ಸಾರಾಂಶ
ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಕೊಡಿಸುವುದಾಗಿ ಆಮಿಷವೊಡ್ಡಿ ಅಪ್ರಾಪ್ತ ಯೋಗ ಪಟುವಿಗೆ ಲೈಂ*ಕ ಕಿರುಕುಳ ನೀಡಿದ ಆರೋಪದಡಿ ಖಾಸಗಿ ಯೋಗ ತರಬೇತಿ ಸಂಸ್ಥೆಯ ಕಾರ್ಯದರ್ಶಿಯೊಬ್ಬನನ್ನು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು : ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಕೊಡಿಸುವುದಾಗಿ ಆಮಿಷವೊಡ್ಡಿ ಅಪ್ರಾಪ್ತ ಯೋಗ ಪಟುವಿಗೆ ಲೈಂ*ಕ ಕಿರುಕುಳ ನೀಡಿದ ಆರೋಪದಡಿ ಖಾಸಗಿ ಯೋಗ ತರಬೇತಿ ಸಂಸ್ಥೆಯ ಕಾರ್ಯದರ್ಶಿಯೊಬ್ಬನನ್ನು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರ್‌ಆರ್ ನಗರ ನಿವಾಸಿ ನಿರಂಜನ್ ಮೂರ್ತಿ ಬಂಧಿತನಾಗಿದ್ದು, ಈತನ ವಿರುದ್ಧ 17 ವರ್ಷದ ಅಪ್ರಾಪ್ತ ಬಾಲಕಿ ನೀಡಿದ ದೂರಿನ ಮೇರೆಗೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿದೇಶದಲ್ಲೂ ಲೈಂ*ಕ ದೌರ್ಜನ್ಯ :
2019ರಿಂದ ಯೋಗಗುರು ನಿರಂಜನ್ ಮೂರ್ತಿಗೆ ಸಂತ್ರಸ್ತೆ ಪರಿಚಯವಿದ್ದಳು. 2021 ರಿಂದ ಯೋಗ ಸ್ಪರ್ಧೆಯಲ್ಲಿ ಆಕೆ ಭಾಗವಹಿಸುತ್ತಿದ್ದಳು. 2023ರಲ್ಲಿ ಯೋಗಸ್ಪರ್ಧೆಗೆ ಥಾಯ್ಲೆಂಡ್ ದೇಶಕ್ಕೆ ನಿರಂಜನ್ ಜತೆ ಸಂತ್ರಸ್ತೆ ತೆರಳಿದ್ದಳು. ಆ ವೇಳೆ ಆಕೆಗೆ ಲೈಂ*ಕವಾಗಿ ಆರೋಪಿ ಕಿರುಕುಳ ನೀಡಿದ್ದ. ಇದರಿಂದ ಬೇಸತ್ತು ಯೋಗ ಸ್ಪರ್ಧೆಗಳಿಂದ ಆಕೆ ದೂರವಾಗಿದ್ದಳು. ಇದಾದ ನಂತರ ಬೇರೆ ಸಂಸ್ಥೆಗೆ ಆಕೆ ಸೇರಿದ್ದಳು. ಆದರೆ ಆ ಖಾಸಗಿ ಸಂಸ್ಥೆ ಸಹ ನಿರಂಜನ್ ಒಡೆತನದಲ್ಲಿತ್ತು. ಅಲ್ಲೂ ಲೈಂ*ಕ ಕಿರುಕುಳ ಮುಂದುವರಿಸಿದ್ದಾನೆ. ನಿನಗೆ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಶಸ್ತಿ ಕೊಡಿಸುತ್ತೇನೆ ಹಾಗೂ ಪ್ಲೇಸ್ ಮೆಂಟ್ ಕೊಡಿಸುವುದಾಗಿ ಆಮಿಷವೊಡ್ಡಿ ಬಾಲಕಿ ಮೇಲೆ ಆರೋಪಿ ಲೈಂ*ಕ ದೌರ್ಜನ್ಯ ನಡೆಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಕಾಮಚೇಷ್ಟೆ:
ಆರ್.ಆರ್. ನಗರದಲ್ಲಿ ಯೋಗ ತರಬೇತಿ ಕೇಂದ್ರ ನಡೆಸುತ್ತಿದ್ದ ನಿರಂಜನ್, ಅದೇ ಕಟ್ಟಡದ ಮೇಲಿನ ಹಂತದ ಮನೆಯಲ್ಲಿ ನೆಲೆಸಿದ್ದ. ತನ್ನ ಬಳಿ ಯೋಗ ಕಲಿಕೆ ಬರುತ್ತಿದ್ದ ಹಲವು ಮಹಿಳೆಯರು ಹಾಗೂ ಬಾಲಕಿಯರಿಗೆ ‘ಆಸನ’ ಹೇಳುವ ನೆಪದಲ್ಲಿ ಮೈ-ಕೈ ಮುಟ್ಟಿ ಕುಚೇಷ್ಟೆ ಮಾಡುತ್ತಿದ್ದ. ಈತನಿಂದ ಹಲವು ಮಹಿಳೆಯರು ಶೋಷಣೆಗೆ ಒಳಗಾಗಿದ್ದಾರೆ. ಆದರೆ ಮರ್ಯಾದೆಗೆ ಅಂಜಿ ಸಂತ್ರಸ್ತೆಯರು ದೂರು ಕೊಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.
ರಾಜಕಾರಣಿಗಳಿಗೂ ಯೋಗ ಗುರು:
ಬೆಂಗಳೂರಿನ ಹಿರಿಯ ಬಿಜೆಪಿ ನಾಯಕರೊಬ್ಬರು ಸೇರಿದಂತೆ ಕೆಲ ಪ್ರಮುಖ ರಾಜಕಾರಣಿಗಳಿಗೂ ನಿರಂಜನ್ ಯೋಗ ಗುರು ಆಗಿದ್ದ ಎನ್ನಲಾಗಿದೆ. ರಾಜಕಾರಣಿಗಳ ಈ ಸ್ನೇಹವನ್ನು ಬಳಸಿಕೊಂಡು ಆತ ಪ್ರಭಾವಿ ಎನ್ನುವಂತೆ ಬಿಂಬಿಸಿಕೊಳ್ಳುತ್ತಿದ್ದ. ಈ ಪ್ರಭಾವದಿಂದ ನಿರಂಜನ್ ವಿರುದ್ಧ ದೂರು ನೀಡಲು ಸಂತ್ರಸ್ತೆಯರು ಹಿಂಜರಿದಿದ್ದಾರೆ ಎಂದು ತಿಳಿದು ಬಂದಿದೆ.
ಪತ್ನಿ-ಮಗ ದೂರ:
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ನಿರಂಜನ್ ನಿಂದ ಆತನ ಮಗನನ್ನು ಕರೆದುಕೊಂಡು ಆತನ ಪತ್ನಿ ಪ್ರತ್ಯೇಕವಾಗಿದ್ದಾರೆ. ತನ್ನ ಪತಿಯ ರಾಸಲೀಲೆಗಳ ಬಗ್ಗೆ ತಿಳಿದು ಬೇಸರಗೊಂಡು ಆಕೆ ದೂರವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.