ನನ್ನ ವಿರೋಧಿಗಳಿಗೂ ನಾನು ಅಂದರೆ ಇಷ್ಟ: ಮಾರ್ಟಿನ್ ಸಿನಿಮಾ ಅಂದುಕೊಂಡಂತೆ ಯಶಸ್ವಿ - ಧ್ರುವ ಸರ್ಜಾ

| Published : Oct 16 2024, 12:41 AM IST / Updated: Oct 16 2024, 07:40 AM IST

ಸಾರಾಂಶ

ಮಾರ್ಟಿನ್ ಸಿನಿಮಾ ಅಂದುಕೊಂಡಂತೆ ಯಶಸ್ವಿಯಾಗಿ ಪ್ರದರ್ಶನ ಆಗುತ್ತಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

 ಸಿನಿವಾರ್ತೆ

‘ನಮ್ಮ ಚಿತ್ರವನ್ನು ನೋಡಿದ ಎಲ್ಲರೂ ಮೆಚ್ಚಿಕೊಳ್ಳುತ್ತಿದ್ದಾರೆ. ಎಲ್ಲಾ ಭಾಷೆಗಳಲ್ಲೂ ಒಳ್ಳೆಯ ಮಾತುಗಳು ಕೇಳಿ ಬರುತ್ತಿದೆ. ಸಿನಿಮಾ ಬಿಡುಗಡೆ ದಿನವೇ ‘ಮಾರ್ಟಿನ್‌’ ಬಗ್ಗೆ ಕೆಲವರು ಸುಳ್ಳು ಪ್ರಚಾರ ಮಾಡಿದ್ದಾರೆ ಎಂದು ಕೇಳಲ್ಪಟ್ಟೆ. ಅವರು ಬೇರೆ ಹೀರೋಗಳ ಅಭಿಮಾನಿಗಳು ಅಥವಾ ಬೇರೆ ಯಾರೇ ಆಗಿರಬಹುದು, ನನ್ನ ದ್ವೇಷಿಸುತ್ತಿರುವ ಅವರಿಗೂ ನಾನು ಅಂದರೆ ತುಂಬಾ ಇಷ್ಟ ಇರಬಹುದು. ಹೀಗಾಗಿ ಸಮಯ ಹಾಗೂ ಹಣ ವೆಚ್ಚ ಮಾಡಿಕೊಂಡು ಬಂದು ನನ್ನ ಸಿನಿಮಾ ವಿರುದ್ಧ ಮಾತನಾಡುತ್ತಿದ್ದಾರೆ. ಟ್ರೋಲ್‌ ಮಾಡುತ್ತಿದ್ದಾರೆ. ಆದರೆ, ಸಿನಿಮಾ ಹೇಗಿದೆ ಎಂಬುದು ಜನರೇ ಹೇಳುತ್ತಿದ್ದಾರೆ. ಸುಳ್ಳು ಪ್ರಚಾರ ಮತ್ತು ಟ್ರೋಲ್‌ಗಳಿಗೆ ನಮ್ಮ ಸಿನಿಮಾ ಜಗ್ಗಲ್ಲ’.

- ಹೀಗೆ ಹೇಳಿದ್ದು ಧ್ರುವ ಸರ್ಜಾ. ಉದಯ್‌ ಕೆ ಮಹ್ತಾ ನಿರ್ಮಾಣದ, ಎಪಿ ಅರ್ಜುನ್ ನಿರ್ದೇಶನದ ‘ಮಾರ್ಟಿನ್‌’ ಸಿನಿಮಾದ ಸಕ್ಸೆಸ್‌ ಮೀಟ್‌ನಲ್ಲಿ ಅವರು ಮಾತನಾಡಿದರು.

ಎ ಪಿ ಅರ್ಜುನ್‌, ‘ಸಿನಿಮಾ ಕೆಲಸಗಳ ಒತ್ತಡದಿಂದ ನಾನು ಮತ್ತು ನಿರ್ಮಾಪಕರು ಒಟ್ಟಿಗೆ ಸಿನಿಮಾ ಪ್ರಚಾರದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿಲ್ಲ. ನಾವು ಏನೇ ಜಗಳಾಡಿದರೂ ಅದು ಸಿನಿಮಾಗಾಗಿ ಮಾತ್ರ’ ಎಂದರು.

ನಿರ್ಮಾಪಕ ಉದಯ್ ಕೆ ಮೆಹ್ತಾ ಪುತ್ರ ಸೂರಜ್ ಮೆಹ್ತಾ, ‘ನಮ್ಮ ನಿರೀಕ್ಷೆಯಂತೆ ‘ಮಾರ್ಟಿನ್‌’ ಕಲೆಕ್ಷನ್‌ ಮಾಡುತ್ತಿದೆ. ಮುಂದಿನ ವಾರ ಗಳಿಕೆಯ ಕುರಿತು ಅಂಕಿ ಸಂಖ್ಯೆಗಳನ್ನು ಕೊಡುತ್ತೇನೆ’ ಎಂದರು. ನಟಿ ವೈಭವಿ ಶಾಂಡಿಲ್ಯ, ಛಾಯಾಗ್ರಾಹಕ ಸತ್ಯ ಹೆಗಡೆ ಇದ್ದರು.