ಕುಡುಕ ಮಗನ ಕೊಂದು ಆತ್ಮಹತ್ಯೆ ಕಥೆ ಕಟ್ಟಿದ ತಂದೆ

| Published : Mar 11 2024, 01:17 AM IST / Updated: Mar 11 2024, 06:54 AM IST

crime

ಸಾರಾಂಶ

ಕುಡಿದು ನಿತ್ಯ ಹಿಂಸೆ ಕೊಡುತ್ತಿದ್ದ ಮಗನನ್ನು ತಂದೆಯೇ ಕೊಂದು ಆತ್ಮಹತ್ಯೆ ಕಥೆ ಸೃಷ್ಟಿಸಿ ಈಗ ಪೊಲೀಸರ ಅತಿಥಿ ಆಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇತ್ತೀಚೆಗೆ ನಗರದಲ್ಲಿ ನಡೆದಿದ್ದ ವಿದ್ಯಾರ್ಥಿಯೊಬ್ಬನ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ತಂದೆಯೇ ಮಗನನ್ನು ಕೊಲೆಗೈದು ಆತ್ಮಹತ್ಯೆಯ ಕಥೆ ಕಟ್ಟಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ಈ ಸಂಬಂಧ ಮಂಜುನಾಥನಗರ ನಿವಾಸಿ ಪ್ರಕಾಶ್‌ (48) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿ ಮಾ.6ರಂದು ತನ್ನ ಪುತ್ರ ಯೋಗೇಶ್‌ನನ್ನು (21) ಕುತ್ತಿಗೆಯನ್ನು ವೇಲ್‌ನಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ ಬಳಿಕ ನೇಣು ಬಿಗಿದಿದ್ದ. 

ಬಳಿಕ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕಥೆ ಹೆಣೆದಿದ್ದ. ಮರಣೋತ್ತರ ಪರೀಕ್ಷೆಯಲ್ಲಿ ಯೋಗೇಶ್‌ನನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಸಾಧ್ಯತೆಯಿದೆ ಎಂದು ವರದಿ ಬಂದಿದೆ. 

ಇದರ ಆಧಾರ ಮೇಲೆ ಬಸವೇಶ್ವರನಗರ ಠಾಣೆ ಪೊಲೀಸರು ತಂದೆ ಪ್ರಕಾಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ವಿವರ: ಆರೋಪಿ ಪ್ರಕಾಶ್‌ ಮಂಜುನಾಥನಗರದಲ್ಲಿ ಪಾನಿಪೂರಿ ವ್ಯಾಪಾರ ಮಾಡಿಕೊಂಡಿದ್ದ. ಪುತ್ರ ಯೋಗೇಶ್‌ ಕಾಲೇಜೊಂದರಲ್ಲಿ ಅಂತಿಮ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದ. 

ಈ ನಡುವೆ ಕುಡಿತದ ಚಟಕ್ಕೆ ಬಿದ್ದು ನಿತ್ಯ ಮದ್ಯ ಸೇವಿಸಿ ಮನೆಗೆ ಬರುತ್ತಿದ್ದ. ಬಳಿಕ ಪೋಷಕರ ಜತೆಗೆ ಗಲಾಟೆ ಮಾಡುತ್ತಿದ್ದ. ಕುಡಿತ ಬಿಡುವಂತೆ ಪೋಷಕರು ಹಲವು ಬಾರಿ ಬುದ್ಧಿವಾದ ಹೇಳಿದರೂ ಸಹ ಆತ ಮಾತ್ರ ಬದಲಾಗಲಿಲ್ಲ.

ಮಾ.5ರಂದು ಮನೆಯಿಂದ ಹೋಗಿದ್ದ ಯೋಗೇಶ್‌ ಮಾರನೇ ದಿನ ಬೆಳಗ್ಗೆ ಮನೆಗೆ ಬಂದು ಪರೀಕ್ಷೆಯ ಹಾಲ್‌ ಟಿಕೆಟ್‌ ಹುಡುಕಲು ಮುಂದಾಗಿದ್ದಾನೆ. ಆದರೆ, ಹಾಲ್‌ ಟಿಕೆಟ್‌ ಮಾತ್ರ ಸಿಕ್ಕಿಲ್ಲ. 

ಈ ವೇಳೆ ಮನೆಯಲ್ಲೇ ಇದ್ದ ತಂದೆ ಪ್ರಕಾಶ್‌ಗೆ ಹಾಲ್‌ ಟಿಕೆಟ್‌ ಹುಡುಕಿ ಕೊಡುವಂತೆ ಹೇಳಿದ್ದಾನೆ. ಆಗ ಪ್ರಕಾಶ್‌, ಪರೀಕ್ಷೆ ಇದ್ದರೂ ರಾತ್ರಿ ಮನೆಗೆ ಬಾರದ ಎಲ್ಲಿಗೆ ಹೋಗಿದ್ದೆ ಎಂದು ಏರಿದ ದನಿಯಲ್ಲಿ ಪ್ರಶ್ನಿಸಿದ್ದಾರೆ. 

ಇದರಿಂದ ರೊಚ್ಚಿಗೆದ್ದ ಯೋಗೇಶ್‌, ಏಕಾಏಕಿ ತಂದೆಯ ಮೇಲೆ ಎರಗಿ ಹಲ್ಲೆ ಮಾಡಿದ್ದಾನೆ. ಈ ಜಗಳ ವಿಕೋಪಕ್ಕೆ ತಿರುಗಿದಾಗ ಪ್ರಕಾಶ್‌, ವೇಲ್‌ ತೆಗೆದು ಯೋಗೇಶ್‌ನ ಕುತ್ತಿಗೆ ಬಿಗಿದಿದ್ದಾರೆ. ಈ ವೇಳೆ ಉಸಿರುಗಟ್ಟಿ ಯೋಗೇಶ್‌ ಮೃತಪಟ್ಟಿದ್ದಾನೆ.ಮತ್ತೆ ಮೇಲೇಳಲೇ ಇಲ್ಲ

ಕುತ್ತಿಗೆಗೆ ವೇಲ್‌ ಹಾಕಿ ಬಿಗಿದ ಪರಿಣಾಮ ಯೋಗೇಶ್‌ ಪ್ರಜ್ಞೆ ತಪ್ಪಿದ್ದಾನೆ ಎಂದು ತಿಳಿದ ಪ್ರಕಾಶ್‌ ಕೆಲ ಹೊತ್ತಿನ ಬಳಿಕ ಎಚ್ಚರಗೊಳಿಸಲು ಮುಂದಾಗಿದ್ದಾನೆ. ಆದರೆ, ಯೋಗೇಶ್‌ ಮೇಲೆ ಎದ್ದಿಲ್ಲ. 

ಬಳಿಕ ಸ್ಥಳೀಯರ ನೆರವಿನಿಂದ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪರೀಕ್ಷಿಸಿದ ವೈದ್ಯರು, ಯೋಗೇಶ್‌ ಮೃತಪಟ್ಟಿರುವುದಾಗಿ ದೃಢಪಟ್ಟಿಸಿದ್ದಾರೆ. 

ಆಗ ಎಚ್ಚೆತ್ತುಕೊಂಡ ಪ್ರಕಾಶ್‌, ಮನೆಯಲ್ಲಿ ಯೋಗೇಶ್‌ ನೇಣು ಬಿಗಿದುಕೊಂಡಿದ್ದ. ನಾನು ನೇಣಿನ ಕುಣಿಕೆಯಿಂದ ಬಿಡಿಸಿ ಆಸ್ಪತ್ರೆಗೆ ಕರೆತಂದಿದ್ದೆ ಎಂದು ಹೇಳಿದ್ದ.ಮರಣೋತ್ತರ ಪರೀಕ್ಷೆಯಲ್ಲಿ

ಯೋಗೇಶ್‌ ಕೊಲೆ ಸುಳಿವು: ಸುದ್ದಿ ತಿಳಿದು ಸ್ಥಳಕ್ಕೆ ಬಂದು ಪೊಲೀಸರು ಯೋಗೇಶ್‌ನ ಮೃತದೇಹವನ್ನು ಮರಣೋತ್ತರ ಪರೀಕ್ಷೆ ರವಾನಿಸಿದ್ದರು. ಪರೀಕ್ಷೆಯಲ್ಲಿ ಯೋಗೇಶ್‌ನನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಸಾಧ್ಯತೆಯಿದೆ ಎಂದು ವರದಿ ಬಂದಿದೆ. 

ಆಗ ಮೃತನ ತಂದೆ ಪ್ರಕಾಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ನಡೆದ ಘಟನೆಯನ್ನು ವಿವರಿಸಿ, ತಾನೇ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. 

ಆತ ನನ್ನ ಮೇಲೆ ಹಲ್ಲೆ ಮಾಡಿದ ಕಾರಣಕ್ಕೆ ಕೋಪಗೊಂಡು ವೇಲ್‌ನಿಂದ ಕುತ್ತಿಗೆ ಬಿಗಿದೆ. ಆದರೆ, ಆತ ಸತ್ತೇ ಹೋಗಿದ್ದಾನೆ. ಕೊಲೆ ಮಾಡುವ ಉದ್ದೇಶ ಇರಲಿಲ್ಲ ಎಂದು ಪ್ರಕಾಶ್‌ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.