ನಿಶೆಯಲ್ಲಿದ್ದ ಕೆಲ ಖಾಸಗಿ ಶಾಲಾ ವಾಹನಗಳ ಚಾಲಕರಿಗೆ ಶುಕ್ರವಾರ ಬೆಳ್ಳಂಬೆಳಗ್ಗೆ ಸಂಚಾರ ವಿಭಾಗದ ಪೊಲೀಸರು ಬಿಸಿ ಮುಟ್ಟಿಸಿ ಮತ್ತು ಇಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಿಶೆಯಲ್ಲಿದ್ದ ಕೆಲ ಖಾಸಗಿ ಶಾಲಾ ವಾಹನಗಳ ಚಾಲಕರಿಗೆ ಶುಕ್ರವಾರ ಬೆಳ್ಳಂಬೆಳಗ್ಗೆ ಸಂಚಾರ ವಿಭಾಗದ ಪೊಲೀಸರು ಬಿಸಿ ಮುಟ್ಟಿಸಿ ಮತ್ತು ಇಳಿಸಿದ್ದಾರೆ.

ನಗರ ವ್ಯಾಪ್ತಿಯಲ್ಲಿ ಪಾನಮತ್ತ ಖಾಸಗಿ ಶಾಲಾ ವಾಹನಗಳ ಚಾಲಕರ ವಿರುದ್ಧ ಬೆಳಗ್ಗೆ 7 ರಿಂದ 10 ಗಂಟೆವರೆಗೆ ಸಂಚಾರ ವಿಭಾಗದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದರು. ಈ ವೇಳೆ ಒಟ್ಟು 510 ವಾಹನಗಳ ತಪಾಸಣೆ ನಡೆಸಿದ ಪೊಲೀಸರು, ಪಾನಮತ್ತರಾಗಿದ್ದ 26 ಚಾಲಕರ ವಿರುದ್ಧ ಐಎಂವಿ ಕಾಯ್ದೆ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಈ ಚಾಲಕರ ಚಾಲನಾ ಪರವಾನಿಗೆ ರದ್ದುಪಡಿಸುವಂತೆ ಸಾರಿಗೆ ಇಲಾಖೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಏಕಮುಖ ಸಂಚಾರ:

ಕಾನೂನು ಉಲ್ಲಂಘಿಸಿ ಏಕಮುಖ ಸಂಚಾರ ರಸ್ತೆಯಲ್ಲಿ ವಾಹನ ಚಲಾಯಿಸಿದವರಿಗೂ ಪೊಲೀಸರು ದಂಡಿಸಿದ್ದಾರೆ.

ಈ ಸಂಬಂಧ ಬುಧವಾರ ಮತ್ತು ಗುರುವಾರ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಒಟ್ಟು 5,458 ಪ್ರಕರಣಗಳನ್ನು ದಾಖಲಿಸಿದ್ದಾರೆ. ಸಾರ್ವಜನಿಕರ ಸುರಕ್ಷತಾ ಸಂಚಾರವನ್ನು ಗಮನದಲ್ಲಿಟ್ಟುಕೊಂಡು ಈ ವಿಶೇಷ ಕಾರ್ಯಾಚರಣೆ ನಿರಂತರವಾಗಿ ಮುಂದುವರಿಸಲಾಗುತ್ತದೆ ಎಂದು ಜಂಟಿ ಆಯುಕ್ತರು (ಸಂಚಾರ) ತಿಳಿಸಿದ್ದಾರೆ.

ನಗರದಲ್ಲಿ ರಸ್ತೆ ಅಪಘಾತಗಳನ್ನು ತಡೆಗಟ್ಟುವ ಸಲುವಾಗಿ ಏಕಮುಖ ರಸ್ತೆಗಳಲ್ಲಿ ವಿರುದ್ಧವಾಗಿ ವಾಹನಗಳನ್ನು ಚಲಾಯಿಸುವ ಚಾಲಕರು ಮತ್ತು ಸವಾರರ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ ಎಂದು ಎಚ್ಚರಿಕೆ ನೀಡಿದ್ದಾರೆ.