ಸಾರಾಂಶ
ಮಂಡ್ಯ : ಪ್ರವಾಸಿಗರ ವಾಹನಗಳಿಂದ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕೆಆರ್‌ಎಸ್ ಪೊಲೀಸ್ ಠಾಣಾ ಮುಖ್ಯ ಪೇದೆ ಸೇರಿದಂತೆ ಇಬ್ಬರು ಪೊಲೀಸ್ ಪೇದೆಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಮಾನತು ಮಾಡಿ ಆದೇಶಿಸಿದ್ದಾರೆ.
ಠಾಣೆ ಮುಖ್ಯಪೇದೆ ಪುರುಷೋತ್ತಮ್ ಸೇರಿದಂತೆ ಎಸ್.ಬಿ ಕರ್ತವ್ಯ ನಿರ್ವಹಿಸುತ್ತಿದ್ದ ಪೇದೆ ಅನಿಲ್ ಕುಮಾರ್ ಹಾಗೂ ಪೊಲೀಸ್ ಪೇದೆ ಪ್ರಭುಸ್ವಾಮಿ ಅಮಾನತುಗೊಂಡವರು.
ಈ ಮೂವರು ಕೆಆರ್‌ಎಸ್‌ಗೆ ವೀಕ್ಷಣೆಗಾಗಿ ಬರುವ ಪ್ರವಾಸಿಗರ ವಾಹನಗಳಿಂದ ಹೆಚ್ಚಾಗಿ ಹೊರ ರಾಜ್ಯದ ತಮಿಳುನಾಡು, ಆಂಧ್ರಪ್ರದೇಶ, ಕೇರಳ ಸೇರಿದಂತೆ ಇತರೆಡೆಗಳಿಂದ ಬರುತ್ತಿದ್ದ ವಾಹನಗಳನ್ನು ಗುರಿಯಾಗಿಸಿಕೊಂಡು ಚಾಲಕರಿಂದ ಹಣ ವಸೂಲಿ ಮಾಡುತ್ತಿದ್ದರು ಎನ್ನಲಾಗಿದೆ.
ಈ ಬಗ್ಗೆ ಸಾರ್ವಜನಿಕರು ವೀಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ಹಣ ವಸೂಲಿ ಕುರಿತು ವೀಡಿಯೋ ಹರಿ ಬಿಟ್ಟಿದ್ದರು. ಜೊತೆಗೆ ಸಾರ್ವಜನಿಕರು ಸಹ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದರು ಎನ್ನಲಾಗಿದೆ. ಈ ಸಂಬಂಧ ಮಂಡ್ಯ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ ಅವರು ಈ ಮೂವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಕೆಆರ್‌ಎಸ್ ಪ್ರವಾಸಿ ತಾಣ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿದ್ದು, ವೀಕ್ಷಣೆಗಾಗಿ ಬರುವ ಹೊರ ರಾಜ್ಯಗಳ ವಾಹನಗಳನ್ನೇ ಟಾರ್ಗೆಟ್ ಮಾಡಿ ಹಣ ವಸೂಲಿ ಮಾಡುತ್ತಿದ್ದರು ಎಂಬ ಗಂಭೀರ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿತ್ತು.