ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯಕ್ಕೆ ಪ್ರವಾಸ ಬಂದಿದ್ದ ವಿದೇಶಿ ಮಹಿಳೆಯೊಬ್ಬರು ನಗರದ ಹೋಟೆಲ್‌ವೊಂದರಲ್ಲಿ ನಿಗೂಢವಾಗಿ ಹತ್ಯೆಗೀಡಾಗಿರುವ ಘಟನೆ ನಡೆದಿದೆ. ಉಜ್ಬೇಕಿಸ್ತಾನ ಮೂಲದ ಜರೀನಾ (27) ಕೊಲೆಯಾದ ದುರ್ದೈವಿ. ತಮ್ಮ ಸ್ನೇಹಿತರ ಕರೆಗಳಿಗೆ ಬುಧವಾರ ಜರೀನಾ ಪ್ರತಿಕ್ರಿಯಿಸಿಲ್ಲ.
ಇದರಿಂದ ಆತಂಕಗೊಂಡ ಆಕೆಯ ಸ್ನೇಹಿತ, ರಾತ್ರಿ ಹೋಟೆಲ್‌ಗೆ ಕರೆ ಮಾಡಿ ಜರೀನಾ ಕೋಣೆಗೆ ತೆರಳಿ ವಿಚಾರಿಸುವಂತೆ ಕೋರಿದ್ದಾರೆ. ಅಂತೆಯೇ ಜರೀನಾ ಕೊಠಡಿಗೆ ಹೋಟೆಲ್ ಸಿಬ್ಬಂದಿ ತೆರಳಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಪ್ರವಾಸಿ ವೀಸಾದಡಿ ಭಾರತಕ್ಕೆ ಬಂದಿದ್ದ ಜರೀನಾ, ಮಾ.5ರಂದು ನಗರದ ಬಿಡಿಎ ಕಚೇರಿ ಸಮೀಪದ ಸ್ಟಾರ್ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು.
ತಮ್ಮ ಕೊಠಡಿಗೆ ಗುರುವಾರ ಮಧ್ಯಾಹ್ನ ಊಟ ತರಿಸಿಕೊಂಡಿದ್ದರು. ಆದರೆ ನಂತರ ಆವರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ. ತಮ್ಮ ಮೊಬೈಲ್ ಕರೆ ಸ್ವೀಕರಿಸದ ಕಾರಣ ಆಕೆಯ ಸ್ನೇಹಿತ, ಹೋಟೆಲ್‌ಗೆ ರಾತ್ರಿ ಕರೆ ಮಾಡಿ ವಿಚಾರಿಸಿದ್ದಾನೆ.
ಆಗ ಜರೀನಾ ಅವರು ತಂಗಿದ್ದ ಕೋಣೆಗೆ ರಾತ್ರಿ 11.30ರಲ್ಲಿ ತೆರಳಿ ಸಿಬ್ಬಂದಿ ಕಾಲ್ಲಿಂಗ್ ಬೆಲ್ ಒತ್ತಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕೊನೆಗೆ ತಮ್ಮಲ್ಲಿದ್ದ ಮತ್ತೊಂದು ಕೀ ಬಳಸಿ ಕೋಣೆ ಬಾಗಿಲು ತೆಗೆದು ನೋಡಿದಾಗ ಹಾಸಿಗೆ ಮೇಲೆ ಪ್ರಜ್ಞಾಹೀನರಾಗಿ ಜರೀನಾ ಬಿದ್ದಿದ್ದರು.
ಕೂಡಲೇ ಪೊಲೀಸರಿಗೆ ಕರೆ ಮಾಡಿ ಹೋಟೆಲ್ ಸಿಬ್ಬಂದಿ ತಿಳಿಸಿದ್ದಾರೆ. ತಕ್ಷಣವೇ ಹೋಟೆಲ್‌ಗೆ ತೆರಳಿ ಪರಿಶೀಲಿಸಿದಾಗ ತಲೆದಿಂಬಿನಿಂದ ಜರೀನಾ ಅವರನ್ನು ಉಸಿರುಗಟ್ಟಿಸಿ ದುಷ್ಕರ್ಮಿಗಳು ಹತ್ಯೆಗೈದಿರುವುದು ಗೊತ್ತಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜರೀನಾ ಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ. ತನಿಖೆ ನಡೆದಿದೆ. ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಹಚ್ಚುತ್ತೇವೆ. ಹೋಟೆಲ್‌ನ ಜರೀನಾ ತಂಗಿದ್ದ ಕೋಣೆಗೆ ಊಟಕ್ಕೆ ಅರ್ಡರ್ ಪಡೆಯಲು ಹೋಟೆಲ್ ಸಿಬ್ಬಂದಿ ತೆರಳಿದ್ದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪರಿಚಿತರ ಕೈವಾಡ ಶಂಕೆ?
ಜರೀನಾ ಹತ್ಯೆ ಕೃತ್ಯದಲ್ಲಿ ಪರಿಚಿತರ ಕೈವಾಡ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಹೋಟೆಲ್ ಸಿಬ್ಬಂದಿ ಹಾಗೂ ಮೃತಳ ಸ್ನೇಹಿತರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.