ಸಾರಾಂಶ
ಬೆಂಗಳೂರು : ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿ ದೂರವಾಗಿದ್ದಕ್ಕೆ ಸಿಟ್ಟಿಗೆದ್ದು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ಕಟ್ಟಡದ ಮಹಡಿ ಮೇಲೆ ನಿಂತು ಕಾರ್ಮಿಕನೊಬ್ಬ ಆತ್ಮಹತ್ಯೆಗೆ ಯತ್ನಿಸಿ ಕೆಲ ಹೊತ್ತು ಆತಂಕ ಸೃಷ್ಟಿಸಿದ್ದ ಘಟನೆ ಶನಿವಾರ ನಡೆಯಿತು.
ಮಂಗಮ್ಮನಪಾಳ್ಯದ ಮಹಮ್ಮದ್ ಹುಸೇನ್ ಈ ಹುಚ್ಚಾಟ ಮಾಡಿದ್ದು, ಬಳಿಕ ಘಟನಾ ಸ್ಥಳಕ್ಕೆ ಆತನ ಪತ್ನಿಯನ್ನು ಕರೆಸಿ ಹುಸೇನ್ ಮನವೊಲಿಸಿ ಕಟ್ಟಡದಿಂದ ಪೊಲೀಸರು ಕೆಳಗಿಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಡಿದ ಗಲಾಟೆ-ಪತ್ನಿ ಔಟ್
ತನ್ನ ಪತ್ನಿ ಹಾಗೂ ಮಕ್ಕಳ ಜತೆ ಮಂಗಮ್ಮನಪಾಳ್ಯದಲ್ಲಿ ಹುಸೇನ್ ನೆಲೆಸಿದ್ದ. ವಿಪರೀತ ಮದ್ಯ ವ್ಯಸನಿಯಾಗಿದ್ದ ಆತ, ಪ್ರತಿ ದಿನ ಕುಡಿದು ಬಂದು ಪತ್ನಿ ಜತೆ ಜಗಳವಾಡುತ್ತಿದ್ದ. ಅಲ್ಲದೆ ನೆರೆಹೊರೆಯ ಪುಟ್ಟ ಮಕ್ಕಳನ್ನು ಕೊಲ್ಲುವುದಾಗಿ ಸಹ ಹುಸೇನ್ ಬೆದರಿಸುತ್ತಿದ್ದ. ಈ ಕೌಟುಂಬಿಕ ಕಲಹದಿಂದ ಬೇಸತ್ತ ಆತನ ಪತ್ನಿ, ಹುಸೇನ್‌ನನ್ನು ತೊರೆದು ಸುಭಾಷ್ ನಗರದಲ್ಲಿ ಬಂದು ನೆಲೆಸಿದ್ದಳು. ಈತನ ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆಯಾಗಿದೆ. ತನ್ನ ಮೇಲೆ ಮುನಿಸಿಕೊಂಡು ಮನೆ ಬಿಟ್ಟು ಹೋದ ಪತ್ನಿಗೆ ಹುಸೇನ್ ಹುಡುಕಾಟ ನಡೆಸಿದ್ದ.
ಕೊನೆಗೆ ಶುಕ್ರವಾರ ಸಂಜೆ ಆಕೆಯ ಮನೆಯನ್ನು ಪತ್ತೆ ಹಚ್ಚಿ ತನ್ನೊಂದಿಗೆ ಬರುವಂತೆ ಆತ ಕೋರಿದ್ದಾನೆ. ಇದಕ್ಕೊಪ್ಪದೆ ಹೋದಾಗ ಸಿಟ್ಟಿಗೆದ್ದ ಆತ, ಎಲೆಕ್ಟ್ರಾನಿಕ್ ಸಿಟಿಯ ಪೊಲೀಸ್ ಠಾಣೆ ಇರುವ ನಾಲ್ಕು ಅಂತಸ್ತಿನ ಕಟ್ಟಡ ಮಹಡಿಗೆ ಹೋಗಿದ್ದಾನೆ. ತನ್ನ ಪತ್ನಿಯನ್ನು ಕರೆಸದೆ ಹೋದರೆ ತಾನು ಇಲ್ಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆತ ಬೆದರಿಸಿದ್ದಾನೆ. ಕೆಲ ಹೊತ್ತು ಆತನ ಸಮಾಧಾನಪಡಿಸಲು ಪೊಲೀಸರು ಯತ್ನಿಸಿ ವಿಫಲರಾಗಿದ್ದಾರೆ. ಕೊನೆಗೆ ಆತನ ಪತ್ನಿಯನ್ನು ಕರೆಸಿ ಹುಸೇನ್‌ನನ್ನು ಸಂತೈಸಿ ಮಹಡಿಯಿಂದ ಕೆಳಗಿಳಿಸಿದ್ದಾರೆ.