ಎಚ್‌ಡಿಎಫ್‌ಸಿ ಬ್ಯಾಂಕ್‌ನ 7.11 ಕೋಟಿ ರು. ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 9 ಆರೋಪಿಗಳನ್ನು ಬಂಧಿಸಿ 7.1 ಕೋಟಿ (ಶೇ.98.6 ರಷ್ಟು) ನಗದನ್ನು ವಶಪಡಿಸಿಕೊಳ್ಳಲಾಗಿದ್ದು, ನಮ್ಮ ಪೊಲೀಸರು ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಎಚ್‌ಡಿಎಫ್‌ಸಿ ಬ್ಯಾಂಕ್‌ನ 7.11 ಕೋಟಿ ರು. ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 9 ಆರೋಪಿಗಳನ್ನು ಬಂಧಿಸಿ 7.1 ಕೋಟಿ (ಶೇ.98.6 ರಷ್ಟು) ನಗದನ್ನು ವಶಪಡಿಸಿಕೊಳ್ಳಲಾಗಿದ್ದು, ನಮ್ಮ ಪೊಲೀಸರು ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಮೊದಲು ಮೂವರು ಆರೋಪಿಗಳನ್ನು ಬಂಧಿಸಿ 5.76 ಕೋಟಿ ನಗದನ್ನು ವಶಪಡಿಸಿಕೊಳ್ಳಲಾಯಿತು. ನ.23 ರಂದು ಹೈದರಾಬಾದ್‌ನ ನಾಪಳ್ಳಿ ಮೆಟ್ರೋ ಸ್ಟೇಷನ್ ಬಳಿ ಮೂವರು ಆರೋಪಿಗಳನ್ನು ಬಂಧಿಸಿ 57.74 ಲಕ್ಷ ನಗದು ವಶಪಡಿಸಿಕೊಳ್ಳಲಾಯಿತು. ಅದೇ ದಿನ ಮತ್ತೊಬ್ಬ ಆರೋಪಿಯನ್ನು ಹಲಸೂರು ಲೇಕ್ ಕಮ್ಮಹಳ್ಳಿ ಬಿಡಿಎ ಫ್ಲಾಟ್ ಬಳಿ 3 ಲಕ್ಷ ನಗದು ವಶಪಡಿಸಿಕೊಳ್ಳಲಾಗಿತ್ತು. ನ.24 ರಂದು ಬಂಧಿತ ಆರೋಪಿಯ ಆಂಧ್ರಪ್ರದೇಶದ ಕುಪ್ಪಂನಲ್ಲಿರುವ ಆತನ ವಾಸದ ಮನೆಯಿಂದ 57.50 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿತ್ತು. ಅದೇ ದಿನ ಮತ್ತಿಬ್ಬರು ಆರೋಪಿಗಳನ್ನು ಸುಮನಹಳ್ಳಿ ಜಂಕ್ಷನ್ ಬಳಿ ಬಂಧಿಸಿ 10 ಲಕ್ಷ ನಗದನ್ನು ವಶಕ್ಕೆ ಪಡೆಯಲಾಗಿತ್ತು. ಇವರ ಮನೆಯಿಂದ 20 ಲಕ್ಷ ನಗದನ್ನು ವಶಕ್ಕೆ ಪಡೆಯಲಾಗಿತ್ತು. ಇತರೆ ಆರೋಪಿಗಳಿಂದ 1.45 ಕೋಟಿ ರು. ವಶಕ್ಕೆ ಪಡೆಯಲಾಗಿತ್ತು. ಹೀಗೆ ಹಂತಹಂತವಾಗಿ ಒಟ್ಟು 7.1 ಕೋಟಿ ನಗದನ್ನು ಜಪ್ತಿ ಮಾಡಲಾಗಿದೆ ಎಂದು ವಿವರಿಸಿದರು.
ಪೊಲೀಸ್ ತಂಡಕ್ಕೆ7 ಲಕ್ಷ ಬಹುಮಾನ:ಕಾರ್ಯಾಚರಣೆಯ ವೇಳೆ ಚೆನ್ನೈ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಕೇರಳ ಮತ್ತು ರೈಲ್ವೆ ಪೊಲೀಸರು ಸಹ ಸಾಕಷ್ಟು ಸಹಾಯ ಮಾಡಿದ್ದಾರೆ. ಅವರಿಗೆ ಪತ್ರಬರೆದು ಧನ್ಯವಾದ ಹೇಳಲಾಗುವುದು ಎಂದರು.
ಕಾರ್ಯಾಚರಣೆ ನಡೆಸಿದ ತಂಡಕ್ಕೆ ಈಗಾಗಲೇ 5 ಲಕ್ಷ ರು. ಬಹುಮಾನ ಘೋಷಿಸಲಾಗಿದೆ. ಇದೀಗ ಹೆಚ್ಚುವರಿಯಾಗಿ 2 ಲಕ್ಷ ರು. ಬಹುಮಾನ ನೀಡುತ್ತಿದ್ದೇವೆ. 9 ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಂಡು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದರು.ದರೋಡೆ ನಡೆದಿದ್ದರೂ ಸಿಬ್ಬಂದಿಗೆ ಊಟದ್ದೇ ಚಿಂತೆ: ಸಿಎಂಎಸ್ ವಾಹನ ಅಡ್ಡಗಟ್ಟಿ 7.11 ಕೋಟಿ ರು.ದರೋಡೆ ನಡೆದಿತ್ತು. ಇನ್ನೋವಾ ಕಾರಿನಲ್ಲಿ ಕಸ್ಟೋಡಿಯನ್, ಗನ್ಮ್ಯಾನ್ ಕರೆದೊಯ್ದಿದ್ದರು. ಮಾರ್ಗಮಧ್ಯೆ ಕಸ್ಟೋಡಿಯನ್, ಗನ್ಮ್ಯಾನ್ ಇಳಿಸಿ ದರೋಡೆ ಗ್ಯಾಂಗ್ ತೆರಳಿತ್ತು. ದರೋಡೆಕೋರರು ಇಳಿಸಿದ್ದ ಸ್ಥಳದಿಂದ ಠಾಣೆಗೆ ಕೂಗಳತೆ ದೂರದಲ್ಲಿದ್ದರು. ಈ ಬಗ್ಗೆ ಸಿಎಂಎಸ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ. ದರೋಡೆ ನಡೆದು 2 ಗಂಟೆ ನಂತರ ಪೊಲೀಸರಿಗೆ ವಿಚಾರ ಗೊತ್ತಾಗಿತ್ತು. ಇಷ್ಟೊತ್ತು ಏನು ಮಾಡುತ್ತಿದ್ರಿ ಎಂದು ಸಿಬ್ಬಂದಿಯನ್ನು ಪೊಲೀಸರು ವಿಚಾರಣೆ ಮಾಡಿದಾಗ ಊಟದ ಸಮಯ ಆಗಿತ್ತು. ಆದ್ದರಿಂದ ಊಟಕ್ಕೆ ಹೋಗಿದ್ದೆವು ಎಂದಿದ್ದಾರೆ. ಹೀಗಾಗಿ ಸಿಎಂಎಸ್ ವಾಹನ ಸಿಬ್ಬಂದಿ ಮೇಲೆ ಪೊಲೀಸರಿಗೆ ಮತ್ತಷ್ಟು ಅನುಮಾನ ಮೂಡಿತು ಎಂದು ಆಯುಕ್ತರು ವಿವರಿಸಿದರು.
ಸದ್ಯ ಪೊಲೀಸರು ಸಿಎಂಎಸ್ ವಾಹನದ ಕಸ್ಟೋಡಿಯನ್, ಗನ್ಮ್ಯಾನ್ಗಳ ವಿಚಾರಣೆ ಮುಂದುವರಿಸಿದ್ದಾರೆ. ದರೋಡೆ ಪ್ರಕರಣದಲ್ಲಿ ಸಿಬ್ಬಂದಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಇಲ್ಲ. ಆದರೆ ನಿರ್ಲಕ್ಷ್ಯ ತೋರಿರುವುದು ಕಂಡು ಬಂದಿದೆ ಎಂದು ಪೊಲೀಸ್ ಆಯುಕ್ತರು ವಿವರಿಸಿದ್ದರು.ಇದೇ ವೇಳೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಎಲ್ಲಾ ಅಧಿಕಾರಿ ಸಿಬ್ಬಂದಿಗೆ ಬಹುಮಾನ ಮತ್ತು ಪ್ರಶಂಸನೀಯ ಪತ್ರ ವಿತರಿಸಲಾಯಿತು.
ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ:ಈ ದರೋಡೆ ಪ್ರಕರಣದಲ್ಲಿ ಬಂಧಿತ 9 ಆರೋಪಿಗಳ ಪೈಕಿ ರವಿ ಎಂಬಾತ 2018ರಲ್ಲಿ ವರ್ತೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಬ ವಿಚಾರ ತನಿಖೆ ವೇಳೆ ಬಯಲಾಗಿದೆ. ಈ ಮೂಲಕ ಕೃತ್ಯವೆಸಗಿದ ಏಳು ವರ್ಷಗಳ ಬಳಿಕ ಆರೋಪಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಬಾಣಸವಾಡಿಯ ರೌಡಿಶೀಟರ್ ಆಗಿದ್ದ ಚೆಲ್ಲಾ ಕುಮಾರ್ ಎಂಬುವನನ್ನು 2018ರಲ್ಲಿ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎದುರಾಳಿ ಗುಂಪು ಹತ್ಯೆಗೈದಿತ್ತು. ಈ ಕೃತ್ಯದಲ್ಲಿ ದರೋಡೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿ ರವಿ ಕೂಡ ಭಾಗಿಯಾಗಿ ತಲೆಮರೆಸಿಕೊಂಡಿದ್ದ. ಪೊಲೀಸರು ಆರೋಪಿಯ ಹಿನ್ನೆಲೆ ಕೆದಕಿದ್ದಾಗ ಆರೋಪಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದ ರವಿ ಇತ್ತೀಚೆಗೆ ಆರ್ಥಿಕ ನಷ್ಟಕ್ಕೆ ಒಳಗಾಗಿದ್ದ. ಈತನ ಸಹೋದರ ರಾಕೇಶ್ ಸಹ ದರೋಡೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದು, ಇವರು ಚಿತ್ತೂರು ಮೂಲದವರು. ಇನ್ನು ಆರೋಪಿ ಜಿತೇಶ್ ವಿರುದ್ಧ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಕಿರುಕುಳ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.