ಇಬ್ಬರು ಕಳ್ಳರ ಬಂಧನ: 33 ಮೊಬೈಲ್‌ಗಳು ಜಪ್ತಿ

| Published : May 07 2025, 01:46 AM IST

ಸಾರಾಂಶ

ನಗರದಲ್ಲಿ ಮೊಬೈಲ್‌ ಹಾಗೂ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ರೌಡಿ ಶೀಟರ್‌ ಸೇರಿ ಇಬ್ಬರು ಆರೋಪಿಗಳನ್ನು ಗೋವಿಂದರಾಜನಗರ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ₹1.55 ಲಕ್ಷ ಮೌಲ್ಯದ 33 ಮೊಬೈಲ್‌ಗಳು ಹಾಗೂ ದ್ವಿಚಕ್ರ ವಾಹನ ಜಪ್ತಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಮೊಬೈಲ್‌ ಹಾಗೂ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ರೌಡಿ ಶೀಟರ್‌ ಸೇರಿ ಇಬ್ಬರು ಆರೋಪಿಗಳನ್ನು ಗೋವಿಂದರಾಜನಗರ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ₹1.55 ಲಕ್ಷ ಮೌಲ್ಯದ 33 ಮೊಬೈಲ್‌ಗಳು ಹಾಗೂ ದ್ವಿಚಕ್ರ ವಾಹನ ಜಪ್ತಿ ಮಾಡಿದ್ದಾರೆ.

ಹೆಗ್ಗನಹಳ್ಳಿ ನಿವಾಸಿ ರೌಡಿ ಶೀಟರ್‌ ನಾಗರಾಜ್‌ ಅಲಿಯಾಸ್ ರಾಕಿ (34) ಮತ್ತು ದೊಡ್ಡಬಿದರಕಲ್ಲು ನಿವಾಸಿ ಸೋಮನಾಯ್ಕ್‌ ಅಲಿಯಾಸ್‌ ಡೆಡ್ಲಿ ಸೋಮ (30) ಬಂಧಿತರು. ಇತ್ತೀಚೆಗೆ ಮಾರೇನಹಳ್ಳಿ ನಿವಾಸಿಯೊಬ್ಬರು ವಿಜಯನಗರ ಮೆಟ್ರೋ ರೈಲು ನಿಲ್ದಾಣದ ಬಳಿ ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನವನ್ನು ದುಷ್ಕರ್ಮಿಗಳು ಕಳವು ಮಾಡಿದ್ದರು. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ್ದು, ಬಾತ್ಮೀದಾರರು ನೀಡಿದ ಖಚಿತ ಮಾಹಿತಿ ಮೇರೆಗೆ ಏ.29ರಂದು ಪಟ್ಟೇಗಾರಪಾಳ್ಯ ಮೋರಿ ಬಳಿ ಇಬ್ಬರನ್ನು ದ್ವಿಚಕ್ರ ವಾಹನ ಸಹಿತ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಪ್ಪೊಪ್ಪಿಕೊಂಡಿದ್ದಾರೆ.

ದ್ವಿಚಕ್ರ ವಾಹನದ ಡಿಕ್ಕಿ ಪರಿಶೀಲನೆ ವೇಳೆ ಪತ್ತೆಯಾದ 3 ಮೊಬೈಲ್‌ಗಳ ಬಗ್ಗೆ ಪ್ರಶ್ನೆ ಮಾಡಿದಾಗ ನಗರದ ವಿವಿಧೆಡೆ ಕಳವು ಮಾಡಿದ್ದಾಗಿ ಬಾಯ್ಬಿಟ್ಟಿದ್ದಾರೆ. ಕಳವು ಮಾಡಿದ 30 ಮೊಬೈಲ್‌ಗಳನ್ನು ಜಾಲಹಳ್ಳಿ ಕ್ರಾಸ್‌ನ ಮೊಬೈಲ್‌ ಸರ್ವಿಸ್‌ ಸೆಂಟರ್‌ಗೆ ನೀಡಿರುವ ಬಗ್ಗೆ ಹೇಳಿದ್ದು, ಎಲ್ಲವನ್ನೂ ಪೊಲೀಸರು ಜಪ್ತಿ ಮಾಡಿದ್ದಾರೆ.

ತುರುವೆಕೆರೆ ಠಾಣೆ ರೌಡಿ ಶೀಟರ್‌:

ಬಂಧಿತರ ಪೈಕಿ ನಾಗರಾಜ್‌ ತುರುವೆಕೆರೆ ಪೊಲೀಸ್‌ ಠಾಣೆಯ ರೌಡಿ ಶೀಟರ್‌ ಆಗಿದ್ದು, ಈತನ ವಿರುದ್ಧ 5 ಅಪರಾಧ ಪ್ರಕರಣಗಳು ದಾಖಲಾಗಿವೆ. ಸೋಮನಾಯ್ಕ್‌ ಪ್ರಥಮ ಬಾರಿಗೆ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಆರೋಪಿಗಳು ನಗರದ ರಸ್ತೆಯಲ್ಲಿ ಒಂಟಿಯಾಗಿ ಓಡಾಡುವ ಸಾರ್ವಜನಿಕರನ್ನು ಬೆದರಿಸಿ ಮೊಬೈಲ್‌ ಕಿತ್ತುಕೊಂಡು ಪರಾರಿಯಾಗುತ್ತಿದ್ದರು. ಮೊಬೈಲ್‌ ಸುಲಿಗೆ ಮಾಡಲು ಕದ್ದ ದ್ವಿಚಕ್ರ ವಾಹನ ಬಳಸುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಆರೋಪಿಗಳ ಬಂಧನದಿಂದ ಗೋವಿಂದರಾಜನಗರ ಠಾಣೆಯಲ್ಲಿ ದಾಖಲಾಗಿದ್ದ ದ್ವಿಚಕ್ರ ವಾಹನ ಕಳವು ಪ್ರಕರಣ ಪತ್ತೆಯಾಗಿದೆ. ಉಳಿದ 33 ಮೊಬೈಲ್‌ಗಳ ವಾರಸುದಾರರ ಪತ್ತೆಗೆ ತನಿಖೆ ಮುಂದುವರೆದಿದೆ. ಸದ್ಯ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.