ಮಂಡ್ಯದಲ್ಲಿ ವನ್ಯಜೀವಿ ಬೇಟೆಗಾರನ ಬಂಧನ...!

| Published : May 12 2024, 01:23 AM IST / Updated: May 12 2024, 06:26 AM IST

ಸಾರಾಂಶ

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಟಿ.ಬೆಕ್ಕುಪ್ಪೆ ಗ್ರಾಮದ ಚಿಕ್ಕ ರಂಗಯ್ಯನ ಪುತ್ರ ಬಿ.ಸಿ.ಶಿವರಾಜು (33) ಬಂಧಿತ ಆರೋಪಿ. ಈತನಿಂದ ಬೇಟೆಯಾಡಿದ್ದ ನಾಲ್ಕು ಮೊಲ. ಒಂದು ಕಾಡುಬೆಕ್ಕು ಹಾಗೂ ಬೇಟೆಗೆ ಬಳಸಿದ್ದ ನಾಡ ಬಂದೂಕು ಮತ್ತು ಕಾರೊಂದನ್ನು ವಶಪಡಿಸಿಕೊಳ್ಳಲಾಗಿದೆ.  

 :  ವನ್ಯ ಜೀವಿಗಳನ್ನು ಬೇಟೆಯಾಡಲು ಬಂದಿದ್ದ ರಾಮನಗರ ಮೂಲದ ವ್ಯಕ್ತಿಯನ್ನು ಗ್ರಾಮಸ್ಥರೇ ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳ ವಶಕ್ಕೆ ಒಪ್ಪಿಸಿರುವ ಘಟನೆ ತಾಲೂಕಿನ ಆತಗೂರು ಹೋಬಳಿಯ ಕುರಿದೊಡ್ಡಿ ಗ್ರಾಮದಲ್ಲಿ ಶನಿವಾರ ಜರುಗಿದೆ.

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಟಿ.ಬೆಕ್ಕುಪ್ಪೆ ಗ್ರಾಮದ ಚಿಕ್ಕ ರಂಗಯ್ಯನ ಪುತ್ರ ಬಿ.ಸಿ.ಶಿವರಾಜು (33) ಬಂಧಿತ ಆರೋಪಿ. ಈತನಿಂದ ಬೇಟೆಯಾಡಿದ್ದ ನಾಲ್ಕು ಮೊಲ. ಒಂದು ಕಾಡುಬೆಕ್ಕು ಹಾಗೂ ಬೇಟೆಗೆ ಬಳಸಿದ್ದ ನಾಡ ಬಂದೂಕು ಮತ್ತು ಕಾರೊಂದನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಶಿವರಾಜು ತನ್ನ ಮೂವರು ಸಹಚರರೊಂದಿಗೆ ಕಾರಿನಲ್ಲಿ ಬಂದು ಕುರುದೊಡ್ಡಿ ಗ್ರಾಮದ ಹೊರವಲಯದ ರೈತರ ಜಮೀನಿನಲ್ಲಿ ಮೊಲ, ಕಾಡುಬೆಕ್ಕು ಸೇರಿದಂತೆ ವನ್ಯಪ್ರಾಣಿಗಳನ್ನು ಬೇಟೆಯಾಡಲು ಹೊಂಚು ಹಾಕುತ್ತಿದ್ದರು. ಇತ್ತೀಚೆಗೆ ಗ್ರಾಮದಲ್ಲಿ ರೈತರ ಜಮೀನಿನಲ್ಲಿದ್ದ ನೀರಾವರಿ ಪಂಪ್ ಸೆಟ್ಟುಗಳ ಕಳ್ಳತನ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಅನುಮಾನಗೊಂಡ ಗ್ರಾಮಸ್ಥರು ಇವರು ಪಂಪ್ ಸೆಟ್‌ಗಳ ಕಳ್ಳರಿರಬೇಕು ಎಂದು ಆರೋಪಿ ಶಿವರಾಜ್ ನನ್ನು ಹಿಡಿದು ಕೆಸ್ತೂರು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ನಂತರ ಪೊಲೀಸರು ಬರುವಷ್ಟರಲ್ಲಿ ಉಳಿದ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ. ನಂತರ ಪೊಲೀಸರು ಶಿವರಾಜನನ್ನು ವಿಚಾರಣೆ ನಡೆಸಿದಾಗ ವನ್ಯಪ್ರಾಣಿಗಳ ಬೇಟೆ ಪ್ರಕರಣ ಬೆಳಕಿಗೆ ಬಂದಿದೆ.

ಬಳಿಕ ಸ್ಥಳಕ್ಕೆ ಧಾವಿಸಿದ ವಲಯ ಅರಣ್ಯ ಅಧಿಕಾರಿ ಗವಿಯಪ್ಪ, ಉಪ ವಲಯ ಅರಣ್ಯ ಅಧಿಕಾರಿ ರವಿ, ಸಿಬ್ಬಂದಿ ಸುದರ್ಶನ್, ರಮೇಶ್, ಮೋಟಪ್ಪ ಅವರು ಆರೋಪಿ ಶಿವರಾಜನನ್ನು ವಶಕ್ಕೆ ತೆಗೆದುಕೊಂಡು ಈತನ ವಿರುದ್ಧ ವನ್ಯಪ್ರಾಣಿ ಸಂರಕ್ಷಣಾ ಕಾಯ್ದೆ 9ರ ಅನ್ವಯ ಪ್ರಕರಣ ದಾಖಲು ಮಾಡಿಕೊಂಡ ನಂತರ ಆರೋಪಿಯನ್ನು ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.