಳ ತಂದೆ ಪ್ರತೀಕಾರ ತೀರಿಸಿಕೊಂಡಿರುವ ಘಟನೆ ತಾಲೂಕಿನ ಮಾಣಿಕ್ಯನಹಳ್ಳಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.ಗ್ರಾಮದ ನರಸಿಂಹೇಗೌಡ (55) ಕೊಲೆಯಾದ ವ್ಯಕ್ತಿ. ಅದೇ ಗ್ರಾಮದ ವೆಂಕಟೇಶ್, ಮಂಜುನಾಥ್ ಕೊಲೆಗೈದು ಪೊಲೀಸರಿಗೆ ಶರಣಾಗಿದ್ದಾರೆ. ಮಗಳ ಕೊಲೆ ಪ್ರತೀಕಾರಕ್ಕೆ ಕೊಲೆ ಆರೋಪಿಯ ತಂದೆಯನ್ನು ಹತ್ಯೆ ಮಾಡಲಾಗಿದೆ.
ಕೊಲೆಯಾದ ನರಸಿಂಹೇಗೌಡ ಬೆಳ್ಳಾಳೆ ಗೇಟ್ ಬಳಿ ಅಂಗಡಿಯಲ್ಲಿ ಬೆಳಗ್ಗೆ ಟೀ ಕುಡಿಯುತ್ತ ಕುಳಿತಿದ್ದ ವೇಳೆ ಹಿಂಬದಿಯಿಂದ ಬಂದ ವೆಂಕಟೇಶ್, ಮಂಜುನಾಥ್ ಚಾಕುವಿನಿಂದ ನರಸಿಂಹೇಗೌಡನಿಗೆ ಮನಬಂದಂತೆ ಇರಿದಿದ್ದಾರೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಬಿದ್ದು ಒದ್ದಾಡಿ ಮೃತಪಟ್ಟಿದ್ದಾರೆ.ಕೊಲೆ ಮಾಡಿದ ಆರೋಪಿಗಳಾದ ವೆಂಕಟೇಶ್, ಮಂಜುನಾಥ್ ನೇರವಾಗಿ ಠಾಣೆಗೆ ಹೋಗಿ ಪೊಲೀಸರಿಗೆ ಶರಣಾಗಿದ್ದಾರೆ. ಘಟನೆ ಸಂಬಂಧವಾಗಿ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಗಳ ಕೊಲೆಗೆ ಸೇಡು:ಮೇಲುಕೋಟೆ ಎಸ್ಇಟಿ ಶಾಲೆ ಶಿಕ್ಷಕಿ ಹಾಗೂ ಮಾಣಿಕ್ಯನಹಳ್ಳಿಯ ಲೋಕೇಶ್ ಪತ್ನಿ ಶಿಕ್ಷಕಿ ದೀಪಿಕಾ (35) ಕಳೆದ 2024 ಜನವರಿ 22 ರಂದು ನಾಪತ್ತೆಯಾಗಿದ್ದಳು. ಬಳಿಕ ಜ.23ರಂದು ಯೋಗಾನರಸಿಂಹಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಶವವಾಗಿ ಪತ್ತೆಯಾಗಿದ್ದಳು.
ಜ.20ರ ಮಧ್ಯಾಹ್ನ ಬೆಟ್ಟದ ತಪ್ಪಲಿನಲ್ಲಿ ನಿತೀಶ್ ಮತ್ತು ದೀಪಿಕಾ ಜಗಳ ನಡೆಸುತ್ತಿರುವ 10 ಸೆಕೆಂಡ್‌ಗಳ ದೃಶ್ಯವನ್ನು ಪ್ರವಾಸಿಗರೊಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದರು. ಇದು ಪೊಲೀಸರಿಗೆ ಲಭ್ಯವಾಗಿ ಕೊಲೆಗಾರ ನಿತೀಶ್ ಎಂಬುದು ಗೊತ್ತಾಗಿದೆ. ನಂತರ ಪೊಲೀಸರು ನಿತೀಶ್‌ನನ್ನು ಬಂಧಿಸಿ ವಿಚಾರಣೆ ಮಾಡಿದಾಗ ವೆಂಕಟೇಶ್ ಪುತ್ರಿ ದೀಪಕಾಳನ್ನು ಕೊಲೆ ಮಾಡಿ ಬೆಟ್ಟದ ತಪ್ಪಲಿನಲ್ಲಿ ಹೂತು ಹಾಕಿರುವುದು ತಿಳಿದು ಬಂದಿತ್ತು. ನಂತರ ನಿತೀಶ್ ನನ್ನು ಜೈಲಿಗೆ ಹಾಕಿದ್ದರು.ಇತ್ತೀಚೆಗೆ ನಿತೀಶ್ ಜಾಮೀನಿನ ಮೇಲೆ ಹೊರ ಬಂದಿದ್ದನು. ಇದರಿಂದ ಕೋಪಗೊಂಡಿದ್ದ ದೀಪಿಕಾಳ ತಂದೆ ವೆಂಕಟೇಶ್ ಮಗಳನ್ನು ಕೊಲೆ ಮಾಡಿದ್ದ ನಿತೀಶ್‌ನನ್ನು ಹೇಗಾದರೂ ಮಾಡಿ ಕೊಲೆ ಮಾಡಬೇಕೆಂದು ಸಂಚು ರೂಪಿಸಿದ್ದನು. ಮೇ 11 ರಂದು ಧರ್ಮಸ್ಥಳದಲ್ಲಿ ನಿತೀಶ್ ತಂಗಿ ಮದುವೆ ನಿಗದಿಯಾಗಿತ್ತು.
ಮಂಗಳವಾರ ನಿತೀಶ್ ತಂದೆ ನರಸಿಂಹೇಗೌಡ ಬೆಳ್ಳಾಳೆ ಗೇಟ್ ಬಳಿಯ ಅಂಗಡಿ ಬೆಳಗ್ಗೆ ಟೀ ಕುಡಿಯುತ್ತಾ ಕುಳಿತಿದ್ದ ವೇಳೆ ದೀಪಿಕಾ ತಂದೆ ವೆಂಕಟೇಶ್ ಹಾಗೂ ಮಂಜುನಾಥ್ ಚಾಕುವಿನಿಂದ ಇರಿದು ಕೊಲೆ ಮಾಡಿ ಠಾಣೆಗೆ ಶರಣಾಗಿದ್ದಾರೆ.ಘಟನ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್ಪಿ ತಿಮ್ಮಯ್ಯ ಭೇಟಿಕೊಟ್ಟು ಪರಿಶೀಲನೆ ನಡೆಸಿದರು. ಸ್ಥಳೀಯರಿಂದ ಮಾಹಿತಿ ಪಡೆದರು.