ನಾಗಮಂಗಲ : ಟೈರ್ ಸಿಡಿದು ರಸ್ತೆ ಬದಿಗೆ ಮಗುಚಿದ ಕಾರು - ಗಂಭೀರವಾಗಿ ಗಾಯಗೊಂಡಿದ್ದ ನಿವೃತ್ತ ಶಿಕ್ಷಕ ಸಾವು

| Published : Sep 12 2024, 02:00 AM IST / Updated: Sep 12 2024, 04:56 AM IST

ಸಾರಾಂಶ

ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ತಮ್ಮ ಮಗನನ್ನು ನೋಡಲು ಆಲೂರಿನಿಂದ ಬೆಂಗಳೂರಿಗೆ ಕಾರಿನಲ್ಲಿ ಚಂದ್ರಶೆಟ್ಟಿ ತೆರಳುತ್ತಿದ್ದರು. ಈ ವೇಳೆ ತಾಲೂಕಿನ ತಿರುಮಲಾಪುರ ಗೇಟ್ ಬಳಿ ಕಾರಿನ ಟೈರ್ ಸಿಡಿದು ಹೆದ್ದಾರಿ ರಸ್ತೆ ಬದಿಗೆ ಮಗುಚಿ ಬಿದ್ದ ಪರಿಣಾಮ ಚಂದ್ರಶೆಟ್ಟಿ ಸಾವನ್ನಪ್ಪಿದ್ದಾರೆ.

  ನಾಗಮಂಗಲ :  ಚಲಿಸುತ್ತಿದ್ದ ಕಾರಿನ ಟೈರ್ ಸಿಡಿದು ನಿಯಂತ್ರಣ ತಪ್ಪಿ ರಸ್ತೆಬದಿಗೆ ಮಗುಚಿ ಬಿದ್ದ ಪರಿಣಾಮ ಕಾರು ಚಾಲನೆ ಮಾಡುತ್ತಿದ್ದ ನಿವೃತ್ತ ಶಿಕ್ಷಕ ಮೃತಪಟ್ಟಿರುವ ಘಟನೆ ತಾಲೂಕಿನ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ತಿರುಮಲಾಪುರ ಗೇಟ್ ಬಳಿ ಮಂಗಳವಾರ ಸಂಭವಿಸಿದೆ.

ಹಾಸನ ಜಿಲ್ಲೆಯ ಆಲೂರಿನ ಚಂದ್ರಶೆಟ್ಟಿ (75) ಮೃತಪಟ್ಟ ದುರ್ದೈವಿ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ತಮ್ಮ ಮಗನನ್ನು ನೋಡಲು ಆಲೂರಿನಿಂದ ಬೆಂಗಳೂರಿಗೆ ಕಾರಿನಲ್ಲಿ ಚಂದ್ರಶೆಟ್ಟಿ ತೆರಳುತ್ತಿದ್ದರು. ಈ ವೇಳೆ ತಾಲೂಕಿನ ತಿರುಮಲಾಪುರ ಗೇಟ್ ಬಳಿ ಕಾರಿನ ಟೈರ್ ಸಿಡಿದು ಹೆದ್ದಾರಿ ರಸ್ತೆ ಬದಿಗೆ ಮಗುಚಿ ಬಿದ್ದ ಪರಿಣಾಮ ಚಂದ್ರಶೆಟ್ಟಿ ಗಂಭೀರವಾಗಿ ಗಾಯಗೊಂಡಿದ್ದರು.

ಘಟನೆ ಸಂಭವಿಸುತ್ತಿದ್ದಂತೆ ಸ್ಥಳೀಯರು ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರಾದರೂ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಸುದ್ದಿ ತಿಳಿದ ಬೆಳ್ಳೂರು ಪೊಲೀಸ್ ಠಾಣೆಯ ಪಿಎಸ್‌ಐ ರವಿಕುಮಾರ್ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದರು. ಮರಣೋತರ ಪರೀಕ್ಷೆ ನಡೆಸಿದ ಬಳಿಕ ಚಂದ್ರಶೆಟ್ಟಿ ಅವರ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು.

ಘಟನೆ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.