ಕಾರಿನಲ್ಲಿದ್ದ ₹7 ಲಕ್ಷ ಎಗರಿಸಲು ವಿಫಲ ಯತ್ನ..!

| Published : May 30 2024, 12:50 AM IST / Updated: May 30 2024, 04:56 AM IST

ಕಾರಿನಲ್ಲಿದ್ದ ₹7 ಲಕ್ಷ ಎಗರಿಸಲು ವಿಫಲ ಯತ್ನ..!
Share this Article
  • FB
  • TW
  • Linkdin
  • Email

ಸಾರಾಂಶ

ಕಾರಿನಲ್ಲಿದ್ದ7 ಲಕ್ಷ ರು. ನಗದು ಎಗರಿಸಲು ಹೋದ ಕಳ್ಳನನ್ನು ಹಿಡಿದ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೊಪ್ಪಿಸಿದ ಘಟನೆ ನಗರದ ಹೊರ ವಲಯದ ಅಮರಾವತಿ ಹೊಟೇಲ್ ಬಳಿ ನಡೆದಿದೆ. 

  ಮಂಡ್ಯ :  ಕಾರಿನಲ್ಲಿದ್ದ 7  ಲಕ್ಷ ರು. ನಗದು ಎಗರಿಸಲು ಹೋದ ಕಳ್ಳನನ್ನು ಹಿಡಿದ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೊಪ್ಪಿಸಿದ ಘಟನೆ ನಗರದ ಹೊರ ವಲಯದ ಅಮರಾವತಿ ಹೊಟೇಲ್ ಬಳಿ ನಡೆದಿದೆ. 

ಆಂಧ್ರ ಮೂಲದ ವ್ಯಕ್ತಿಯೊಬ್ಬ (ಹೆಸರು ತಿಳಿದುಬಂದಿಲ್ಲ) ಸಾರ್ವಜನಿಕರ ಕೈ ಸಿಕ್ಕಿಬಿದ್ದಿದ್ದು, ಆತನನ್ನು ಸಾರ್ವಜನಿಕರು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ನಡೆದಿದ್ದಿಷ್ಟು: 

ಕಲ್ಲಹಳ್ಳಿ ಬಡಾವಣೆಯ ಮಧು ಎಂಬುವರು ನಗರ ಕೆನರಾ ಬ್ಯಾಂಕ್‌ನಲ್ಲಿ 7 ಲಕ್ಷ ರು. ಡ್ರಾ ಮಾಡಿಕೊಡು ತಮ್ಮ ಬ್ರೀಜಾ (ಕೆ.ಎ.11-ಎಂ. 9141) ಕಾರಿನಲ್ಲಿ ಅಮರಾವತಿ ಹೊಟೇಲ್ ಬಳಿ ತಮ್ಮ ಸ್ನೇಹಿತರನ್ನು ಭೇಟಿ ಮಾಡಲು ಆಗಮಿಸಿದ್ದರು.

ಕಾರನ್ನು ಹೊಟೇಲ್ ಹಿಂಭಾಗದ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿ ಸ್ನೇಹಿತರನ್ನು ಭೇಟಿ ಮಾಡಲು ತೆರಳಿದ್ದರು. ಸ್ನೇಹಿತರನ್ನು ಭೇಟಿ ಮಾಡಿ ವಾಪಸ್‌ ಬರುವಷ್ಟರಲ್ಲಿ ಆರೋಪಿ ಕಾರಿನ ಕಿಟಕಿಯ ಗಾಜನ್ನು ಒಡೆದು ಕಾರಿನೊಳಗೆ ನುಗ್ಗಿ ಹಣಕ್ಕಾಗಿ ಹುಡುಕಾಟ ನಡೆಸಿದ್ದಾನೆ. ಆದರೆ, ಹಣ ಆತನ ಕೈಗೆ ಸಿಗಲಿಲ್ಲ.

ಮಧು ಅವರು ವಾಪಸ್‌ ಬಂದು ಕಾರಿನೊಳಗೆ ಹುಡುಕುತ್ತಿದ್ದ ಕಳ್ಳನನ್ನು ಕಂಡು ಆತನನ್ನ ಹಿಡಿಯಿರಿ ಎಂದು ಕಿರುಚಿದ್ದಾರೆ. ತಕ್ಷಣ ಎಚ್ಚೆತ್ತ ಕಳ್ಳ ಹೋಟೆಲ್‌ನ ಕಾಂಪೌಂಡ್ ಗೋಡೆ ಹಾರಿ ಪರಾರಿಯಾಗಲು ಯತ್ನಿಸಿದ್ದ. ಮಧು ಅವರ ಕಿರುಚಾಟ ಆಲಿಸಿದ ಸಾರ್ವಜನಿಕರು ಕಳ್ಳನನ್ನು ಹಿಡಿದು ಹಿಗ್ಗಾ ಮುಗ್ಗಾ ಥಳಿಸಿದರು.

ಕಾರಿನೊಳಗೆ ಚಾಲಕನ ಸೀಟಿನ ಕೆಳಗೆ ಹಣ ಇಟ್ಟಿದ್ದರಿಂದ ಹಣ ಆತನ ಕೈಗೆ ಸಿಗಲಿಲ್ಲ. ಬಳಿಕ ಆರೋಪಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದರು. ಈ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.