ಸಾರಾಂಶ
ನಗರದಲ್ಲಿ ಡ್ರಗ್ಸ್ ಮಾಫಿಯಾ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿ ಇಬ್ಬರು ವಿದೇಶಿ ಪ್ರಜೆಗಳನ್ನು ಸೆರೆ ಹಿಡಿದು 2.15 ಕೋಟಿ ರು. ಮೌಲ್ಯದ ಡ್ರಗ್ಸ್ ಅನ್ನು ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ಡ್ರಗ್ಸ್ ಮಾಫಿಯಾ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿ ಇಬ್ಬರು ವಿದೇಶಿ ಪ್ರಜೆಗಳನ್ನು ಸೆರೆ ಹಿಡಿದು 2.15 ಕೋಟಿ ರು. ಮೌಲ್ಯದ ಡ್ರಗ್ಸ್ ಅನ್ನು ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ.ನೈಜೀರಿಯಾ ಮೂಲದ ಒಕ್ಕೆ ಚಿನೆಡು ಸ್ಯಾಮ್ಯುಯೆಲ್ ಹಾಗೂ ಕ್ವಿಕಿರಿಜಾ ಟೋಪಿಸ್ಟಾ ಬಂಧಿತರಾಗಿದ್ದು, ಈ ದಾಳಿ ವೇಳೆ ತಪ್ಪಿಸಿಕೊಂಡಿರುವ ಮತ್ತೊಬ್ಬ ನೈಜೀರಿಯಾ ಪೆಡ್ಲರ್ ನ್ವೋಕ್ ಪತ್ತೆಗೆ ತನಿಖೆ ನಡೆದಿದೆ. ಆರೋಪಿಗಳಿಂದ 490 ಗ್ರಾಂ ಎಂಡಿಎಂಎ ಕ್ರಿಸ್ಟೆಲ್ ಹಾಗೂ 43 ಗ್ರಾಂ ಕೊಕೇನ್ ಸೇರಿ ಒಟ್ಟು 2.15 ಕೋಟಿ ರು. ಮೌಲ್ಯದ ಡ್ರಗ್ಸ್ ಜಪ್ತಿಯಾಗಿದೆ.
ಇತ್ತೀಚೆಗೆ ಎಲೆಕ್ಟ್ರಾನಿಕ್ ಸಿಟಿ 1ನೇ ಹಂತದ ಮಹಾಲಕ್ಷ್ಮೀ ಲೇಔಟ್‌ನ ಜಾಲಿ ಜಾಗದ ಬಳಿ ಡ್ರಗ್ಸ್ ಮಾರಾಟಕ್ಕೆ ಆರೋಪಿ ಯತ್ನಿಸಿದ್ದ ಬಗ್ಗೆ ಸಿಕ್ಕಿದ ಮಾಹಿತಿ ಮೇರೆಗೆ ಇನ್ಸ್‌ಪೆಕ್ಟರ್ ಜಿ.ಎಂ.ನವೀನ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು. ಆಗ ವಿದೇಶಿ ಪೆಡ್ಲರ್ ಸ್ಯಾಮ್ಯುಯೆಲ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಡ್ರಗ್ಸ್ ಮಾರಾಟ ಜಾಲ ಬಯಲಾಗಿದೆ.ಮೊದಲ ಬಾರಿಗೆ ಬಂಧನ
ಹದಿನಾಲ್ಕು ವರ್ಷಗಳ ಹಿಂದೆ ಅಕ್ರಮವಾಗಿ ಭಾರತಕ್ಕೆ ಬಂದಿದ್ದ ಸ್ಯಾಮ್ಯುಯೆಲ್, ಬಳಿಕ ನಗರಕ್ಕೆ ಬಂದು ಎಲೆಕ್ಟ್ರಾನಿಕ್ ಸಿಟಿ ಬಳಿ ಬೀಡು ಬಿಟ್ಟಿದ್ದ. ಅದೇ ರೀತಿ ಟೋಪಿಸ್ಟಾ ಸಹ 2019ರಲ್ಲಿ ನಗರಕ್ಕೆ ಬಂದು ವಾಸವಾಗಿದ್ದಳು. ವಿದೇಶದಿಂದ ಅಕ್ರಮವಾಗಿ ಕಡಿಮೆ ಬೆಲೆಗೆ ಡ್ರಗ್ಸ್ ಖರೀದಿಸಿ ತಂದು ನಗರದಲ್ಲಿ ಆರೋಪಿಗಳು ಮಾರುತ್ತಿದ್ದರು. ಈ ಜಾಲದಲ್ಲಿ ಡ್ರಗ್ಸ್ ಪೂರೈಸುತ್ತಿದ್ದ ನೈಜೀರಿಯಾ ಮೂಲದ ಮತ್ತೊಬ್ಬ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ನಕಲಿ ದಾಖಲೆಗಳ ಸೃಷ್ಟಿ
ನಗರದಲ್ಲಿ ವೀಸಾ ಇಲ್ಲದೆ ಆರೋಪಿಗಳು ಅಕ್ರಮವಾಗಿ ನೆಲೆಸಿದ್ದರು. ಇದಕ್ಕಾಗಿ ಅವರು ನಕಲಿ ದಾಖಲೆ ಹೊಂದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಮನೆ ಬಾಡಿಗೆ ಪಡೆಯುವ ಸಲುವಾಗಿ ವಿವಿಧ ಹೆಸರಿನಲ್ಲಿ ನಕಲಿ ಪಾಸ್ ಪೋರ್ಟ್ ಹಾಗೂ ವೀಸಾ ಅನ್ನು ಪೆಡ್ಲರ್‌ಗಳು ಸೃಷ್ಟಿಸಿದ್ದರು. ಇನ್ನು ಸ್ಯಾಮ್ಯುಯೆಲ್ ಬಳಿ 20 ಪಾಸ್ ಪೋರ್ಟ್‌ಗಳು ಸಿಕ್ಕಿವೆ. ಈ ದಾಖಲೆಗಳ ತಯಾರಿಕೆಯಲ್ಲಿ ಟೋಪಿಸ್ಟಾ ಸಹಕರಿಸಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಐಟಿ ವಲಯವೇ ಟಾರ್ಗೆಟ್:
ಐಟಿ ಉದ್ಯೋಗಿಗಳೇ ಡ್ರಗ್ಸ್ ಪೆಡ್ಲರ್‌ಗಳ ಟಾರ್ಗೆಟ್ ಆಗಿದ್ದರು. ಇದಕ್ಕಾಗಿ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿ ವಿದೇಶಿ ಡ್ರಗ್ಸ್ ಪೆಡ್ಲರ್‌ಗಳು ಬೀಡು ಬಿಟ್ಟು ಕಾರ್ಯಾಚರಣೆ ನಡೆಸಿದ್ದರು. ಈ ವಲಯದಲ್ಲಿ ಕೋಟ್ಯಂತರ ಮೌಲ್ಯದ ವಹಿವಾಟು ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.