ಸಾರಾಂಶ
ಧ್ರುವ ಸರ್ಜಾ ಅವರ ವಿರುದ್ಧ ಮುಂಬೈನಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ದರ್ಶನ್ ಅಭಿನಯದ ‘ಜಗ್ಗುದಾದ’ ಸಿನಿಮಾ ನಿರ್ದೇಶಿಸಿದ್ದ ರಾಘವೇಂದ್ರ ಹೆಗ್ಡೆ ಅವರು ಧ್ರುವ ಸರ್ಜಾ ಅವರು ರೂ.3.15 ಕೋಟಿ ವಂಚನೆ ಮಾಡಿದ್ದಾರೆಂದು ಆರೋಪಿಸಿ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು
ಬೆಂಗಳೂರು : ಧ್ರುವ ಸರ್ಜಾ ಅವರ ವಿರುದ್ಧ ಮುಂಬೈನಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ದರ್ಶನ್ ಅಭಿನಯದ ‘ಜಗ್ಗುದಾದ’ ಸಿನಿಮಾ ನಿರ್ದೇಶಿಸಿದ್ದ ರಾಘವೇಂದ್ರ ಹೆಗ್ಡೆ ಅವರು ಧ್ರುವ ಸರ್ಜಾ ಅವರು ರೂ.3.15 ಕೋಟಿ ವಂಚನೆ ಮಾಡಿದ್ದಾರೆಂದು ಆರೋಪಿಸಿ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ.
ನಿರ್ದೇಶಕ, ನಿರ್ಮಾಪಕ ರಾಘವೇಂದ್ರ ದೂರಿನಲ್ಲಿ, ‘ತಾನು ಆರ್‌ಎಚ್ ಎಂಟರ್‌ಟೈನ್‌ಮೆಂಟ್ ಮತ್ತು ಆರ್9 ಎಂಟರ್‌ಟೈನ್‌ಮೆಂಟ್ ಸಂಸ್ಥೆಗಳನ್ನು ಹೊಂದಿದ್ದು, ಜಗ್ಗುದಾದ ಸಿನಿಮಾ ಬಳಿಕ ಸಿನಿಮಾ ಮಾಡಲು ಧ್ರುವ ಸರ್ಜಾ ಅವರನ್ನು ಸಂಪರ್ಕಿಸಿದ್ದೆ. ಸೈನಿಕರ ಕಥಾವಸ್ತುವಿರುವ ಸಿನಿಮಾ ಮಾಡುವ ಕುರಿತು ಮಾತುಕತೆ ಆಗಿದ್ದು, 2018ರಿಂದ 2021ರ ಮಧ್ಯೆ ರೂ.3.15 ಕೋಟಿ ಹಣ ಎಂಟು ಕಂತುಗಳಲ್ಲಿ ನೀಡಿದ್ದೆ. 2019 ಫೆಬ್ರವರಿಯಲ್ಲಿ ಒಪ್ಪಂದ ಆಗಿದ್ದು, ನಂತರ ಆ ಸಿನಿಮಾ ಮುಂದಕ್ಕೆ ಹೋಗಿರಲಿಲ್ಲ. ಧ್ರುವ ಅವರು ಹಣ ಹಿಂತಿರುಗಿಸಲು ನಿರಾಕರಿಸಿದ್ದು, ಅವರು ಬಡ್ಡಿ ಸಮೇತ ರೂ.9.58 ಕೋಟಿ ಹಣ ಹಿಂತಿರುಗಿ ನೀಡುವಂತೆ ಮಾಡಬೇಕು’ ಎಂದು ತಿಳಿಸಿದ್ದಾರೆ.
ಆದರೆ ಧ್ರುವ ಸರ್ಜಾ ಆಪ್ತರಾದ ಅಶ್ವಿನ್ ಅವರು, ‘ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ. ನಾವು ಅವರ ಬಳಿ ಸಾಲ ಪಡೆದಿಲ್ಲ. ಮುಂಗಡ ಪಡೆದಿದ್ದೇವೆ. ಸಿನಿಮಾ ಮಾಡಲ್ಲ ಅಂತ ಹೇಳಿಲ್ಲ, ದುಡ್ಡು ವಾಪಸ್ ಕೊಡಲ್ಲ ಅಂದಿಲ್ಲ. ಮುಂದೆ ಕಾನೂನು ಪ್ರಕಾರವೇ ಹೆಜ್ಜೆ ಇಡುತ್ತೇವೆ’ ಎಂದಿದ್ದಾರೆ.
2018ರಲ್ಲಿ ರಾಘವೇಂದ್ರ ಅವರ ಆರ್.ಎಚ್.ಎಂಟರ್‌ಟೈನ್‌ಮೆಂಟ್ ಮತ್ತು ನಂದಿನಿ ಎಂಟರ್‌ಪ್ರೈಸಸ್‌ನಿಂದ ರೂ.3.10 ಕೋಟಿ ಮುಂಗಡ ಹಣ ಬಂದಿತ್ತು. ನಾವು ಒಂದು ವರ್ಷದ ಒಳಗೆ 20 ಲಕ್ಷ ರು. ಅನ್ನು ನಂದಿನಿ ಎಂಟರ್‌ಪ್ರೈಸಸ್‌ಗೆ ಹಿಂತಿರುಗಿಸಿದ್ದೆವು. ತರುವಾಯ ಅವರು ಕತೆ ಸಿದ್ಧವಿಲ್ಲದೆ ಸಿನಿಮಾ ಮಾಡಲು ತಡ ಮಾಡುತ್ತಲೇ ಬಂದರು. 2023ರಲ್ಲಿ ಅರ್ಧ ಕತೆ ಕಳುಹಿಸಿದ್ದರು. ಇತ್ತೀಚೆಗೆ ಕನ್ನಡದಲ್ಲಿ ಬೇಡ ತಮಿಳು, ತೆಲುಗಲ್ಲಿ ಮಾಡೋಣ ಎಂದು ಬಂದಿದ್ದರು. ಧ್ರುವ ಅವರು ಅದಕ್ಕೊಪ್ಪದೆ ಕನ್ನಡದಲ್ಲಿ ಮಾಡೋಣ ಎಂದು ಹೇಳಿದ್ದರು. ಜೂ.28ರಂದು ಬಂದು ತೆಲುಗಲ್ಲಿ ಮಾಡೋಣ ಎಂದು ಮತ್ತೆ ಬಂದರು. ಧ್ರುವ ಆಗಲೂ ಕನ್ನಡದಲ್ಲೇ ಸಿನಿಮಾ ಮಾಡೋಣ ಅಂದಿದ್ದರು. ಇದೀಗ ಜು.10ರಂದು ನಮಗೆ ಅಂಬೋಲಿ ಪೊಲೀಸ್ ಠಾಣೆಯಿಂದ ನೋಟಿಸ್ ಬಂತು. ನಾವು ರಾಘವೇಂದ್ರ ಹೆಗಡೆಯವರಿಗೆ ಕಾಲ್ ಮಾಡಿದರೆ ಅವರು ಸ್ವೀಕರಿಸಲಿಲ್ಲ.